ಯುಗಾದಿ ಹಬ್ಬದ ಹಿನ್ನೆಲೆ ಸ್ನಾನಕ್ಕೆಂದು ತೆರಳಿದ್ದ ಮೂವರು ಬಾಲಕರು ನೀರುಪಾಲಾಗಿ ಸಾವನ್ನಪ್ಪಿರುವ ಘಟನೆ ವಿಜಯಪುರ ಜಿಲ್ಲೆಯ ಆಲಮಟ್ಟಿ ಜಲಾಶಯ ಮುಂಭಾಗದ ಕೃಷ್ಣಾ ನದಿಯಲ್ಲಿ ಭಾನುವಾರ ಸಂಭವಿಸಿದೆ.
ಮೂವರು ಮೃತರನ್ನು ಬಾಗಲಕೋಟೆ ತಾಲೂಕಿನ ಇಲ್ಯಾಳ ಗ್ರಾಮದವರು ಎಂದು ಗುರುತಿಸಲಾಗಿದೆ. ಭಾನುವಾರವೇ ಸೋಮಶೇಖರ ಬೊಮ್ಮಣ್ಣ ದೇವರಮನಿ (15) ಎಂಬಾತನ ಶವ ಪತ್ತೆಯಾಗಿದ್ದು, ಮಲ್ಲಪ್ಪ ಬಸಪ್ಪ ಬಗಲಿ (15), ಪರನಗೌಡ ಮಲ್ಲಪ್ಪ ಬೀಳಗಿ (17) ಕಾಣೆಯಾಗಿದ್ದು, ಸೋಮವಾರ ಸಂಜೆಯವರೆಗೂ ಅವರಿಗಾಗಿ ಕೃಷ್ಣಾ ನದಿಯಲ್ಲಿ ಹುಡುಕಾಟ ನಡೆದಿದ್ದು, ಶವಗಳು ಪತ್ತೆಯಾಗಿಲ್ಲ.
ಯುಗಾದಿ ಅಮವಾಸ್ಯೆಗೆ ತಮ್ಮ ತಮ್ಮ ಗ್ರಾಮಗಳ ದೇವರ ಪಲ್ಲಕ್ಕಿಯೊಂದಿಗೆ ಆಲಮಟ್ಟಿಯ ಕೃಷ್ಣಾ ನದಿಗೆ ಆಗಮಿಸಿ, ಪಲ್ಲಕ್ಕಿ ಶುಚಿಗೊಳಿಸುವುದು ಸಂಪ್ರದಾಯ. ಅದೇ ರೀತಿ ಇಲ್ಯಾಳ ಗ್ರಾಮದಿಂದ ಬೊಮ್ಮಲಿಂಗೇಶ್ವರ ದೇವರ ಪಲ್ಲಕ್ಕಿಯೊಂದಿಗೆ ಈ ಮೂವರು ಆಗಮಿಸಿದ್ದರು. ಒಟ್ಟು ಐವರು ನದಿಗೆ ಸ್ನಾನಕ್ಕೆ ಇಳಿದಿದ್ದರು. ನದಿಯ ಆಳ ಗೊತ್ತಿಲ್ಲದ ಐವರು ಮುಳುಗತೊಡಗಿದರು. ತಕ್ಷಣವೇ ಸಮೀಪದಲ್ಲಿಯೇ ಇದ್ದ ಇನ್ನಿತರರು ಇಬ್ಬರನ್ನು ರಕ್ಷಿಸಿದರು. ಆದರೆ ಈ ಮೂವರನ್ನು ರಕ್ಷಿಸಲು ಸಾಧ್ಯವಾಗಲಿಲ್ಲ ಎನ್ನಲಾಗಿದೆ.
ಇದನ್ನೂ ಓದಿ: ವಿಜಯಪುರ | ಹರನಾಳ ಗ್ರಾಪಂ ಅವ್ಯವಹಾರ ಖಂಡಿಸಿ ದಸಂಸ ಪ್ರತಿಭಟನೆ
ಸ್ಥಳೀಯ ಮೀನುಗಾರರು, ಪೊಲೀಸರು, ಅಗ್ನಿಶಾಮಕ ದಳದ ಸಿಬ್ಬಂದಿ ಸೇರಿ ಶವ ಹುಡುಕಾಟವನ್ನು ಮುಂದುವರಿಸಿದ್ದಾರೆ. ಘಟನಾ ಸ್ಥಳಕ್ಕೆ ಬಾಗಲಕೋಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.