ಕನಕದಾಸರು ನಾಡು ಕಂಡ ಸಂತ ಶ್ರೇಷ್ಠರಲ್ಲೊಬ್ಬರಾಗಿದ್ದು, ಅವರ ಆದರ್ಶಗಳು ಎಲ್ಲರಿಗೂ ಅನುಕರಣೀಯ ಎಂದು ನಾಲತವಾಡ ಸರ್ಕಾರಿ ಉರ್ದು ಶಾಲೆಯ ಮುಖ್ಯ ಶಿಕ್ಷಕ ಎ ಎಚ್ ಖಾಜಿ ಹೇಳಿದರು.
ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ನಾಲತವಾಡ ಉರ್ದು ಶಾಲೆಯಲ್ಲಿ ಜರಗಿದ ಕನಕದಾಸರ ಜಯಂತಿ ಅಂಗವಾಗಿ ಅವರ ಭಾವ ಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.
“ದೇವಸ್ಥಾನ ನಿರ್ಮಾಣಕ್ಕಾಗಿ ಭೂಮಿಯನ್ನು ಅಗೆಯುತ್ತಿರುವ ಸಂದರ್ಭದಲ್ಲಿ ಏಳು ಕೊಪ್ಪರಿಗೆಯಷ್ಟು ಬಂಗಾರ ದೊರಕಿತು. ತಿಮ್ಮಪ್ಪ ನಾಯಕ ಕಾಗಿನೆಲೆಯಲ್ಲಿ ಆದಿಕೇಶವ ದೇವಸ್ಥಾನ ನಿರ್ಮಾಣ ಮಾಡಿ, ಅನೇಕ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡು, ಉಳಿದುದ್ದನ್ನು ಬಡಬಗ್ಗರಿಗೆ ಹಂಚಿದ. ಈ ಉದಾರ ಗುಣದಿಂದ ಜನರು ತಿಮ್ಮಪ್ಪ ನಾಯಕನನ್ನು ʼಕನಕʼ ಎಂದು ಕರೆದರು” ಎಂದು ಹೇಳಿದರು.
“ಹೆಂಡತಿ ಸುಜ್ಞಾನ ವಧೂಟಿ ಹಾಗೂ ತಾಯಿಯ ಮರಣದಿಂದ ದುಃಖದ ಕೂಪಕ್ಕೆ ತಳ್ಳಲ್ಪಟ್ಟ ಕನಕನಿಗೆ ಭಗವಂತ ಕನಸಿನಲ್ಲಿ ಬಂದು ದಾಸನಾಗುವಂತೆ ಸೂಚಿಸಿದ್ದರೂ ಸ್ವೀಕರಿಸಲಿಲ್ಲ. ಶಿಗ್ಗಾಂವಿಯ ಮೇಲೆ ಪರಕೀಯರ ದಾಳಿ ನಡೆದಾಗ ಆತನಿಗೆ ಯುದ್ಧ ಮಾಡುವ ಸನ್ನಿವೇಶ ಎದುರಾಗಿ, ಅಪಾರವಾದ ಗಾಯಕ್ಕೆ ತುತ್ತಾದನು. ಈ ವೇಳೆ ಭಗವಂತನ ದರ್ಶನವಾಗಿ ವೈರಾಗ್ಯ ತಾಳಿದ ಕನಕ ಮೈ ಮೇಲೆ ಒಂದು ಪಂಚೆಯನ್ನುಟ್ಟು, ಹೆಗಲಿಗೆ ಕಂಬಳಿ ಹಾಕಿ, ಕೈಯಲ್ಲಿ ಏಕತಾರಿ ಹಿಡಿದು ಆದಿಕೇಶವನನ್ನು ನೆನೆಯುತ್ತಾ, ಈಶ ನಿನ್ನ ಭಜನೆಯನ್ನು ಆಶೆಯಿಂದ ಮಾಡುವೆನು ಎನ್ನುತ್ತಾ ಕನಕದಾಸನಾದ” ಎಂದು ವಿವರಿಸಿದರು.
ಈ ಸುದ್ದಿ ಓದಿದ್ದೀರಾ? ಕಲಬುರಗಿ | ಕನಕ ಜಯಂತಿ ಮೆರವಣಿಗೆ ವೇಳೆ ಯುವಕರ ನಡುವೆ ಗಲಾಟೆ
ಈ ವೇಳೆ ಶಿಕ್ಷಕಿಯರುಗಳಾದ ಎಂ ಎಂ ಇಸ್ಲಾಂಪೂರ, ಜೆ ಕೆ ಯರಂತೇಲಿಮಠ, ಶಮಶಾದಬೇಗಂ ಸಿಕ್ಕಲಗಾರ, ಎಂ ಎ ಮುಲ್ಲಾ, ಜಡ್ ಎಸ್ ಮುಲ್ಲಾ, ಜೆ ಎಂ ಮೂಲಿಮನಿ ಸೇರಿದಂತೆ ಮಕ್ಕಳು ಇದ್ದರು.