ಮನುಷ್ಯ ಸಂಬಂಧಗಳ ಹುಡುಕಾಟವೇ ಸಾಂಸ್ಕೃತಿಕ ಆಂದೋಲನವಾಗಬೇಕು ಎಂದು ಜಾಜಿ ಮಲ್ಲಿಗೆ ಕವಿ ಡಾ. ಸತ್ಯಾನಂದ ಪಾತ್ರೋಟ ಹೇಳಿದರು.
ವಿಜಯಪುರ ನಗರದ ಕಂದಗಲ್ಲ ಹನುಮಂತರಾಯ ರಂಗಮಂದಿರದಲ್ಲಿ ಆವಿಷ್ಕಾರ, ಎಐಡಿಎಸ್‌ಒ, ಎಐಡಿವೈಒ ಹಾಗೂ ಎಐಎಂಎಸ್‌ಎಸ್ ಸಂಘಟನೆಗಳ ಸಹಯೋಗದಲ್ಲಿ ನಡೆದ ʼ14ನೇ ವಿಜಯಪುರ ಸಾಂಸ್ಕೃತಿಕ ಜನೋತ್ಸವʼ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
“ಮನುಷ್ಯತ್ವ ಇರದ ಕಲೆ, ಸಾಹಿತ್ಯ, ಸಂಸ್ಕೃತಿ ಉತ್ಸವಗಳಿಗೆ ಅರ್ಥವಿಲ್ಲ. ದೇಶವೆಂದರೆ ಬರೀ ಮಣ್ಣಲ್ಲ, ಕುರ್ಚಿಯಲ್ಲ. ಮನುಷ್ಯರಾದ ನಾವು ಜಾತಿ-ಧರ್ಮಗಳ ಮಧ್ಯವರ್ತಿಗಳಾಗದೇ ಸತ್ಯದ ಮಧ್ಯವರ್ತಿಗಳಾಗಬೇಕು. ಇಂದು ಮುಖಂಡರು, ಅಧಿಕಾರಿಗಳು ಭ್ರಷ್ಟರಾಗುವ ಜತೆಗೆ ಲೇಖನ ಸಹ ಭ್ರಷ್ಟವಾಗಿದೆ. ಹೀಗಾದರೆ ರಕ್ಷಣೆ ಎಲ್ಲಿ. ನಮ್ಮನ್ನು ನಾವು ಕಂಡುಕೊಳ್ಳುವುದೇ ಇದಕ್ಕೆ ಪರಿಹಾರ. ತನ್ನ ಸಮುದಾಯವನ್ನೂ ಮೀರಿ ಜನಸಾಮಾನ್ಯರಿಗೆ ನಾಯಕರಾದ ಜ್ಯೋತಿಬಾ ಫುಲೆ ನಮಗೆ ಆದರ್ಶವಾಗಬೇಕು” ಎಂದರು.
ಎಐಯುಟಿಯುಸಿ ಕಾರ್ಮಿಕ ಸಂಘಟನೆಯ ರಾಜ್ಯಾಧ್ಯಕ್ಷ ಕೆ. ಸೋಮಶೇಖರ ಮಾತನಾಡಿ, ”ನೀತಿ, ಸಂಸ್ಕೃತಿ, ಮೌಲ್ಯಗಳ ಅಭಿವೃದ್ಧಿ ನಿಜವಾದ ಅಭಿವೃದ್ಧಿ, ಇಂದಿನ ಸಮಾಜದ ಪ್ರಗತಿಗೆ ಪೂರಕವಾದುದನ್ನು ಮಾತ್ರ ನಾವು ಇತಿಹಾಸದಿಂದ ಅನುಸರಿಸಬೇಕು ಹೊರತು ಜನರನ್ನು ಒಡೆದು ಆಳುವ ಇತಿಹಾಸ, ಸಂಸ್ಕೃತಿಯನ್ನು ಅಲ್ಲ” ಎಂದರು.

ರಂಗಮಂದಿರದ ಆವರಣದಲ್ಲಿಯ ಸೂಕ್ತಿ ಹಾಗೂ ಛಾಯಾಚಿತ್ರ ಪ್ರದರ್ಶನವನ್ನು ಸಾಹಿತಿ ಮನು ಪತ್ತಾರ ಉದ್ಘಾಟಿಸಿದರು. ಎಐಡಿವೈಒ ರಾಜ್ಯ ಕಾರ್ಯದರ್ಶಿ ಸಿದ್ದಲಿಂಗ ಬಾಗೇವಾಡಿ ಅಧ್ಯಕ್ಷತೆ ವಹಿಸಿದ್ದರು. ಎಐಡಿಎಸ್‌ಒ ಜಿಲ್ಲಾ ಕಾರ್ಯದರ್ಶಿ ಕಾವೇರಿ ರಜಪೂತ, ಎಐಎಂಎಸ್ಎಸ್ ಜಿಲ್ಲಾಧ್ಯಕ್ಷೆ ಗೀತಾ ಎಚ್, ಆವಿಷ್ಕಾರದ ಮುಖಂಡ ಅಶೋಕ ದೇಸಾಯಿ ಇದ್ದರು.
ಇದನ್ನೂ ಓದಿ: ವಿಜಯಪುರ | ನೀರಿನ ಸಮಸ್ಯೆ ಬಗೆಹರಿಸಿ: ಶಾಸಕ ಯಶವಂತರಾಯ
ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ವಿದುಷಿ ಲಕ್ಷ್ಮೀ ತೇರದಾಳಮಠ ಅವರ ನಾಟ್ಯ ಕಲಾ ಡ್ಯಾನ್ಸ್ ಕ್ಲಾಸ್ ನವರ ನೃತ್ಯ ರೂಪಕ, ಧಾರವಾಡ ಆಕಾಶವಾಣಿಯ ಬಿ ಹೈಗ್ರೇಡ್ ಕಲಾವಿದೆ ಕೃತಿಕಾ ವಿ. ಜಂಗಿನಮಠ ಅವರ ಕೊಳಲು ವಾದನ, ಸ್ವಯಂಭೋ ಆರ್ಟ್ ಫೌಂಡೇಶನ್ ನಟಿ ದೀಕ್ಷಾ ಭೀಸೆ, ದಿವ್ಯಾ ಭೀಸೆ ಮತ್ತು ತಂಡದವರ ನೃತ್ಯ ಪ್ರದರ್ಶನ ಜನರ ಮನ ಸೆಳೆದವು. ಬಾದಲ್ ಸರಕಾರ ಅವರು ರಚಿಸಿದ, ರಾಜೇಂದ್ರ ಕಾರಂತ್ ಅವರು ಕನ್ನಡಕ್ಕೆ ರೂಪಾಂತರಿಸಿದ ನಾಟಕ ‘ಮೋಜಿನ ಸೀಮೆಯಾಚೆ ಒಂದೂರು’ ವ್ಯವಸ್ಥೆಯ ಬಗ್ಗೆ ಬೆಳಕು ಚೆಲ್ಲಿತು.