ಸುಪ್ರೀಂ ಕೋರ್ಟ್ ಆದೇಶದಂತೆ ಸೂಕ್ತ ದತ್ತಾಂಶಗಳನ್ನು ಪರಿಗಣಿಸಿ ಒಳ ಮೀಸಲಾತಿ ಜಾರಿಗೆ ತರಬೇಕು ಎಂದು ಆಗ್ರಹಿಸಿ ಕರ್ನಾಟಕ ಮಾದಿಗ ಜನ ಸಂಘ ಹೋರಾಟ ಸಮಿತಿಯು ವಿಜಯಪುರ ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿತು.
“ಅಸಮಾನತೆಯ ಸಂತ್ರಸ್ತರಾದ ಮಾದಿಗರು, ದಲಿತರು ಮತ್ತು ಪ್ರಗತಿಪರ ಸಂಘಟನೆಗಳ ನೇತೃತ್ವದಲ್ಲಿ 30 ವರ್ಷಗಳ ತ್ಯಾಗ ಬಲಿದಾನದಿಂದ ಸಾವು ನೋವುಗಳನ್ನು ಅನುಭವಿಸಿ ನಿರಂತರವಾಗಿ ಹೋರಾಟ ಮಾಡಿದ ಪರಿಣಾಮ ಸುಪ್ರೀಂ ನ್ಯಾಯಾಲಯವು ಒಳ ಮೀಸಲಾತಿ ಪರವಾದ ತೀರ್ಪು ನೀಡಿದೆ. ಮಾದಿಗ ಸಮುದಾಯದ ಬಲದಿಂದ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಸರ್ಕಾರಗಳು ತಮ್ಮ ಪ್ರಣಾಳಿಕೆಯಲ್ಲಿ ಒಳ ಮೀಸಲಾತಿ ಜಾರಿ ಮಾಡುತ್ತೇವೆ ಎಂಬುದಾಗಿ ಆಶ್ವಾಸನೆ ಮಾತ್ರ ನೀಡು ಸುಮ್ಮನಾಗಿವೆ” ಎಂದು ಸಮಿತಿಯ ಪದಾಧಿಕಾರಿಗಳು ಆರೋಪಿಸಿದರು.
”ವಿಳಂಬ ನೀತಿ ಅನುಸರಿಸದೆ ರಾಜ್ಯ ಸರ್ಕಾರ ಒಳ ಮೀಸಲಾತಿ ಜಾರಿಗೊಳಿಸಬೇಕು. ನಾ. ನಾಗಮೋಹನ್ ದಾಸ್‌ರವರ ಸಮಿತಿಗೆ ಈ ಹಿಂದೆ 7 ವರ್ಷಗಳ ಕಾಲ ಅಧ್ಯಯನ ನಡೆಸಿದ ನ್ಯಾಯಮೂರ್ತಿ ಎ ಜೆ ಸದಾಶಿವರ ಆಯೋಗದ ದತ್ತಾಂಶಗಳಿರುವ ವರದಿಯ ಶಿಫಾರಸ್ಸುಗಳನ್ನು ಬಳಸಿಕೊಂಡು ವರದಿ ತಯಾರಿಸಲು ಸರ್ಕಾರ ಆದೇಶ ನೀಡಬೇಕು. ಮಾದಿಗ, ಸಮಗಾರ, ಡೊಹರ, ದಕ್ಕಲಿಗ, ಮಚ್ಚಗಾರ, ಮತ್ತು ಇತರೆ ಜಾತಿಗಳಿಗೆ ಅವರ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಸಿಗದಿರುವ ಕಾರಣ ಸಾಮಾಜಿಕವಾಗಿ ಶೈಕ್ಷಣಿಕವಾಗಿ ಮತ್ತು ರಾಜಕೀಯವಾಗಿ ಹಿಂದುಳಿಯುವಂತಾಗಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ?: ವಿಜಯಪುರ | ಕಾಲುವೆಗೆ ಈಜಲು ಹೋಗಿದ್ದ ಯುವಕ ಶವವಾಗಿ ಪತ್ತೆ
ಈ ವೇಳೆ ಕರ್ನಾಟಕ ಮಾದಿಗ ಜನಸಂಘ ಹೋರಾಟ ಸಮಿತಿಯ ಸಂಸ್ಥಾಪಕ ರಾಜ್ಯಾಧ್ಯಕ್ಷ ಪರಶುರಾಮ ರೋಣಿಹಾಳ, ರಾಜ್ಯ ಉಪಾಧ್ಯಕ್ಷ ಸದಾನಂದ ಗುನ್ನಾಪುರ, ರಾಜ್ಯ ಕಾರ್ಯದರ್ಶಿ ದಶರಥ ಹೊನ್ನಳ್ಳಿ, ಜಿಲ್ಲಾಧ್ಯಕ್ಷ ಎಂ ಆರ್ ದೊಡ್ಡಮನಿ, ಯುವ ಘಟಕದ ರಾಜ್ಯಾಧ್ಯಕ್ಷ ನಾಗರಾಜ ಮಾದರ, ಜಿಲ್ಲಾ ಉಪಾಧ್ಯಕ್ಷ ಸಾಗರ ಪೂಜಾರಿ, ವಿಠ್ಠಲರಾಜ ಸಂದರಮನಿ, ಧರ್ಮರಾಜ ಹೊಸುರ, ಕೃಷ್ಣ ಬಾನಿ ಇತರರು ಇದ್ದರು.
