ಪ್ರಸ್ತುತ ಭಾರತವು ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂಭ್ರಮದಲ್ಲಿದೆ. ಮುಂಬರುವ 25 ವರ್ಷಗಳಲ್ಲಿ ವಿಕಸಿತ ಭಾರತ ನಿರ್ಮಿಸಲು ಯುವಶಕ್ತಿ, ನಾರಿ ಶಕ್ತಿ ಮತ್ತು ಕೌಶಲ್ಯ ಶಕ್ತಿಯ ಕೊಡುಗೆ ಅಪಾರ ಎಂದು ಕಲಬುರಗಿ ಕೇಂದ್ರೀಯ ವಿಶ್ವವಿದ್ಯಾಲಯ ಕುಲಸಚಿವ ಪ್ರೊ. ಆರ್.ಆರ್ ಬಿರಾದಾರ ಹೇಳಿದರು.
ವಿಜಯಪುರ ನಗರದ ಕರ್ನಾಟಕ ರಾಜ್ಯ ಅಕ್ಕಮಾಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಅರ್ಥಶಾಸ್ತ್ರ ಅಧ್ಯಯನ ವಿಭಾಗದ ವತಿಯಿಂದ ಹಮ್ಮಿಕೊಂಡ ‘ವಿಕಸಿತ ಭಾರತ 2047: ಸವಾಲುಗಳು ಮತ್ತು ಕಾರ್ಯತಂತ್ರಗಳು’ ಎಂಬ ವಿಷಯದ ಕುರಿತು ಅವರು ಮಾತನಾಡಿದರು.
ಭಾರತವು ಅಭಿವೃದ್ಧಿಹೊಂದುತ್ತಿರುವ, ಆರ್ಥಿಕತೆಯಿಂದ ಅಭಿವೃದ್ಧಿಹೊಂದಿದ, ಆರ್ಥಿಕತೆಯಾಗಿ ವಿಕಸಿತ ಭಾರತವಾಗಲು ಆರ್ಥಿಕತೆಯ ಎಲ್ಲ ವಲಯಗಳಲ್ಲಿ ಕೌಶಲ್ಯಯುತ ಯುವ ಶಕ್ತಿ ಹಾಗೂ ನಾರಿಶಕ್ತಿಯನ್ನು ಪ್ರೇರೇಪಿಸುವ ಗುರಿಗಳನ್ನು ಮತ್ತು ಯೋಜನೆಗಳನ್ನು ಕೇಂದ್ರ ಸರ್ಕಾರ ಜಾರಿಗೊಳಿಸುತ್ತಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿವಿಯ ಅರ್ಥಶಾಸ್ತ್ರ ಅಧ್ಯಯನ ವಿಭಾಗದ ಮುಖ್ಯಸ್ಥ ಪ್ರೊ. ಆರ್. ಗಂಗಶೆಟ್ಟಿ ಮಾತನಾಡಿ, 2047ರ ವೇಳೆಗೆ ವಿಕಸಿತ ಭಾರತಕ್ಕೆ ಆರ್ಥಿಕತೆಯ ಸರ್ವಾಂಗೀಣ ಅಭಿವೃದ್ಧಿಯನ್ನು ಸಾಧಿಸಲಿದೆ ಎಂದರು.
ಬೀದರ್‌ನ ಪ್ರಾದೇಶಿಕ ಕೇಂದ್ರದ ನಿರ್ದೇಶಕ ಪ್ರೊ. ಡಿ.ಎಂ.ಮದರಿ, ವಿವಿಧ ವಿಭಾಗದ ಪ್ರಾಧ್ಯಾಪಕರು, ಅತಿಥಿ ಉಪನ್ಯಾಸಕರು, ಸಂಶೋಧನಾ ವಿದ್ಯಾರ್ಥಿನಿಯರು ಹಾಗೂ ಸ್ನಾತಕೋತ್ತರ ವಿದ್ಯಾರ್ಥಿನಿಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಅತಿಥಿ ಉಪನ್ಯಾಸಕ ಡಾ.ಕೀರ್ತಿ ಹೊನವಾಡ ಸ್ವಾಗತಿಸಿ ಪರಿಚಯಿಸಿದರು. ಸಹಾಯಕ ಪ್ರಾಧ್ಯಾಪಕ ಡಾ.ಸುರೇಶ ಕೆ.ಪಿ ವಂದಿಸಿದರು.