ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕಿನ ಸೋಮನಾಳ ಗ್ರಾಮದಲ್ಲಿ 13 ಮನೆಗಳ ಮುಂದೆ 200 ಮಿಟರ್ ರಸ್ತೆ ಉದ್ದಕ್ಕೂ ನೀರು ಸಂಗ್ರಹವಾಗುತ್ತದೆ. ರಸ್ತೆ ದುರಸ್ತಿ ಹಾಗೂ ಮೂಲಸೌಕರ್ಯಗಳಿಲ್ಲದೆ ಸ್ಥಳೀಯರು ನಲುಗುತ್ತಿದ್ದಾರೆ.
ರಸ್ತೆಯಲ್ಲಿ ಯಾವಾಗಲೂ ನೀರು ಸಂಗ್ರಹವಾಗುವುದರಿಂದ ಸಾರ್ವಜನಿಕರಿಗೆ ಓಡಾಡಲು ತುಂಬಾ ಸಮಸ್ಯೆ ಎದುರಾಗುತ್ತಿದೆ. ಅಲ್ಲದೆ ಚರಂಡಿ, ಶೌಚಾಲಯ ಸೇರಿದಂತೆ ಇತರೆ ಮೂಸೌಕರ್ಯಗಳಿಲ್ಲದೆ ಇಲ್ಲಿನ ಜನಗಳು ನಿತ್ಯ ನರಕಯಾತನೆ ಅನುಭವಿಸುತ್ತಿದ್ದಾರೆ.
ಗ್ರಾಮದ ಸಂಗೊಳ್ಳಿ ರಾಯಣ್ಣ ವೃತ್ತ ಹಾಗೂ ಗಲ್ಲಿಗಳಲ್ಲಿನ ರಸ್ತೆಗಳು ಕೆಸರು ಗದ್ದೆಗಳಾಗಿದ್ದು, ಸಂಚಾರಕ್ಕೆ ತೀವ್ರ ಸಮಸ್ಯೆ ಉಂಟಾಗುತ್ತಿದೆ. ವಾಹನ ಸವಾರರು, ವಯೋವೃದ್ದರು ಓಡಾಡುವುದಕ್ಕೆ ಕಷ್ಟವಾಗುತ್ತಿದೆ. ಗ್ರಾಮದಲ್ಲಿ ಪಂಚಾಯಿತಿ ಇದ್ದರೂ ಕೂಡ ಸಮಸ್ಯೆ ಬಗೆಹರಿಯದೇ ಇರುವುದು ಶೋಚನೀಯ. ಗಬ್ಬೆದ್ದು ನಾರುವ ಚರಂಡಿಗಳು, ರಸ್ತೆಗಳ ಅವ್ಯವಸ್ತೆ ಸೇರಿದಂತೆ ಸುಸಜ್ಜಿತ ನೀರಿನ ನಳಗಳಿಲ್ಲ. ಅಲ್ಲದೆ ಹಲವು ಕ್ರಿಮಿಕೀಟಗಳ ಕಾಟದಲ್ಲಿ ಜೀವನ ನಡೆಸುವ ದುಃಸ್ಥಿತಿ ನಿರ್ಮಾಣವಾಗಿದೆ.

ಸ್ಥಳೀಯ ನಿವಾಸಿಗಳು ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ಚರಂಡಿ ಎತ್ತರದಲ್ಲಿರುವ ಕಾರಣ ನೀರು ಬೇರೆಡೆ ಪಾಸ್ ಆಗುವುದಕ್ಕೆ ಜಾಗವಿಲ್ಲದೆ ಮನೆಯ ಮುಂದೆ ನೀರು ನಿಲ್ಲುತ್ತದೆ. ಚರಂಡಿಯಲ್ಲಿ ಕಸ, ಪ್ಲಾಸ್ಟಿಕ್, ಕಟ್ಟಿಗೆ ಸೇರಿದಂತೆ ಅನೇಕ ಘನ ತ್ಯಾಜ್ಯ ತುಂಬಿ ಗಬ್ಬು ನಾರುತ್ತಿದೆ. ಇದರಿಂದ ಗ್ರಾಮಸ್ಥರಿಗೆ ಡೆಂಘೀ, ಮಲೇರಿಯಾ, ಚಿಕನ್ ಗುನ್ಯಾದಂತಹ ಸಾಂಕ್ರಾಮಿಕ ರೋಗಗಳು ಹರಡಿದ್ದು, ಆಸ್ಪತ್ರೆಗೂ ದಾಖಲಾಗಿದ್ದ ನಿದರ್ಶನಗಳಿವೆ” ಎಂದು ಅವಲತ್ತುಕೊಂಡರು.

ಸ್ಥಳೀಯ ನಿವಾಸಿ ಸಂಗಪ್ಪ ಮಾತನಾಡಿ, “ಮುದ್ದೇಬಿಹಾಳದಿಂದ ಮುರಾಳ ಮಾರ್ಗವಾಗಿ ಅಡವಿಸೋಮನಾಳ, ಡೊಂಕುಮರಡಿ, ಮನ್ಯಾಳ, ಕುರೇಕನಾಳ, ಕೊಡೇಕಲ್‌ಗೆ ಮುಖ್ಯರಸ್ತೆಯಾಗಿರುವದರಿಂದ ನಿತ್ಯವೂ ನೂರಾರು ವಾಹನಗಳು ಓಡಾಡುತ್ತವೆ. ವಾಹನಗಳು ರಭಸವಾಗಿ ಬಂದರೆ ರಸ್ತೆಯಲ್ಲಿ ನಿಂತಿರುವ ನೀರು ಮನೆಯೊಳಗಿ ನುಗ್ಗಿ ತೊಂದರೆ ಅನುಭವಿಸುವಂತಾಗಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.

ರೈತ ಸಂಘಟನೆ ಮುಖಂಡ ಬಿ ಎಲ್ ಬಿರಾದಾರ ಮಾತನಾಡಿ, “ಈ ಸಮಸ್ಯೆಯಿಂದ ವಯೋವೃದ್ಧರು 4 ರಿಂದ 5 ಮಂದಿ ಕೈಕಾಲು ಮುರಿದುಕೊಂಡಿದ್ದಾರೆ. ಗ್ರಾಮ ಪಂಚಾಯಿತಿ ಸದಸ್ಯರಿಗೆ ಮನವಿ ಮಾಡಿದರೂ ಸ್ಪಂದನೆ ಸಿಕ್ಕಿಲ್ಲ. ಹಾಗಾಗಿ ಇದರ ವಿರುದ್ದ ಹೋರಾಟ ಮಾಡಿ ನಮ್ಮ ಹಕ್ಕನ್ನು ಪಡೆಯುತ್ತೇವೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ತುಮಕೂರು | ಕೃಷಿ ಕೂಲಿ ಕಾರ್ಮಿಕ ವೃದ್ದ ದಂಪತಿಯನ್ನು ಕೂಡಿ ಹಾಕಿ ಮಾಲೀಕನಿಂದ ದೌರ್ಜನ್ಯ: ಆರೋಪ
ಗ್ರಾಮದ ಯುವಕ ಬಸವರಾಜ ಕೊಡೇಕಲ್ ಮಾತನಾಡಿ, “ಪಿಡಿಒ ವಿಜಯ್ ಮಹಾಂತೇತೇಶ್ ಅವರನ್ನು ಭೇಟಿಯಾಗಿ, ಸಮಸ್ಯೆಗಳನ್ನು ತಿಳಿಸಿದ್ದೆವು. ಒಂದೆರಡು ದಿನದಲ್ಲಿ ಸ್ವಚ್ಛ ಮಾಡಿಕೊಡುತ್ತೇವೆಂದು ಹೇಳಿದ್ದರು. ಮತ್ತೆ ಎರಡು ದಿನ ಬಿಟ್ಟು ಕೇಳಲು ಹೋದಾಗ ʼನಿಮ್ಮನಿಮ್ಮ ಮನೆ ಮುಂದೆ ನೀವೇ ಗರಸು ಹಾಕಿಕೊಳ್ಳಿ, ನಾವೇನು ಮಾಡೋಣʼವೆಂದು ಉಡಾಫೆ ಉತ್ತರ ನೀಡುತ್ತಾರೆ” ಎಂದು ಆರೋಪಿಸಿದರು.

ಸಮಸ್ಯೆಗಳಿಗೆ ಸಂಬಂಧಿಸಿದಂತೆ ಈ ದಿನ.ಕಾಮ್ ಪಿಡಿಒ ವಿಜಯ್ ಮಹಾಂತೇಶ್ ಅವರನ್ನು ಸಂಪರ್ಕಿಸಿದಾಗ ಮಾತನಾಡಿ, “ಈ ಸಮಸ್ಯ ಪರಿಹರಿಸಲು ಶೀಘ್ರದಲ್ಲೇ ಕ್ರಮಕೈಗೊಳ್ಳಲಾಗುವುದು. ರಸ್ತೆ ಸುತ್ತುವರೆದಂತೆ ಅಧಿಕಾರಿಗೆ ಗಮನ ಹರಿಸಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ” ಎಂದು ಭರವಸೆ ನೀಡಿದರು.

ರಮೇಶ ಎಸ್ ಹೊಸಮನಿ
ವಿಜಯಪುರ ಜಿಲ್ಲಾ ಸಂಯೋಜಕರು