ಕಬ್ಬು ಬೆಳೆಗಾರರಿಗೆ ಆಗುತ್ತಿರುವ ಅನ್ಯಾಯ ಖಂಡಿಸಿ ಹೋರಾಟ ತೀವ್ರಗೊಳಿಸಲು ನಿರ್ಧರಿಸಲಾಗಿದ್ದು, ಜ. 20 ರಂದು ರಾಜ್ಯದ ವಿವಿಧ ಜಿಲ್ಲೆಯ ರೈತರೊಂದಿಗೆ ಎಪಿಎಂಸಿ ಸಚಿವ ಶಿವಾನಂದ್ ಪಾಟೀಲ್ ಅವರ ಮನೆಗೆ ಮುತ್ತಿಗೆ ಹಾಕಿ ಧರಣಿ ನಡೆಸಲು ನಿರ್ಧರಿಸಲಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ – ಹಸಿರು ಸೇನೆ ರಾಜ್ಯಾಧ್ಯಕ್ಷ ಚೂನ್ನಪ್ಪ ತಿಳಿಸಿದರು.
ವಿಜಯಪುರ ಪಟ್ಟಣದ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಕಬ್ಬು ಬೆಳೆಗಾರರಿಗೆ ಆಗುತ್ತಿರುವ ಅನ್ಯಾಯ ಖಂಡಿಸಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
“ಕಬ್ಬು ಬೆಳೆಗಾರರ ಹಿತ ರಕ್ಷಣೆ ಕಾಪಾಡಲು ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ರೈತರಿಗೆ ತೊಂದರೆಯಾಗುತ್ತಿದೆ. ಕಬ್ಬು ಬೆಳೆಗಾರರಿಗೆ ವಿವಿಧ ರೀತಿ ಮೋಸ ಆಗುತ್ತಿರುವುದನ್ನು ಖಂಡಿಸುತ್ತೇವೆ. ಚಳಿಗಾಲದ ಅಧಿವೇಶನದ ಸಮಯದಲ್ಲಿ ಸಚಿವ ಶಿವಾನಂದ ಪಾಟೀಲ ಹಾಗೂ ಸಿಎಂ ಸಭೆ ಮಾಡಿ, ಎಲ್ಲಾ ರೈತರ ಸಮಕ್ಷಮದಲ್ಲಿ ಕಬ್ಬಿಗೆ ಯೋಗ್ಯ ಬೆಲೆ ನಿಡುವುದಾಗಿ ಹಾಗೂ ಸಕ್ಕರೆ ಕಾರ್ಖಾನೆಯಲ್ಲಿನ ಅನ್ಯಾಯವನ್ನು ತಡೆಯುವುದಾಗಿ ಭರವಸೆ ನೀಡಿದ್ದರು. ತಿಂಗಳಾದರೂ ಈ ಬಗ್ಗೆ ಕೆಲಸವಾಗಿಲ್ಲ. ಕೊಟ್ಟ ಮಾತು ತಪ್ಪಿದ್ದಾರೆ” ಎಂದು ಆರೋಪಿಸಿದರು.
“ಈ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಜ. 20 ರಾಜ್ಯದ ವಿವಿಧ ಜಿಲ್ಲೆಯ ಸಾವಿರಾರು ರೈತರು ಸಚಿವ ಶಿವಾನಂದ ಪಾಟೀಲರ ಮನೆ ಮುಂದೆ ಧರಣಿ ಸತ್ಯಾಗ್ರಹ ಮಾಡಲು ನಿರ್ಧರಿಸಲಾಗಿದೆ” ಎಂದರು.
ಜಿಲ್ಲಾ ಅಧ್ಯಕ್ಷ ಸಂಗಮೇಶ ಸಗರ ಮಾತನಾಡಿ, “ವಿಜಯಪುರ ಎಪಿಎಂಸಿ ಕಾರ್ಯದರ್ಶಿ ಹುದ್ದೆ ಭರ್ತಿ ಮಾಡಬೇಕು. ಎಪಿಎಂಸಿಯಲ್ಲಿ ತರಕಾರಿಗೆ ಶೇಕಡ 10 ಕಮಿಷನ್, ಪ್ಯಾಕಿಂಗ್ ಹಾಗೂ ಅಮಾಲಿ ಕಟ್ ಮಾಡುತ್ತಿದ್ದನ್ನು ಕೊಡಲಿ ನಿಲ್ಲಿಸಬೇಕು. ಖಾಲಿ ಚೀಲ, ಅಮಾಲಿ ಸೂಟ್, ಜಕಾತಿ ಎಂದು ರೈತರಿಗೆ ಮೋಸ ಮಾಡುತ್ತಿರುವುದು ನಿಲ್ಲಿಸಬೇಕು, ದ್ರಾಕ್ಷಿ ಹರಾಜು ಪ್ರಕ್ರಿಯೆಲ್ಲಿಯೂ ಯಥೇಚ್ಛವಾಗಿ ತೋರಾಡುತ್ತ ರೈತರಿಗೆ ಮೋಸ ಮಾಡಲಾಗುತ್ತಿದೆ. ವಿಜಯಪುರ ಜಿಲ್ಲೆಯ 13 ತಾಲ್ಲೂಕುಗಳಲ್ಲಿ ರೈತರಿಗೆ ಸಭೆ, ತರಬೇತಿ, ಸಿಬಿರ ಮಾಡಲು ಒಳ್ಳೆಯ ಎರಡುನೂರು ಆಸನಗಳ ರೈತ ಭವನ ನಿರ್ಮಿಸಬೇಕು” ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಬೀದರ್ | ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಸರಿಯಾಗಿ ಓದಲು ಬರುತ್ತಿಲ್ಲ : ಶಾಸಕ ಪ್ರಭು ಚವ್ಹಾಣ
ರಾಜ್ಯ ಗೌರವಾಧ್ಯಕ್ಷ ಶಶಿಕಾಂತ ಪಡಸಲಗಿ, ಕಾರ್ಯಧ್ಯಕ್ಷ ಮಹೇಶ ಗೌಡ ಸುಬೇದಾರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಮನಗೌಡ ಪಾಟೀಲ, ಜಿಲ್ಲಾ ಉಪಾಧ್ಯಕ್ಷ ಮಹದೇವಪ್ಪ ತೇಲಿ, ತಿಕೋಟ ತಾಲೂಕು ಅಧ್ಯಕ್ಷ ಸಾತ ಲಿಂಗಯ್ಯ ಸಾಲಿಮಠ, ಪ್ರಕಾಶ್ ತೇಲಿ, ಸಂಗಪ್ಪ ಟಕ್ಕೆ, ಜಕರಾಯ ಪೂಜಾರಿ, ಮಹಾಂತೇಶ್ ಮಮದಾಪುರ, ಮಹಾದೇವ ಬನಸೋಡೆ, ಜಯಸಿಂಹ ರಜಪೂತ, ರಾಜ ಸಾಬ್ ನದಾಫ್, ಹನುಮೇಶ ಜಮಖಂಡಿ, ಆತ್ಮಾನಂದ ಬೈ ರೋಡಗಿ ಸೇರಿದಂತೆ ಅನೇಕರಿದ್ದರು.