ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿರುವ ಹೃದಯ ವಿದ್ರಾವಕ ಘಟನೆ ವಿಜಯಪುರದ ಹೊರವಲಯದ ಗಾಂಧಿನಗರದ ಸ್ಟಾರ್ ಚೌಕ್ ಬಳಿ ಇರುವ ಇಟ್ಟಿಗೆ ಭಟ್ಟಿಯಲ್ಲಿ ನಡೆದಿದೆ.
ಇಟ್ಟಿಗೆ ಭಟ್ಟಿ ಮಾಲೀಕ ಖೇಮು ರಾಠೋಡ್ ಎಂಬಾತ ಕಾರ್ಮಿಕರ ಮೇಲೆ ಹಲ್ಲೆ ನಡೆಸಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ಸದಾಶಿವ ಮಾದರ, ಸದಾಶಿವ ಬಬಲಾದಿ, ಉಮೇಶ್ ಎಂಬ ಮೂವರು ಕಾರ್ಮಿಕರು ಹಲ್ಲೆಗೊಳಗಾಗಿದ್ದಾರೆ. ಮುಂಗಡವಾಗಿ ಹಣ ಪಡೆದು ಕೆಲಸಕ್ಕೆ ಬರಲು ವಿಳಂಬ ಮಾಡಿದ್ದಕ್ಕೆ ಖೇಮು ರಾಠೋಡ್ ಪೈಪ್‌ಗಳಿಂದ ಕಾರ್ಮಿಕರ ಮೇಲೆ ಹಲ್ಲೆ ಮಾಡಿದ್ದಾನೆಂಬ ಆರೋಪ ಕೇಳಿಬಂದಿದೆ.
ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಚಿಕ್ಕಲಿಕಿ ಗ್ರಾಮದವರಾದ ಮೂವರು ಕಾರ್ಮಿಕರು, ಹಬ್ಬಕ್ಕೆಂದು ಊರಿಗೆ ಹೋಗಿದ್ದರು. ಊರಿಗೆ ಹೋಗಿ ವಾಪಸ್ ಬರಲು ವಿಳಂಬ ಮಾಡಿದ್ದಕ್ಕೆ ಹಲ್ಲೆ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಕಾರ್ಮಿಕರು ಎಷ್ಟೇ ಬೇಡಿಕೊಂಡರೂ ಬಿಡದೆ ಹಲ್ಲೆ ಮಾಡಿದ್ದಾನೆ. ವಿಜಯಪುರ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಕಾರ್ಮಿಕರ ಮೇಲೆ ದೌರ್ಜನ್ಯ ಎಸಗಿರುವ ಇಟ್ಟಂಗಿಭಟ್ಟಿ ಮಾಲೀಕನ ಅಮಾನವೀಯ ಕೃತ್ಯಕ್ಕೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಗೆ ಈ ದಿನ.ಕಾಮ್ ಸಂಪರ್ಕಿಸಿದಾಗ, “ಮೂವರು ಕಾರ್ಮಿಕರು ಮುಂಗಡವಾಗಿ ಹಣ ಪಡೆದು ಕೆಲಸಕ್ಕೆ ಬರಲು ತಡ ಮಾಡಿದ್ದಾರೆಂದು ಮಾಲೀಕ ಥಳಿಸಿರುವುದಾಗಿ ಮಾಹಿತಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಗಾಯಾಳುಗಳು ಸರ್ಕಾರಿ ಆಸ್ಪತ್ರೆ ದಾಖಲಾಗಿದ್ದು, ಅಲ್ಲಿಂದ ನಮಗೆ ಎಂಎಲ್‌ಸಿ(ಮೆಡಿಕೊ-ಲೀಗಲ್ ಕೇಸ್) ಬಂದಿದೆ. ಹಾಗಾಗಿ ನಮ್ಮ ಸಿಬ್ಬಂದಿ ಘಟನಾ ಸ್ಥಳಕ್ಕೆ ಹೋಗಿದ್ದಾರೆ” ಎಂದು ಪೊಲೀಸರು ಪ್ರತಿಕ್ರಿಯಿಸಿದರು.
ಈ ಸುದ್ದಿ ಓದಿದ್ದೀರಾ? ಕಲಬುರಗಿ | ಜಾತಿನಿಂದನೆ : ರಟಕಲ್ ಪಿಎಸ್‌ಐ ಅಮಾನತು
“ಇನ್ನು ಎಫ್‌ಐಆರ್ ಆಗಿಲ್ಲ. ಸಂತ್ರಸ್ತ ಕಾರ್ಮಿಕರು ದೂರು ದಾಖಲು ಮಾಡಿದರೆ ಸಂಜೆಯಷ್ಟರಲ್ಲಿ ಎಫ್‌ಐಆರ್ ದಾಖಲಿಸಲಾಗುತ್ತದೆ. ತನಿಖೆಗೆ ತೆರಳಿರುವ ಸಿಬ್ಬಂದಿ ಬಂದ ಬಳಿಕ ಹೆಚ್ಚಿನ ಮಾಹಿತಿ ತಿಳಿದುಬರುತ್ತದೆ” ಎಂದು ಮಾಹಿತಿ ನೀಡಿದರು.
ವಿಜಯಪುರದ ಎಪಿಎಂಸಿ ವ್ಯಾಪ್ತಿಯಲ್ಲಿರುವ ಇಟ್ಟಿಗೆ ಭಟ್ಟಿಯಲ್ಲಿ ಕಾರ್ಮಿಕರ ಮೇಲೆ ನಡೆದಿರುವ ಹಲ್ಲೆ ಅಮಾನವೀಯವಾಗಿದೆ. ತಪ್ಪಿತಸ್ಥರನ್ನು ಬಂಧಿಸಿದ್ದು, ಕಠಿಣ ಕಾನೂನು ಕ್ರಮವನ್ನೂ ಜರುಗಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ ಬಿ ಪಾಟೀಲ ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
“ಇಟ್ಟಿಗೆ ಭಟ್ಟಿಯಲ್ಲಿ ನಡೆದಿರುವ ಘಟನೆ ಬಗ್ಗೆ ವಿಜಯಪುರ ಜಿಲ್ಲಾ ಪೊಲೀಸ್ ವರಿಷ್ಠರ ಜತೆ ಮಾತನಾಡಿ, ಸೂಕ್ತ ಕ್ರಮ ಜರುಗಿಸಲು ಸೂಚಿಸಿದ್ದೇನೆ. ಅಲ್ಲಿನ ಜಿಲ್ಲಾಧಿಕಾರಿಗಳು ಕರ್ತವ್ಯದ ಮೇಲೆ ಬೆಂಗಳೂರಿನಲ್ಲೇ ಇದ್ದಾರೆ. ಅವರೊಂದಿಗೂ ಈ ಬಗ್ಗೆ ಮಾತನಾಡಿರುವೆ. ತಪ್ಪಿತಸ್ಥರನ್ನು ಹಾಗೆಯೇ ಬಿಡುವ ಪ್ರಶ್ನೆಯೇ ಇಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.