“ಅಧಿಕಾರಕ್ಕೆ ಬರುವ ಪಕ್ಷಗಳು ಜನರ ಸಮಸ್ಯೆಗಳನ್ನು ಪರಿಹರಿಸದೆ, ತಲೆಮರೆಸಿಕೊಳ್ಳುವ ಕೆಲಸ ಮಾಡುತ್ತಿವೆ. ಅತಿಹೆಚ್ಚು ಉದ್ಯೋಗಗಳನ್ನು ಸೃಷ್ಟಿಸುವ ಕೃಷಿ ಕ್ಷೇತ್ರವನ್ನು ಸರ್ಕಾರಗಳು ಕಡೆಗಣಿಸುತ್ತಿವೆ” ಎಂದು ಕರ್ನಾಟಕ ಸರ್ವೋದಯ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಚಾಮರಸ ಮಾಲಿ ಪಾಟೀಲ ಹೇಳಿದರು.
ವಿಜಯಪುರ ನಗರದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಸಮಿತಿಯಿಂದ ನಡೆದ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ಅವರು, ಬೆಲೆ ಏರಿಕೆ, ನಿರುದ್ಯೋಗ, ಬಡತನ, ರೈತರ ಆತ್ಮಹತ್ಯೆಯಂತಹ ಸಮಸ್ಯೆಗಳಿಗೆ ಪರಿಹಾರ ಪರ್ಯಾಯ ಪಕ್ಷದ ಅವಶ್ಯಕತೆಯಿದ್ದು, ನಾವೆಲ್ಲರೂ ಸಂಘಟಿತರಾಗಿ ಕರ್ನಾಟಕ ಸರ್ವೋದಯ ಪಕ್ಷವನ್ನು ಬೆಳೆಸಬೇಕಿದೆ ಎಂದು ಕರೆ ನೀಡಿದರು.
“ಬಿಜೆಪಿ ಅಧಿಕಾರಕ್ಕೆ ಬರುವ ಮೊದಲು ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ರೈತರ ಸಾಲಮನ್ನಾ, ಸ್ವಾಮಿನಾಥನ್ ವರದಿ ಪ್ರಕಾರ ಉತ್ತಮ ಬೆಂಬಲ ಬೆಲೆ ನೀಡುತ್ತೇವೆ. ರೈತರ ಆದಾಯ ದ್ವಿಗುಣಗೊಳಿಸುತ್ತೇವೆ ಎಂದಿದ್ದರು. ಆದರೇ ಅದರ ತದ್ವಿರುದ್ಧವಾಗಿ ಪೆಟ್ರೋಲ್, ಡಿಸೇಲ್, ಬೀಜ, ರಸಗೊಬ್ಬರದ ದರ ಹೆಚ್ಚಳ ಮಾಡಿದ್ದಾರೆ. ಬೆಂಬಲ ಬೆಲೆ ನೀಡುವಲ್ಲಿಯೂ ಸಂಪೂರ್ಣ ವಿಫಲರಾಗಿದ್ದಾರೆ. ಆ ಮೂಲಕ ರೈತಾಪಿ ವರ್ಗಕ್ಕೆ ಅನ್ಯಾಯ ಎಸಗಿದ್ದಾರೆ” ಎಂದು ಚಾಮರಸ ಮಾಲಿ ಪಾಟೀಲ ಕಿಡಿಕಾರಿದರು.
ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಮಾತನಾಡಿ, “ರಾಜ್ಯ ರೈತ ಸಂಘವು ಗಾಂಧೀಜಿ, ಅಂಬೇಡ್ಕರ್, ಬಸವಣ್ಣನವರ ಜನಪರ ಸಿದ್ದಾಂತಗಳ ಮೇಲೆ ಕಾರ್ಯ ನಿರ್ವಹಿಸುತ್ತಿದೆ. ಆದರೇ ಪ್ರಸ್ತುತ ರಾಜಕೀಯ ಪಕ್ಷಗಳು ಜನಪರ ಕೆಲಸ ಮಾಡುತ್ತಿಲ್ಲ. ವಾಮಮಾರ್ಗಗಳ ಮೂಲಕ ಅಧಿಕಾರಕ್ಕೆ ಬರುತ್ತಿವೆ” ಎಂದರು.
“ಅನೇಕ ವರದಿಗಳ ಪ್ರಕಾರ ರಾಜ್ಯದಲ್ಲಿ ಶೇ. 87ರಷ್ಟು ಜನರು ಪರ್ಯಾಯ ರಾಜಕಾರಣಬೇಕು ಎನ್ನುತ್ತಾರೆ. ಕಾರ್ಪೋರೆಟ್ ರಾಷ್ಟ್ರೀಯ ಪಕ್ಷಗಳು ನಾಗರಿಕ ಸಮಾಜದ ಸಮಸ್ಯೆಗಳನ್ನು ಪರಿಹರಿಸುವಲ್ಲಿ ವಿಫಲವಾಗಿವೆ. ರೈತರ, ಮಹಿಳೆಯರ, ದಲಿತರ ಉದ್ಧಾರಕ್ಕಾಗಿ ನಮ್ಮ ಪಕ್ಷ ಬೆಳೆಸುವ ಅವಶ್ಯಕತೆ ಇದೆ. ಕಾರ್ಪೋರೇಟ್ ಪರ ಇರುವ ಪಕ್ಷಗಳನ್ನು ದೂರವಿಟ್ಟು, ಜನಪರ ಪಕ್ಷವನ್ನು ಅಧಿಕಾರಕ್ಕೆ ತರಬೇಕಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಜನವಿರೋಧಿ ನೀತಿ ವಿರುದ್ಧ ಹೋರಾಡಲು ಕರ್ನಾಟಕ ಸರ್ವೋದಯ ಸಂಘಟಿಸಬೇಕು” ಎಂದರು.
ಇದನ್ನು ಓದಿದ್ದೀರಾ? ಚಿಕ್ಕನಾಯಕನಹಳ್ಳಿ | ಕೃಷಿ ಭೂಮಿಯಲ್ಲಿ ಟವರ್ ನಿರ್ಮಾಣ; ರೈತರು-ಕೆಪಿಟಿಸಿಎಲ್ ಅಧಿಕಾರಿಗಳ ನಡುವೆ ವಾಗ್ವಾದ
ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕಿರನ್ ಪೂಣಚ್ಚ, ಕರ್ನಾಟಕ ರಾಜ್ಯ ರೈತ ಸಂಘದ ವಿಜಯಪುರ ಜಿಲ್ಲಾಧ್ಯಕ್ಷ ಶಂಕರಗೌಡ ಹಿರೇಗೌಡರ, ಬಸನಗೌಡ ಧರ್ಮಗೊಂಡ, ಸಿದ್ದನಗೌಡ ಜಲಪೂರ, ಶಿವಶರಣ ಔರಾದಿ, ಬಾಪುಗೌಡ ಬಿರಾದಾರ, ಸಿದ್ರಾಮ ಜಂಗಮಶೆಟ್ಟಿ, ಗಿರೀಶ ಹಿರೇಮಠ್ ಉಪಸ್ಥಿತರಿದ್ದರು.
