ಇಂದಿನ ವಿದ್ಯಾರ್ಥಿ, ಯುವಜನರಿಗೆ ನೇತಾಜಿಯವರ ಜೀವನ ಚರಿತ್ರೆ ಆದರ್ಶವಾಗಬೇಕು ಎಂದು ಎಐಡಿವೈಒ ಮುಖಂಡ ಸಿದ್ದಲಿಂಗ ಬಾಗೇವಾಡಿ ಹೇಳಿದ್ದಾರೆ.
ವಿಜಯಪುರದ ಹುತಾತ್ಮ ಸರ್ಕಲ್ ಮತ್ತು ಸರ್ಕಾರಿ ಐಟಿಐ ಕಾಲೇಜ್‌ನಲ್ಲಿ ನಡೆದ ಸುಭಾಷ್ ಚಂದ್ರ ಬೋಸ್ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. “ನೇತಾಜಿಯವರು ಜೀವನದುದ್ದಕ್ಕೂ ಸಂಧಾನತೀತವಾಗಿ ಬ್ರಿಟೀಷರ ವಿರುದ್ಧ ಹೋರಾಟ ಮಾಡಿದರು. ಎರಡು ಬಾರಿ ಕಾಂಗ್ರೆಸ್ ಸಮ್ಮೇಳನದ ಅಧ್ಯಕ್ಷರಾಗಿದ್ದ ಅವರು, ಪೂರ್ಣ ಸ್ವರಾಜ್ಯ ಹಾಗೂ ಕಾರ್ಮಿಕ ವರ್ಗ ಅಧಿಕಾರಕ್ಕೆ ಬರಬೇಕೆಂಬ ಸ್ಪಷ್ಟವಾದ ನಿಲುವನ್ನು ವ್ಯಕ್ತಪಡಿಸಿದ್ದರು” ಎಂದು ತಿಳಿಸಿದರು.
“ಸುಭಾಷ್ ಚಂದ್ರ ಬೋಸರು ಕಾಂಗ್ರೆಸ್‌ನಲ್ಲಿದ್ದುಕೊಂಡೇ ಹಲವಾರು ಸಂಧಾನತೀತ ಹೋರಾಟಗಳನ್ನು ಮುಂದುವರಿಸಿದರು. ಕೊನೆಗೆ ಕಾಂಗ್ರೆಸ್‌ನಿಂದ ಹೊರಬಂದು ದೇಶದುದ್ದಕ್ಕೂ ವಿದ್ಯಾರ್ಥಿ ಯುವಜನರನ್ನು ಒಂದುಗೂಡಿಸಿ ಸೈದ್ಧಾಂತಿಕವಾಗಿ ಬ್ರಿಟಿಷ್ ವಿರುದ್ಧ ಹೋರಾಟ ಕಟ್ಟಿದರು” ಎಂದು ಹೇಳಿದರು.
“ನೇತಾಜಿಯವರ ದೃಷ್ಟಿಯಲ್ಲಿ ಧರ್ಮವನ್ನು ರಾಜಕೀಯದಿಂದ ಸಂಪೂರ್ಣವಾಗಿ ಹೊರಗಿಡಬೇಕು. ಧರ್ಮ ವ್ಯಕ್ತಿಯೊಬ್ಬರ ವೈಯಕ್ತಿಕ ವಿಷಯವಾಗಿರಬೇಕು. ಮಾನವನಾಗಿ ಯಾವುದೇ ಒಬ್ಬ ವ್ಯಕ್ತಿಯು ತನ್ನ ಇಚ್ಛೆಯ ಯಾವುದೇ ಧರ್ಮವನ್ನು ಅನುಸರಿಸಲು ಸಂಪೂರ್ಣ ಸ್ವಾತಂತ್ರ್ಯ ಇರಬೇಕು. ಆದರೆ ದುರಂತ ಇಂದು ಬಹುತೇಕ ರಾಜಕೀಯ ಪಕ್ಷಗಳು ಅಭಿವೃದ್ಧಿ ಕೆಲಸಗಳನ್ನು ಮಾಡಿ ಚುನಾವಣೆ ಗೆಲ್ಲುವ ಬದಲು ಧರ್ಮವನ್ನು ತಮ್ಮ ರಾಜಕೀಯ ಸ್ವಾರ್ಥಕ್ಕಾಗಿ ದುರ್ಬಳಕೆ ಮಾಡಿಕೊಳ್ಳುತ್ತಿರುವುದು ಅತ್ಯಂತ ನಾಚಿಕೆಗೇಡಿನ ಸಂಗತಿ” ಎಂದರು.
ಸರ್ಕಾರಿ ಐಟಿಐ ಕಾಲೇಜ್‌ನ ಪ್ರಾಚಾರ್ಯ ರಮೇಶ ದೇಸಾಯಿ ಮಾತನಾಡಿ, “ಇಂದಿನ ವಿದ್ಯಾರ್ಥಿಗಳು ನೈತಿಕ, ಸಾಮಾಜಿಕ, ರಾಜಕೀಯ ಮೌಲ್ಯಗಳನ್ನು ಕಳೆದುಕೊಂಡಿದ್ದಾರೆ. ಇಂತಹ ಮಹಾನ್ ಕ್ರಾಂತಿಕಾರಿಗಳನ್ನು ಅಧ್ಯಯನ ಮಾಡುವ ಮೂಲಕ ಪ್ರತಿಯೊಬ್ಬರು ಉನ್ನತ ವಿಚಾರ ಮತ್ತು ಉನ್ನತ ಮೌಲ್ಯ, ಸಾಂಸ್ಕೃತಿಕ ವಿಚಾರಗಳನ್ನು ಮೈಗೂಡಿಸಿಕೊಳ್ಳಬೇಕು” ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಉಪನ್ಯಾಸಕ ರವಿ ಖೇಡಗಿ, ಮಹಾಂತೇಶ ಭಜಂತ್ರಿ, ಡಿ.ಎನ್. ಬಿರಾದಾರ, ಎಂ.ವಿ, ತಾವರಖೇಡ, ಸಂಘಟನಕಾರರಾದ ರಮೇಶ ಹೊಸಮನಿ, ಅನುರಾಗ ಸಾಳುಂಕೆ, ಮಾಂತೇಶ ನಾಯಕೋಡಿ, ಎಐಡಿವೈಒ ಜಿಲ್ಲಾಧ್ಯಕ್ಷರಾದ ಶ್ರೀಕಾಂತ ಕೊಂಡಗೂಳಿ ಮುಂತಾದವರು ಉಪಸ್ಥಿತರಿದ್ದರು.