ಮೂಲಸೌಕರ್ಯ ಸೇರಿದಂತೆ ಹಲವು ಪ್ರಮುಖ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಗ್ರಾಮ ಆಡಳಿತಾಧಿಕಾರಿಗಳು ನಡೆಸುತ್ತಿರುವ ಅನಿರ್ದಿಷ್ಟಾವಧಿ ಮುಷ್ಕರ ಎರಡನೇ ದಿನಕ್ಕೆ ಕಾಲಿಟ್ಟಿದೆ. ವಿಜಯಪುರ ಜಿಲ್ಲೆಯ ಸಿಂದಗಿ, ಆಲಮೇಲ ಮತ್ತು ದೇವರಹಿಪ್ಪರಿಗೆ ತಾಲೂಕುಗಳ ಒಟ್ಟು 49 ಮಂದಿ ಅಧಿಕಾರಿಗಳು ಕರ್ತವ್ಯ ಸ್ಥಗಿತಗೊಳಿಸಿರುವುದರಿಂದ ಸಾರ್ವಜನಿಕರು ಪರದಾಡುವಂತಾಗಿದೆ.
ಈ ಹಿಂದೆ ಮುಸ್ಕರ ನಡೆಸಿದ ಸಂದರ್ಭದಲ್ಲಿ ನೀಡಿದ ಭರವಸೆಗಳನ್ನೂ ಸಹ ಸರ್ಕಾರ ಈಡೇರಿಸಿಲ್ಲ. ಬೇಡಿಕೆ ಈಡೇರಿಸುವ ಬದಲಿಗೆ ಹೆಚ್ಚಿನ ಕಾರ್ಯ ಒತ್ತಡ ಉಂಟಾಗಿದೆ. ಹೀಗಾಗಿ ಈಗ ರಾಜ್ಯವಾಪಿ ನಡೆಸುತ್ತಿರುವ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಎಲ್ಲಾ ಕೆಲಸ ಸ್ಥಗಿತಗೊಳಿಸಿ ಅಧಿಕಾರಿಗಳು ಬೆಂಬಲ ಸೂಚಿಸುತ್ತಿದ್ದಾರೆ. ಬೇಡಿಕೆ ಈಡೇರಿಕೆಗೆ ಮತ್ತೂ ವಿಳಂಬ ಮಾಡಿದರೆ ಸಾರ್ವಜನಿಕ ಕೆಲಸ ಕಾರ್ಯಗಳಿಗೆ ಮತ್ತಷ್ಟು ತೊಂದರೆ ಉಂಟಾಗಲಿದೆ ಎಂದು ಮುಷ್ಕರನಿರತ ಗ್ರಾಮ ಆಡಳಿತಾಧಿಕಾರಿಗಳು ಶಾಸಕರಿಗೆ ಮನವಿ ಮಾಡಿದರು.
ಆಯಾ ಗ್ರಾಮಾಡಳಿತ ಕೇಂದ್ರಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿಗಳಿಗೆ ಮೂಲ ಸೌಕರ್ಯಗಳಿಲ್ಲ. ಅವುಗಳನ್ನು ಮೊದಲು ಒದಗಿಸಬೇಕು. ಅಲ್ಲದೆ ತಾಂತ್ರಿಕ ಹುದ್ದೆಗಳಿಗೆ ನೀಡುವ ವೇತನ ಶ್ರೇಣಿ ನಿಗದಿಪಡಿಸಿ ಆದೇಶಿಸಬೇಕು. ಒಂದು ತಿಂಗಳಿಗೆ ಕೇವಲ 500 ರೂಪಾಯಿ ವಾಹನ ಭತ್ಯೆ ಇದ್ದು, ಇದನ್ನು 5,000ಕ್ಕೆ ಹೆಚ್ಚಿಸಬೇಕು ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ?: ವಿಜಯಪುರ | ದರೋಡೆ ವೇಳೆ ಗಾಯಗೊಂಡಿದ್ದ ವ್ಯಕ್ತಿ ಸಾವು; ಮೃತನ ಕುಟುಂಬಕ್ಕೆ ಪರಿಹಾರ ನೀಡಲು ಒತ್ತಾಯ
ಮುಷ್ಕರದಲ್ಲಿ ಗ್ರಾಮ ಆಡಳಿತಾಧಿಕಾರಿ ಸಂಘ ತಾಲೂಕು ಶಾಖೆ ಅಧ್ಯಕ್ಷ ಎಚ್ ಕೆ ಅಂಗಡಿ ಹಂದಿಗನೂರ, ಬಸಯ್ಯ ಮಠ, ಪಿಕೆ ಹುಡೆದ್, ಸಂತೋಷ ಬೀದರಕುಂದಿ,ವಿನೋದ ಕರ್ನಾಳ, ಪ್ರವೀಣ್ ಕದಂ, ಎಚ್ ಜಿ ಶೇಕ್, ನಿಖಿಲ್ ಖಾನಾಪುರ, ಬನ್ನೇಪ್ಪ ಅತ್ನರೊ, ಹಾಗೂ ದೇವರಹಿಪ್ಪರಗಿ ತಾಲೂಕು ಗ್ರಾಮ ಆಡಳಿತ ಅಧಿಕಾರಿಗಳಾದ ಟಿ ಎಂ ಬನ್ನೆಟ್ಟಿ, ಎಸ್ ಕೆ ಮುಲ್ಲಾ, ಎ ಎಂ ರಾಠೋಡ, ವಿಠ್ಠಲ ವಾಲಿಕಾರ, ಮುತ್ತು.ಆಲಮೇಲ ತಾಲೂಕು ಗ್ರಾಮ ಆಡಳಿತ ಅಧಿಕಾರಿಗಳಾದ ಎಸ್ ಸಿ ಕಾಂಬಳೆ, ಅನಿಲ ಅವಜಿ, ಮಂಜುನಾಥ ಡಂಬಳ, ಈರಣ್ಣ ಸ್ವಾದಿ, ಎಂ ಎಸ್ ಸಾಲುಂಕೆ ಇದ್ದರು.
