ದಲಿತ ವಿರೋಧಿ ಶಾಸಕ ಮುನಿರತ್ನ ವಿರುದ್ಧ ಸರ್ಕಾರ ಮತ್ತು ಪೊಲೀಸ್ ಇಲಾಖೆ ಸೂಕ್ತ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿ ಪ್ರೊ.ಬಿ ಕೃಷ್ಣಪ್ಪ ಸ್ಥಾಪಿಸಿದ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ವಿಜಯಪುರ ಜಿಲ್ಲಾ ಸಂಘಟನಾ ಸಂಚಾಲಕ ಶರಣು ಶಿಂಧೆ ಸಿಂದಗಿ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, “ಬೆಂಗಳೂರಿನ ರಾಜರಾಜೇಶ್ವರಿ ನಗರದ ಬಿಜೆಪಿ ಶಾಸಕ ಮುನಿರತ್ನ ನಾಯ್ಡು ಅವರು ಗುತ್ತಿಗೆದಾರ ಚೆಲುವರಾಜು ಎಂಬುವವರ ಜೊತೆ ದೂರವಾಣಿ ಸಂಭಾಷಣೆಯಲ್ಲಿ ಅತ್ಯಂತ ಕನಿಷ್ಠ ಪದಗಳನ್ನು ಬಳಕೆ ಮಾಡಿದ್ದು, ಜಾತಿ ನಿಂದನೆ ಮಾಡಿದ್ದಾರೆ. ಹೆಣ್ಣು ಮಕ್ಕಳ ಕುರಿತು ಅವಹೇಳನಕಾರಿಯಾಗಿ ಮಾತನಾಡಿ ಜೀವ ಬೆದರಿಕೆ ಹಾಕಿದ್ದಾರೆಂದು ದೂರಿನಲ್ಲಿ ದಾಖಲಾಗಿದೆ” ಎಂದರು.
ಈ ಸುದ್ದಿ ಓದಿದ್ದೀರಾ? ಬಾಗಲಕೋಟೆ | ಶಿವಾನಂದ ಮಠದಲ್ಲಿ ದಲಿತ ಮಕ್ಕಳಿಗೆ ಪ್ರವೇಶ ನಿರಾಕರಣೆ: ಕ್ಷಮೆ ಕೇಳದಿದ್ದರೆ ಡಿಎಸ್‌ಎಸ್ ಹೋರಾಟದ ಎಚ್ಚರಿಕೆ
“ಶಾಸಕ ಮುನಿರತ್ನ ಅವರು ದಲಿತರ ವಿರೋಧಿಯಾಗಿ ಮಾತನಾಡಿರುವುದು ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಒಬ್ಬ ಜನಪ್ರತಿನಿಧಿಯಾಗಿ ಸಂವಿಧಾನದ ನಿಲುವಿನಲ್ಲಿ ಪ್ರಮಾಣ ವಚನವನ್ನು ಸ್ವೀಕರಿಸಿ ದಲಿತರ ಕುರಿತಾಗಿ ಅವಹೇಳನವಾಗಿ ಮಾತನಾಡಿರುವುದನ್ನು ತೀವ್ರವಾಗಿ ಖಂಡಿಸುತ್ತೇವೆ. ಅವರು ಇನ್ನೂ ಅಸ್ಪೃಶ್ಯತೆಯನ್ನು ಜೀವಂತವಾಗಿ ಇಟ್ಟುಕೊಂಡಿದ್ದಾರೆ ಎನ್ನುವುದು ಅವರ ದೂರವಾಣಿ ಸಂಭಾಷಣೆಯಲ್ಲಿ ತಿಳಿದುಬರುತ್ತದೆ. ಅವರ ದೃಷ್ಟಿಯಲ್ಲಿ ದಲಿತರು ಮುಂದೆ ಬರಬಾರದು, ಸಾಮಾಜಿಕ ವ್ಯವಸ್ಥೆಯಿಂದ ದಲಿತರು ದೂರ ಇರಬೇಕೆಂಬದು ಅವರ ನಿಲುವಾಗಿದೆ. ಅವರ ವಿರುದ್ಧ ದಲಿತ ಸಂಘರ್ಷ ಸಮಿತಿಯಿಂದ ರಾಜ್ಯಾದ್ಯಂತ ತೀವ್ರ ಹೋರಾಟ ಮಾಡಬೇಕಾಗುತ್ತದೆ” ಎಂದು ಎಚ್ಚರಿಸಿದರು.