ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿಯಲ್ಲಿ ಸಂಗನ ಬಸವ ಲಿಂಗಾಚಾರ್ಯ ಮಹಾಸ್ವಾಮಿಗಳ ಬೆಳ್ಳಿ ಮಹೋತ್ಸವದ ಅಂಗವಾಗಿ ನಡೆದ ರಥೋತ್ಸವ ಹಾಗೂ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
“ಮಾನವ ಧರ್ಮಕ್ಕೆ ಜಯವಾಗಲಿ, ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಎಂಬ ಸಂದೇಶ ಕೊಟ್ಟು ನಮ್ಮ ಬದುಕಿನಲ್ಲಿ ಬದಲಾವಣೆ ಹಾಗೂ ಚೈತನ್ಯ ತಂದಿರುವ ಈ ಪುಣ್ಯ ಭೂಮಿಯಲ್ಲಿ ನಿಮ್ಮನ್ನು ಭೇಟಿ ಮಾಡುತ್ತಿರುವುದು ನನ್ನ ಭಾಗ್ಯ” ಎಂದು ಹೇಳಿದರು.
“ಇದು ಬಸವಣ್ಣನ ಜನ್ಮಭೂಮಿ. ಈ ವರ್ಷ ನಮ್ಮ ಸರ್ಕಾರ ಬಸವಣ್ಣನವರಿಗೆ “ಕರ್ನಾಟಕದ ಸಾಂಸ್ಕೃತಿಕ ನಾಯಕ” ಎಂಬ ಬಿರುದು ನೀಡಿದೆ. ನಾವೆಲ್ಲರೂ ಧರ್ಮದಲ್ಲಿ ಮುಳುಗಿದ್ದೇವೆ. ಜಗತ್ತಿನಲ್ಲಿ ಯಾವುದೇ ಧರ್ಮವಾದರೂ ಶಾಂತಿ, ಸೌಹಾರ್ದತೆ ಮೇಲೆ ನಂಬಿಕೆ ಇಟ್ಟು ಬದುಕುತ್ತಿದ್ದೇವೆ. ಧರ್ಮ ಯಾವುದಾದರೂ ತತ್ವವೊಂದೇ, ನಾಮ ನೂರಾದರೂ ದೈವವೊಂದೆ, ಪೂಜೆ ನೂರಾದರೂ ಭಕ್ತಿಯೊಂದೆ, ಕರ್ಮ ಹಲವಾದರೂ ನಿಷ್ಠೆಯೊಂದೇ, ದೇವನೊಬ್ಬ ನಾಮ ಹಲವು. ನಾವು ಕಲ್ಲಿನಲ್ಲಿ, ಕಂಬದಲ್ಲಿ, ನೀರಿನಲ್ಲಿ ದೇವರನ್ನು ನೋಡುತ್ತೇವೆ. ನಾವು ಸಗಣಿಗೆ ಗರಿಕೆ ಹುಲ್ಲು ಸೇರಿಸಿ ಅದನ್ನು ದೇವರೆಂದು ಪೂಜಿಸುತ್ತೇವೆ. ಅಕ್ಕಿ ಜತೆ ಹರಿಷಿನ ಸೇರಿಸಿ ಮಂತ್ರಾಕ್ಷತೆ ಎಂದು ಪೂಜಿಸುತ್ತೇವೆ. ನಾವು ದೇವರನ್ನು ಪ್ರಕೃತಿಯ ಎಲ್ಲ ವಸ್ತುಗಳಲ್ಲೂ ದೇವರನ್ನು ಕಾಣುತ್ತೇವೆ” ಎಂದರು.
“ಕೊಳಲಿನಲ್ಲಿ ಉತ್ತಮ ನಾದ ಬರುತ್ತದೆ ಎಂದು ಬಂಬಿಗೆ ಗೊತ್ತಿರಲಿಲ್ಲ. ಅದೇ ರೀತಿ ಪ್ರತಿಯೊಬ್ಬರಲ್ಲೂ ಅವರದೇ ಆದ ಶಕ್ತಿ ಇರುತ್ತದೆ. ಮಗುಹುಟ್ಟಿದಾಗ ನಾವು ಸಂತೋಷ ಪಡುತ್ತೇವೆ. ಅದೇ ವ್ಯಕ್ತಿ ಸತ್ತಾಗ ಅವನ ಸಾಧನೆ ಬಗ್ಗೆ ಮಾತನಾಡುತ್ತೇವೆ. ಮನುಷ್ಯನ ಹುಟ್ಟು ಆಕಸ್ಮಿಕ, ಸಾವು ಅನಿವಾರ್ಯ, ಜನನ ಉಚಿತ ಮರಣ ಖಚಿತ, ಹುಟ್ಟು ಸಾವಿನ ಮಧ್ಯೆ ನಾವು ಏನು ಸಾಧನೆ ಮಾಡುತ್ತೇವೆ ಎಂಬುದು ಮುಖ್ಯ” ಎಂದು ತಿಳಿಸಿದರು.
“ಧರ್ಮ ಎಂದರೆ ಎಲ್ಲರ ಬದುಕು. ಧರ್ಮ ಎಂದರೆ ಎಲ್ಲರನ್ನು ಕಟ್ಟುವ ಮಾರ್ಗ. ಧರ್ಮ ಎಂದರೆ ಶಾಂತಿ, ಧರ್ಮ ಎಂದರೆ ಎಲ್ಲರನ್ನೂ ಪ್ರೀತಿಸುವ ಮಾರ್ಗ. ದೇವಾಲಯ ಎಂದರೆ ಭಕ್ತ ಹಾಗೂ ಭಗವಂತನ ನಡುವೆ ವ್ಯವಹಾರ ನಡೆಯುವ ಸ್ಥಳ. ನಮ್ಮ ಪ್ರಯತ್ನ ವಿಫಲವಾದರೂ ಪ್ರಾರ್ಥನೆ ವಿಫಲವಾಗುವುದಿಲ್ಲವೆಂದು ನಂಬಿದ್ದೇವೆ. ಇದೊಂದು ಧರ್ಮದ ಸಭೆ” ಎಂದು ಹೇಳಿದರು.
“ಜ್ಞಾನದಿಂದ ಅರಿವು ಮೂಡಿಸಬೇಕು. ಮೊನ್ನೆ ಗವಿಸಿದ್ದೇಶ್ವರನ ಜಾತ್ರೆಗೆ ಹೋಗಿದ್ದೆ. ಅಲ್ಲಿನ ಜನಸಾಗರ ನಾನು ಎಲ್ಲೂ ನೋಡಿರಲಿಲ್ಲ. ನನ್ನ ಬದುಕಿನಲ್ಲಿ ಅಷ್ಟು ದೊಡ್ಡ ಪ್ರಮಾಣದ ಶಿಸ್ತಿನ ಜಾತ್ರೆಯನ್ನು ನಾನು ಕಂಡಿರಲಿಲ್ಲ. ಇದಕ್ಕೆ ಅಲ್ಲಿನ ಶಕ್ತಿಯೇ ಕಾರಣ. ನಮ್ಮ ಹಿರಿಯರು ಮನೆ ಉಷಾರು, ಮಠ ಉಷಾರು ಎಂಬ ಬುದ್ಧಿಮಾತು ಹೇಳಿಕೊಂಡು ಬಂದಿದ್ದಾರೆ. ನೀವು ಸಹಕಾರ ನೀಡಿದರೆ ಸ್ವಾಮೀಜಿಗಳು ಏನಾದರೂ ಸಾಧನೆ ಮಾಡಲು ಸಾಧ್ಯ. ಬಸವಣ್ಣನವರು ಸಾಕ್ಷಿಗುಡ್ಡೆ ಬಿಟ್ಟು ಹೋಗಿದ್ದಕ್ಕೆ ನಾವು ಇದನ್ನು ಬಸವಣ್ಣನ ನಾಡೆಂದು ಕರೆಯುತ್ತೇವೆ” ಎಂದರು.
“ರಾಜಕಾರಣದಲ್ಲಿ ಧರ್ಮ ಇರಬೇಕು. ಧರ್ಮದಲ್ಲಿ ರಾಜಕಾರಣ ಇರಬಾರದು. ಇತ್ತೀಚೆಗೆ ಧರ್ಮದಲ್ಲಿ ರಾಜಕಾರಣ ಮಾಡುತ್ತಿದ್ದಾರೆ. ಈ ವೇದಿಕೆಯಲ್ಲಿ ಈ ಬಗ್ಗೆ ಹೆಚ್ಚು ಚರ್ಚೆ ಮಾಡುವುದು ಬೇಡ. ಈ ಜಿಲ್ಲೆಯಲ್ಲಿ ನಮ್ಮ ಸರ್ಕಾರಕ್ಕೆ ಹೆಚ್ಚಿನ ಶಾಸಕರನ್ನು ನೀಡಿ ಶಕ್ತಿ ನೀಡಿದ್ದೀರಿ” ಎಂದು ಹೇಳಿದರು.
“ನಿಮ್ಮ ಶಕ್ತಿಯಿಂದ ನಮ್ಮ ಸರ್ಕಾರ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದೆ. ಇದು ನೀವು ಕೊಟ್ಟ ಶಕ್ತಿಯಿಂದ ಮಾಡಿದ ಕಾರ್ಯವಾಗಿದೆ. ನಿಮ್ಮ ಬದುಕಿನಲ್ಲಿ ಆರ್ಥಿಕ ಹಾಗೂ ಮಾನಸಿಕ ಶಕ್ತಿ ತುಂಬಲು ಈ ಯೋಜನೆಗಳಿಗೆ ಸರ್ಕಾರ ಪ್ರತಿ ವರ್ಷ ₹60,000 ಕೋಟಿಯನ್ನು ನೀಡುತ್ತಾ ಬಂದಿದೆ” ಎಂದು ಹೇಳಿದರು.
“ರೈತನಿಗೆ ಸಂಬಳ, ಪಿಂಚಣಿ, ಬಡ್ತಿ, ಲಂಚವಿಲ್ಲ. ಈ ರೈತನನ್ನು ಬದುಕಿಸಬೇಕು. ನಮ್ಮ ಸರ್ಕಾರ ನಿಮ್ಮ ಸೇವೆಗೆ ಬದ್ಧವಾಗಿದೆ. ನಾನು ಇಂದು ನಿಮ್ಮ ಸನ್ಮಾನಕ್ಕಾಗಿ ಇಲ್ಲಿಗೆ ಬಂದಿಲ್ಲ, ನಿಮ್ಮ ಜತೆ ನಾನು ಇದ್ದೇನೆಂದು ಹೇಳಲು ಬಂದಿದ್ದೇನೆ. ಇತಿಹಾಸ ತಿಳಿಯದವನು ಇತಿಹಾಸ ಸೃಷ್ಟಿಸಲಾರ ಎಂದು ಹೇಳಿದ್ದಾರೆ. ನಾವು ಬದುಕಿನಲ್ಲಿ ನಡೆದು ಬಂದ ಹಾದಿಯೇ ಇತಿಹಾಸ. ನಾನು ಉಪಮುಖ್ಯಮಂತ್ರಿ ಎಂಬುದಕ್ಕಿಂತ ಈ ಮಠದ ಭಕ್ತ. ನಾನು ಪ್ರಮಾಣವಚನ ಸ್ವೀಕಾರ ಮಾಡುವಾಗ ಯಾರ ಹೆಸರಿನಲ್ಲಿ ಅಧಿಕಾರ ಸ್ವೀಕರಿಸಿದೆ ಎಂಬುದು ಎಲ್ಲರಿಗೂ ಗೊತ್ತಿದೆ” ಎಂದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಸರ್ಕಾರಿ ಶಾಲೆ ಜಾಗ ಒತ್ತುವರಿ ತೆರವುಗೊಳಿಸಲು ಒತ್ತಾಯ
“ಈ ಭಾಗದ ಶಾಸಕರ ಸರಳತೆಯನ್ನು ಗಮನಿಸಿ ಅವರನ್ನು ಮಗನಂತೆ ಸಾಕಿದ್ದೀರಿ. ಅವರು ರಾಜ್ಯಕ್ಕೆ ದೊಡ್ಡ ಆಸ್ತಿ. ಅವರು ಸರಳತೆಯ ಶಕ್ತಿ. ನಿಮ್ಮ ಸಹಕಾರ ಹೀಗೆ ಮುಂದುವರಿಯಲಿ ಎಂದು ಮನವಿ ಮಾಡುತ್ತೇನೆ” ಎಂದು ಹೇಳಿದರು.