ಕರ್ನಾಟಕ ಸರ್ಕಾರದಲ್ಲಿ ಉಪ ಮುಖ್ಯಮಂತ್ರಿಯಾಗಿ ದಲಿತ ನಾಯಕ ಡಾ. ಹೆಚ್.ಸಿ ಮಹಾದೇವಪ್ಪ ಅವರನ್ನು ನೇಮಿಸಬೇಕು, ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ವಿಜಯಪುರ ಜಿಲ್ಲಾ ಸಮಿತಿ (ನಾಗವಾರ ಬಣ) ವತಿಯಿಂದ ಜಿಲ್ಲಾಧಿಕಾರಿಗಳ ಮುಖಾಂತರ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಸಂಚಾಲಕ ಚಂದ್ರಕಾಂತ ಸಿಂಗೆ, “ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲು ದಲಿತ ನಾಯಕರು ಹಾಗೂ ದಲಿತ ಸಂಘಟನೆಗಳ ಪಾತ್ರ ಮಹತ್ವದ್ದಾಗಿದ್ದು, ಸಚಿವ ಸಂಪುಟದಲ್ಲಿ ಹೆಚ್.ಸಿ. ಮಹಾದೇವಪ್ಪ ಅವರನ್ನು ಕಡೆಗಣಿಸಿದರೆ ರಾಜ್ಯಾದ್ಯಂತ ಹೋರಾಟ ನಡೆಸಲಾಗುವುದು” ಎಂದು ಎಚ್ಚರಿಸಿದರು.
ಜಿಲ್ಲಾ ಸಂಘಟನಾ ಸಂಚಾಲಕ ಚನ್ನು ಕಟ್ಟಿಮನಿ ಮಾತನಾಡಿ, “ದಲಿತ ಸಮುದಾಯಕ್ಕೆ ಅನ್ಯಾಯವಾದರೆ ಕಾಂಗ್ರೆಸ್ ಪಕ್ಷದ ವಿರುದ್ಧ ರಾಜ್ಯವ್ಯಾಪಿ ಹೋರಾಟ ಹಮ್ಮಿಕೊಳ್ಳಲಾಗುವುದು” ಎಂದು ಹೇಳಿದರು.
ಈ ವೇಳೆ ಪರಶುರಾಮ ಕಾಂಬಳೆ, ಬಸವರಾಜ ತಳಕೇರಿ, ಯಮನಪ್ಪ ಚಲವಾದಿ, ಪರಶುರಾಮ ಚಲವಾದಿ, ಮಹೇಶ ಜವಳಗಿ, ಯಲ್ಲಪ್ಪ ಚಲವಾದಿ, ಶಿವಾನಂದ ಇಂಗಳಗಿ, ಅಮೀತ ಬನ್ನೆಟ್ಟಿಕರ ಸೇರಿದಂತೆ ಹಲವರು ಉಪಸ್ಥಿತರಿದ್ದರು.





