ಕೆಲಸ ಬಯಸಿ ಬರುವ ಕೂಲಿಕಾರರಿಗೆ ಕೆಲಸ ನೀಡಲು ವಿಫಲರಾದಲ್ಲಿ ಸಂಬಂಧಿಸಿದ ಅಧಿಕಾರಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದೆಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಣಾಧಿಕಾರಿ ಗ್ರಾಮ ಪಂಚಾಯಿತಿ ಸಿಬ್ಬಂದಿಗೆ ಎಚ್ಚರಿಕೆ ನೀಡಿದರು.
ವಿಜಯಪುರ ನಗರದ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಾತನಾಡಿದರು.
“ಬರ ಪರಿಸ್ಥಿತಿ ಇರುವುದರಿಂದ ಕೂಲಿ ಬಯಸಿ ಅರ್ಜಿ ಸಲ್ಲಿಸಿದ 15 ದಿನದೊಳಗೆ ಕೆಲಸ ನೀಡಬೇಕು. ಒಂದು ವೇಳೆ ಅರ್ಜಿ ಸಲ್ಲಿಸಿದ 15 ದಿನದೊಳಗೆ ಕೆಲಸ ನೀಡದಿದ್ದಲ್ಲಿ ಅಂತಹ ಫಲಾನುಭವಿಗಳಿಗೆ ಕಡ್ಡಾಯವಾಗಿ ನಿರುದ್ಯೋಗ ಭತ್ಯೆ ನೀಡಲು ಕ್ರಮವಹಿಸಬೇಕು. ಮನರೇಗಾ ಯೋಜನೆ ಅಡಿ ಎಲ್ಲ ಕೂಸಿನ ಮನೆಗಳು ಕಡ್ಡಾಯವಾಗಿ ಪ್ರಾರಂಭ ಮಾಡುವ ಮೂಲಕ ಮಹಿಳೆಯರು ಮತ್ತು ಅಂಗವಿಕಲರ ಭಾಗವಹಿಸುವಿಕೆಯನ್ನು ಹೆಚ್ಚಿಸಬೇಕು” ಎಂದು ಸೂಚನೆ ನೀಡಿದರು.
“ಗ್ರಾಮ ಪಂಚಾಯಿತಿಯಲ್ಲಿ ತೆರಿಗೆ ವಸೂಲಾತಿಯನ್ನು ಕಡ್ಡಾಯವಾಗಿ ಪಿಒಎಸ್ ಮಷೀನ್ ಮೂಲಕ ಮಾಡಬೇಕು ಮತ್ತು ಸಾರ್ವಜನಿಕರಿಗೆ ರಶೀದಿ ನೀಡಬೇಕು. ಜಿಲ್ಲಾ ತಾಲೂಕು ಮತ್ತು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕೆಲಸ ನಿರ್ವಹಿಸುತ್ತಿರುವ ಎಲ್ಲ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಹಾಜರಾತಿಯನ್ನು ಕಡ್ಡಾಯವಾಗಿ ಇ -ಹಾಜರಾತಿಯಲ್ಲಿ ನಮೂದಿಸಬೇಕು” ಎಂದು ಅವರು ಸೂಚನೆ ನೀಡಿದರು.
ಈ ಸುದ್ದಿ ಓದಿದ್ದೀರಾ? ಶಿವಮೊಗ್ಗ | ತುಂಗಾ ನದಿ ಮಲಿನಗೊಳ್ಳುತ್ತಿದ್ದರೂ ಪಾಲಿಕೆ ನಿರ್ಲಕ್ಷ್ಯ; ಎಎಪಿ ಆರೋಪ
ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಡಾ. ವಿಜಯಕುಮಾರ್ ಅಜೂರ, ಮುಖ್ಯ ಲೆಕ್ಕಾಧಿಕಾರಿ ರಾಮಣ್ಣ, ಯೋಜನಾ ನಿರ್ದೇಶಕ ಸಿ ಬಿ ದೇವರಮನಿ, ಅನುಷ್ಠಾನ ಇಲಾಖೆಗಳ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು, ತಾಲೂಕಿನ ಕಾರ್ಯನಿರ್ವಾಹಕ ಅಧಿಕಾರಿಗಳು, ಜಿಲ್ಲಾ ಪಂಚಾಯತ್ ಅಧಿಕಾರಿಗಳು ಮತ್ತು ಸಿಬ್ಬಂದಿ ಸಭೆಯಲ್ಲಿ ಇದ್ದರು.