ಹಾಲಿನ ದರ ಲೀಟರಿಗೆ ₹4, ವಿದ್ಯುತ್ ದರವನ್ನು ಯುನಿಟ್‌ಗೆ ₹35 ಹೈಸೆ ಹಾಗೂ ಡೀಸೆಲ್ ಮೇಲಿನ ಮಾರಾಟ ತೆರಿಗೆಯನ್ನು ಲೀಟರಿಗೆ ₹2ನಂತೆ ರಾಜ್ಯ ಸರ್ಕಾರ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿದೆ. ಕೇಂದ್ರ ಸರ್ಕಾರವೂ ಎಲ್‌ಪಿಜಿ ಸಿಲಿಂಡರ್ ದರ ₹50 ಹಾಗೂ ಪೆಟ್ರೋಲ್-ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ₹2 ಹೆಚ್ಚಿಸಿರುವ ಬೆಲೆ ಏರಿಕೆಯನ್ನು ಕೂಡಲೇ ಹಿಂಪಡೆಯಬೇಕು ಎಂದು ಎಸ್‌ಯುಸಿಐ ಕಮ್ಯುನಿಸ್ಟ್ ಪಕ್ಷವು ವಿಜಯಪುರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಅಪರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಜಿಲ್ಲಾ ಕಾರ್ಯದರ್ಶಿ ಬಿ ಭಗವಾನ್ ರೆಡ್ಡಿ ಮಾತನಾಡಿ, “ಹೈನುಗಾರರ ಉತ್ಪಾದನಾ ವೆಚ್ಚ ಹೆಚ್ಚಾಗಿದೆ ಎಂಬುದು ನಿಜವೇ. ಇದನ್ನು ಕಡಿಮೆ ಮಾಡಲು ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು. ಪಶು ಆಹಾರ, ಮೇವು, ಪಶು ವೈದ್ಯಕೀಯ ವೆಚ್ಚ ಮೊದಲಾದ ಹೈನುಗಾರಿಕೆಯ ಒಳಸುಳಿಗಳ ವೆಚ್ಚವನ್ನು ಸರ್ಕಾರ ಕಡಿತ ಮಾಡಬೇಕಿತ್ತು. ಬದಲಿಗೆ ಪ್ರತಿಬಾರಿಯೂ ವೆಚ್ಚದ ಹೊರೆಯನ್ನು ಸಾಮಾನ್ಯ ಗ್ರಾಹಕರ ಮೇಲೆ ವರ್ಗಾಯಿಸುತ್ತಲೇ ಇದೆ. ಇಂತಹ ನಡೆ ಸರಿಯಲ್ಲ” ಎಂದು ಆರೋಪಿಸಿದರು.
“ವಿದ್ಯುತ್ ದರವನ್ನು ಮತ್ತೆ ಪರಿಷ್ಕರಣೆ ಮಾಡಿದ್ದು, ಸದ್ಯಕ್ಕೆ ಗೃಹಜ್ಯೋತಿ ಯೋಜನೆಯ ಕಾರಣಕ್ಕೆ ಇದರಿಂದ ಬಹುಪಾಲು ಗ್ರಾಹಕರಿಗೆ ಸಮಸ್ಯೆ ಆಗದೇ ಇರಬಹುದು. ಆದರೆ ವಾಣಿಜ್ಯ ಮತ್ತು ಸಣ್ಣ ಕೈಗಾರಿಕೆಗಳಿಗೆ ಇದು ಹೊರೆಯಾಗಲಿದೆ. ಕೆಎಂಎಫ್ ಮತ್ತು ವಿದ್ಯುತ್ ಕಂಪನಿಗಳ ದಕ್ಷತೆಯನ್ನು ಹೆಚ್ಚಿಸಿ, ಸೋರಿಕೆ, ಭ್ರಷ್ಟಾಚಾರ, ದುಂದುವೆಚ್ಚ ನಿಯಂತ್ರಣ ಮಾಡುವ ಕಡೆಗೆ ಸರ್ಕಾರ ಗಮನಹರಿಸಬೇಕು. ಹಾಲು ಮತ್ತು ವಿದ್ಯುತ್ ದರ ಏರಿಕೆಗಳು ಸೇರಿದಂತೆ ಇತರ ಉತ್ಪನ್ನಗಳ ಮೇಲೆ ಪರಿಣಾಮ ಬೀರಿ ಬೆಲೆ ಏರಿಕೆಯ ವಿಷಚಕ್ರಕ್ಕೆ ಕಾರಣವಾಗಲಿದೆ” ಎಂದರು.
ಎಸ್‌ಯುಸಿಐ ಕಮ್ಯುನಿಸ್ಟ್ ಪಕ್ಷದ ರಾಜ್ಯ ಸಮಿತಿ ಸದಸ್ಯ ಡಾ. ಸುನೀತಕುಮಾರ ಮಾತನಾಡಿ, “ಡೀಸೆಲ್ ಮೇಲಿನ ಮಾರಾಟ ತೆರಿಗೆಯನ್ನು ರಾಜ್ಯ ಸರ್ಕಾರವು ಏರಿಕೆ ಮಾಡಿರುವುದರಿಂದ ಲೀಟರ್‌ಗೆ ₹2 ಹೆಚ್ಚಳವಾಗಿದೆ. ಹಾಗೆಯೇ ರಾಷ್ಟ್ರೀಯ ಹೆದ್ದಾರಿಯ ಸುಂಕವನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಶೇ.5ರಷ್ಟು ಏರಿಕೆ ಮಾಡಿದೆ. ಡೀಸೆಲ್ ಮತ್ತು ಹೆದ್ದಾರಿಗಳೆರಡೂ ಸಾರ್ವಜನಿಕ ಸಾರಿಗೆ ಮತ್ತು ಸರಕು ಸಾಗಾಣಿಕೆಗಳ ಮೇಲೆ ಪರಿಣಾಮ ಬೀರಲಿದೆ. ಇದರಿಂದ ಪ್ರಯಾಣ ದರಗಳು, ಸಾಗಾಣಿಕೆ ವೆಚ್ಚ ಏರಿಕೆಯಾಗಿ ಅಗತ್ಯ ವಸ್ತುಗಳ ಬೆಲೆ ಇನ್ನಷ್ಟು ತುಟ್ಟಿಯಾಗಲಿದೆ” ಎಂದರು.
ಈ ಸುದ್ದಿ ಓದಿದ್ದೀರಾ? ವಿಜಯಪುರ | ಬೆಳೆ ಹಾನಿ; ವಿಮಾ ಕಂಪನಿ ವಿರುದ್ಧ ರೈತರ ಆಕ್ರೋಶ
“ಇನ್ನೊಂದೆಡೆ ಜನಸಾಮಾನ್ಯರ ಜೇಬಿಗೆ ಕತ್ತರಿ ಹಾಕುವ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ತಮ್ಮ ಶಾಸಕರು ಹಾಗೂ ಸಂಸದರ ವೇತನವನ್ನು ದುಪ್ಪಟ್ಟು ಮಾಡಿಕೊಂಡಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ. ಗ್ಯಾರಂಟಿಗಳ ಹೆಸರಲ್ಲಿ ಜನರನ್ನು ಒಲೈಸುವ ಸರ್ಕಾರಗಳು ಇನ್ನೊಂದು ಕಡೆಯಿಂದ ಬೆಲೆ ಏರಿಕೆಯ ಬರೆ ಹಾಕುವುದು ಖಂಡನೀಯವಾಗಿದೆ” ಎಂದರು.
ಈ ಸಂದರ್ಭದಲ್ಲಿ ಮಲ್ಲಿಕಾರ್ಜುನ ಎಚ್ ಟಿ, ಸಿದ್ದಲಿಂಗ ಬಾಗೇವಾಡಿ, ಭರತಕುಮಾರ ಎಚ್ ಟಿ, ಶಿವಬಾಳಮ್ಮ ಕೊಂಡಗುಳ್ಳಿ, ಶಿವರಂಜನಿ ಹಾಗೂ ಸಿದ್ರಾಮ ಇದ್ದರು.