ಡೀಸೆಲ್ ಹಾಕಿಸಿದ್ದ ಬಾಕಿ ಹಣ ಪಾವತಿಸುವಂತೆ ಒತ್ತಾಯಿಸಿ ಪೆಟ್ರೋಲ್ ಬಂಕ್‌ನಲ್ಲಿ ವ್ಯಕ್ತಿಯನ್ನು ಅರೆಬೆತ್ತಲೆಗೊಳಿಸಿ ಕೂರಿಸಿದ ಅಮಾನವೀಯ ಘಟನೆ ವಿಜಯಪುರ ಜಿಲ್ಲೆಯಲ್ಲಿ ನಡೆದಿದೆ.
“ವಾಹನಗಳಿಗೆ ಡೀಸೆಲ್ ಹಾಕಿಸಿದ್ದ ಮೌನೇಶ್ ಪತ್ತಾರ್ ಎಂಬಾತ ಅಂದಾಜು 10 ರಿಂದ 15 ಲಕ್ಷ ರೂ.ನಷ್ಟು ಬಾಕಿ ಹಣ ನೀಡಬೇಕಿತ್ತು. ಆ ಹಣವನ್ನು ಪಾವತಿಸುವಂತೆ ಒತ್ತಾಯಿಸಿದ ಆತನನ್ನು ಮುದ್ದೇಬಿಹಾಳ ಪಟ್ಟಣದಲ್ಲಿರುವ ಬೋಸಲೆ ಬಂಕ್‌ನಲ್ಲಿ ಕಳೆದ 12 ದಿನಗಳಿಂದ ಅರೆಬೆತ್ತಲೆಯಾಗಿ ಕೂಡಿಹಾಕಿದ್ದಾರೆ” ಎಂದು ಆತನ ಕುಟುಂಬಸ್ಥರು ಆರೋಪಿಸಿದ್ದಾರೆ.
ತಮಿಳುನಾಡು ಮೂಲದ ಶಿವಶಕ್ತಿ ಬೋರ್‌ವೆಲ್ಸ್‌ನಲ್ಲಿ ಕೆಲಸ ಮಾಡುತ್ತಿದ್ದ ಮೌನೇಶ್, ವಾಹನಗಳಿಗೆ ಬೋಸಲೆ ಅವರ ಬಂಕ್‌ನಲ್ಲಿ ಡೀಸೆಲ್ ಹಾಕಿಸುತ್ತಿದ್ದರು. ಆದರೆ, ಶಿವಶಕ್ತಿ ಬೋರ್ವೆಲ್ಸ್ನವರು ಡೀಸೆಲ್ ಬಾಕಿ ಹಣ ನೀಡದೇ ಹೋಗಿದ್ದಾರೆ. ಹೀಗಾಗಿ ಬಾಕಿ ಹಣ ಪಾವತಿಸುವಂತೆ ಮೌನೇಶ್‌ನನ್ನು ಪೆಟ್ರೋಲ್ ಬಂಕ್ ಮಾಲೀಕ ಹಿಡಿದುಕೊಂಡಿದ್ದು, ಬಂಕ್‌ನಲ್ಲೇ ಕೂಡಿಹಾಕಿದ್ದಾರೆ. ಇನ್ನು ಮೌನೇಶ್ ಬಿಡುಗಡೆಗಾಗಿ ಆಗ್ರಹಿಸಿ ಆತನ ಪತ್ನಿ ಹಾಗೂ ಮಕ್ಕಳು ಕಳೆದ ಮೂರು ದಿನಗಳಿಂದ ಬೋಸಲೆ ಪೆಟ್ರೋಲ್ ಬಂಕ್‌ನಲ್ಲೇ ಕುಳಿತಿದ್ದಾರೆ.
ಈ ಸುದ್ದಿ ಓದಿದ್ದೀರಾ? ಕೊಡಗು | ದಯಾಮರಣ ಕೋರಿ ರಾಷ್ಟ್ರಪತಿಗೆ ಪತ್ರ ಬರೆದ ಪ್ರವಾಹ ಸಂತ್ರಸ್ತೆ
ಡೀಸೆಲ್ ಬಾಕಿ ಹಣ ನೀಡುವಂತೆ ಕಳೆದ 12 ದಿನಗಳಿಂದ ಮೌನೇಶ್ ಪತ್ತಾರ್‌ನನ್ನು ಅರೆಬೆತ್ತಲೆಗೊಳಿಸಿ ಬಂಕ್‌ನಲ್ಲೇ ಕೂಡಿ ಹಾಕಿದ್ದಾರೆ ಎಂದು ಆತನ ಕುಟುಂಬಸ್ಥರು ಆರೋಪಿಸಿದ್ದಾರೆ. ಪೊಲೀಸ್ ಠಾಣೆಗೂ ತೆರಳಲು ಬಿಡದೆ ಬಂಕ್ ಮಾಲೀಕರು ಮೌನೇಶ್ ಕುಟುಂಬಸ್ಥರನ್ನು ತಡೆಹಿಡಿದಿದ್ದಾರೆ ಎನ್ನಲಾಗಿದೆ.