ಎಲ್ಲ ಸಮಾನ ಮನಸ್ಕರ ಸಣ್ಣ ಪಕ್ಷಗಳನ್ನು ಒಂದೇ ಬ್ಯಾನರ್‌ನಡಿ ತರುವ ಪ್ರಯತ್ನಕ್ಕೆ ಮುಂದಾಗಿದ್ದು, ಹೊಸದೊಂದು ಪ್ರಾದೇಶಿಕ ಪಕ್ಷದ ರಚನೆಗೆ ಚಿಂತನೆ ನಡೆಸಲಾಗಿದೆ ಎಂದು ರೈತ ಮುಖಂಡ ಚಂದ್ರಶೇಖರ ಕೋಡಿಹಳ್ಳಿ ತಿಳಿಸಿದರು.
ವಿಜಯಪುರ ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ರೈತ ಸೇರಿದಂತೆ ಎಲ್ಲ ವರ್ಗಗಳ ಹಿತರಕ್ಷಣೆ ಕೇಂದ್ರೀಕರಿಸಿ ಪ್ರಾದೇಶಿಕ ಪಕ್ಷ ರಚನೆಯಾಗಬೇಕಿದೆ. ಹೊಸ ದಿಕ್ಕಿನಲ್ಲಿ ಆಲೋಚನಾ ಲಹರಿ ಹರಿಯಬೇಕಿದೆ. ಕಾಂಗ್ರೆಸ್ ಬೇಡ ಎಂದರೆ ಬಿಜೆಪಿ ಅನಿವಾರ್ಯ, ಬಿಜೆಪಿ ಬೇಡ ಎಂದರೆ ಕಾಂಗ್ರೆಸ್ ಅನಿವಾರ್ಯ ಎಂಬುದು ಸಾಕಾಗಿದೆ. ಹೀಗಾಗಿ ರೈತರು, ಕಾರ್ಮಿಕರು, ಸಾರ್ವಜನಿಕರು ಇದರ ಬಗ್ಗೆ ಧ್ವನಿ ಎತ್ತಬೇಕು. ಸಮಾನ ಮನಸ್ಕರೇ ಕಟ್ಟುವ ಪ್ರಾದೇಶಿಕ ಪಕ್ಷದ ನೇತೃತ್ವದಲ್ಲಿ ಮುಂಬರುವ 2028ರ ಚುನಾವಣೆ ಎದುರಿಸಲಾಗುವುದು” ಎಂದರು.
“ತುರ್ತು ಪರಿಸ್ಥಿತಿ ವಿರೋಧಿಸಿದ್ದ ಸಿದ್ದರಾಮಯ್ಯ ಅವರು ಈಗ ಅದೇ ಕಾಂಗ್ರೆಸ್ ಸೇರಿ ಮುಖ್ಯಮಂತ್ರಿಯಾಗಿದ್ದಾರೆ. ಮೋದಿ ಅವರನ್ನು ದೂರುತ್ತಿದ್ದ ಮಾಜಿ ಪ್ರಧಾನಿ ದೇವೆಗೌಡರು ತಮ್ಮ ಕುಟುಂಬದ ರಾಜಕೀಯ ಭವಿಷ್ಯಕ್ಕಾಗಿ ಮೋದಿ ಅವರನ್ನು ಹೊಗಳುತ್ತಿದ್ದಾರೆ. ಜಾತ್ಯಾತೀತತೆ ಎಲ್ಲಿ ಹೋಯಿತು?” ಎಂದು ಟೀಕಿಸಿದರು.
“ಉದ್ಯಮಪತಿಗಳ ಸಾಲ ಮನ್ನಾ ಮಾಡಲಾಗಿದೆ. ಇದು ಯಾರ ಮನೆಯ ದುಡ್ಡು, ಸಿದ್ದರಾಮಯ್ಯ, ಮೋದಿ, ಅಮಿತ್ ಶಾ ಅವರ ಮನೆಯ ದುಡ್ಡಾ? ಉದ್ಯಮಿಗಳ ಸಾಲ ಮನ್ನಾ ಮಾಡುವವರು ನೀವು ಹೇಗೆ ದೇಶ ಕಟ್ಟುತ್ತೀರಿ? ಕೇವಲ ಬಾಯಿ ಮಾತಿನಲ್ಲಿ ಭಾರತ್ ಮಾತಾ ಕೀ ಜೈ ಎಂದು ಹೇಳಿದರೆ ಸಾಕೇ? ಎಂದು ಪ್ರಶ್ನಿಸಿದ ಅವರು, ಕೇಂದ್ರ ಹಾಗೂ ರಾಜ್ಯ ಸರ್ಕಾರ ಬಜೆಟ್‌ಗಳಿಂದ ಬಿಡಿಕಾಸಿನ ಪ್ರಯೋಜನವೂ ರೈತ ವಲಯಕ್ಕೆ ದೊರಕಿಲ್ಲ. ರೈತರಿಗೆ ಕೇವಲ ಸಮಾಧಾನದ ಮಾತುಗಳನ್ನು ಮಾತ್ರ ಸರ್ಕಾರಗಳು ಹೇಳುತ್ತಿದ್ದು, ಸಾಮಾಜಿಕ, ಆರ್ಥಿಕ ಸುಧಾರಣೆ ಮರೀಚಿಕೆಯಾಗಿದೆ” ಎಂದು ಅಸಮಾಧಾನ ಹೊರಹಾಕಿದರು.
ಇದನ್ನೂ ಓದಿ: ವಿಜಯಪುರ | ವಾರ್ಡ್ ನಂ. 29ರ ಉಪಚುನಾವಣೆ: ಬಿಜೆಪಿ ಅಭ್ಯರ್ಥಿ ಗಿರೀಶ್ ಬಿರಾದಾರ್ ಗೆಲುವು
“ಇನ್ನು ಆಡಳಿತ ಪಕ್ಷವನ್ನು ಎದುರಿಸುವಲ್ಲಿ ಪ್ರತಿಪಕ್ಷ ಸಂಪೂರ್ಣ ವಿಫಲವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ವಿರೋಧ ಪಕ್ಷಗಳಿಗೆ ಚಳ್ಳೆಹಣ್ಣು ತಿನಿಸುತ್ತಾ ಸಾಗುತ್ತಿದ್ದಾರೆ. ವಿರೋಧ ಪಕ್ಷಕ್ಕೆ ಯಾವುದು ಮಹತ್ವ, ಯಾವ ವಿಷಯದಲ್ಲಿ ಸರ್ಕಾರವನ್ನು ಕಟ್ಟಿ ಹಾಕಬೇಕು ಎಂಬ ಸಾಮಾನ್ಯ ಜ್ಞಾನವೇ ಇಲ್ಲ. ಕೇವಲ ಮುಸ್ಲಿಂ, ಸಂಘ ಪರಿವಾರ ಹೆಸರು ಹೇಳಿದರೆ ಸಾಕು ಅವರು ಕೂಗಾಡುತ್ತಾರೆ. ಸರ್ಕಾರ ತಮಗೆ ಬೇಕಾದ ಬಿಲ್ ಪಾಸು ಮಾಡಿಕೊಳ್ಳುತ್ತದೆ” ಎಂದು ಟೀಕಿಸಿದರು.