ದೇಶದ ಕಾರ್ಮಿಕರನ್ನು ಗುಲಾಮಗಿರಿಗೆ ತಳ್ಳುವ ಕಾರ್ಮಿಕ ಸಂಹಿತೆಗಳು ಹಾಗೂ ನೀತಿಗಳ ವಿರುದ್ಧ ಬಲಿಷ್ಠ ಹೋರಾಟದ ಅಗತ್ಯವಿದೆ ಎಂದು ಜೆಸಿಟಿಯು ರಾಜ್ಯ ಮುಖಂಡೆ ಸುನಂದಾ ಎಚ್ ಎಸ್ ಹೇಳಿದರು.
ವಿಜಯಪುರ ನಗರದ ಜಿಲ್ಲಾ ಸಹಕಾರಿ ಯೂನಿಯನ್ ಭವನದಲ್ಲಿ ಜಂಟಿ ಕಾರ್ಮಿಕ ಸಂಘಟನೆಗಳ ಜಿಲ್ಲಾ ಸಮಿತಿಯಿಂದ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಸಮಾವೇಶ ಉದ್ವಾಟಿಸಿ ಮಾತನಾಡಿದರು.
ಎಐಯುಟಿಯುಸಿ ರಾಜ್ಯ ಉಪಾಧ್ಯಕ್ಷ ಎನ್ ಎಸ್ ವೀರೇಶ್ ಮಾತನಾಡಿ, “ಕಾರ್ಮಿಕರ ಪರವಾಗಿದ್ದ 44 ಕಾರ್ಮಿಕ ಕಾಯ್ದೆಗಳನ್ನು ಕೇವಲ ನಾಲ್ಕು ಸಂಹಿತೆಗಳಾಗಿ ಮಾಡಲಾಗಿದೆ. ಇವುಗಳ ಜಾರಿಯಾದರೆ ಕಾರ್ಮಿಕರ ಹಕ್ಕುಗಳನ್ನು ಮೊಟಕು ಮಾಡಿದಂತಾಗುತ್ತದೆ. ಬಹಳ ದೊಡ್ಡ ಸಂಖ್ಯೆಯಲ್ಲಿ ಕೆಲಸ ಮಾಡುತ್ತಿರುವ ಮಹಿಳಾ ಕಾರ್ಮಿಕರು, ಸ್ಕೀಮ್ ಕಾರ್ಯಕರ್ತರಿಗೆ ಕಾರ್ಮಿಕ ಸ್ಥಾನಮಾನ ಕೊಡುತ್ತಿಲ್ಲ. ಬಿಡಿಗಾಸಿಗೆ ದುಡಿಸಿಕೊಳ್ಳುತ್ತಿರುವುದರ ವಿರುದ್ಧ ರಾಷ್ಟ್ರಮಟ್ಟದಲ್ಲಿ ಮೇ 20ರಂದು ಅಖಿಲ ಭಾರತ ಸಾರ್ವತ್ರಿಕ ಮುಷ್ಕರಕ್ಕೆ ಕರೆ ನೀಡಲಾಗಿದೆ” ಎಂದು ತಿಳಿಸಿದರು.

ಸಿಐಟಿಯು ಜಿಲ್ಲಾಧ್ಯಕ್ಷ ಅಣ್ಣಾರಾಯ ಇಳಗೇರಿ ಮಾತನಾಡಿ, “ದೇಶದ ಸಂಪತ್ತು ಕೇವಲ ಶೇ.1ರಷ್ಟು ಶ್ರೀಮಂತ ಜನರ ಕೈಯಲ್ಲಿದೆ. ಶೇ.1ರಷ್ಟು ಜನರು ಒಡೆಯರಾಗಿದ್ದಾರೆ. ಇಡೀ ದೇಶದ ಕಾರ್ಮಿಕ ವರ್ಗ ದುಡಿದು ಸಂಪತ್ತಿಗೆ ಮಾಲೀಕರಾಗದೆ ಗುಲಾಮರಾಗಿ ದುಡಿಯುತ್ತಿದ್ದಾರೆ” ಎಂದರು.
ಈ ಸುದ್ದಿ ಓದಿದ್ದೀರಾ? ವಿಜಯಪುರ | ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ 625ಕ್ಕೆ 620 ಅಂಕ; ರಕ್ಷಿತಾ ಪಂಡಿತ ಕೊಡಹೊನ್ನಗೆ ಸನ್ಮಾನ
ಕಾರ್ಯಕ್ರಮದಲ್ಲಿ ಎಐಯುಟಿಯುಸಿ ಜಿಲ್ಲಾ ಅಧ್ಯಕ್ಷ ಮಲ್ಲಿಕಾರ್ಜುನ ಎಚ್ ಟಿ, ಗ್ರಾಮೀಣ ಅಂಚೆ ನೌಕರರ ಜಿಲ್ಲಾಧ್ಯಕ್ಷ ಬಸವರಾಜ ಹೂಗಾರ, ಎಐಯುಟಿಯುಸಿ ಜಿಲ್ಲಾ ಜಂಟಿ ಕಾರ್ಯದರ್ಶಿ ಮಹದೇವಿ ಧರ್ಮಶೆಟ್ಟಿ, ಸಿಐಟಿಯುನ ಜಿಲ್ಲಾ ಕಾರ್ಯದರ್ಶಿ ಲಕ್ಷ್ಮಣ ಹಂದ್ರಳ, ಕಿರಣ ಕೊಂಡಗೋಳಿ ಸೇರಿದಂತೆ ಹಲವರು ಇದ್ದರು.