ಇಂದಿನ ಮಾಹಿತಿ ತಂತ್ರಜ್ಞಾನ ಯುಗದಲ್ಲಿ ರೈತರು ಕೌಶಲ್ಯಾಧಾರಿತ ಶಿಕ್ಷಣಕ್ಕೆ ಆದ್ಯತೆ ನೀಡಬೇಕು. ಆಗ ಮಾತ್ರ ಸ್ಪರ್ಧಾತ್ಮಕ ಜಗತ್ತಿನಲ್ಲಿ ಕೃಷಿಯಲ್ಲಿಯೂ ಗಟ್ಟಿಯಾಗಿ ನೆಲೆಗೊಳ್ಳಬಹುದೆಂದು ಸಾಬೀತುಪಡಿಸಲು ಸಾಧ್ಯ ಎಂದು ವಿಜಯಪುರದ ಕೃಷಿ ವಿಜ್ಞಾನ ಕೇಂದ್ರದ ಸಹ ವಿಸ್ತರಣಾ ನಿರ್ದೇಶಕ ಡಾ. ರವೀಂದ್ರ ಬೆಳ್ಳಿ ಅಭಿಪ್ರಾಯಪಟ್ಟರು.
ಜಲಾನಯನ ಅಭಿವೃದ್ಧಿ ಯೋಜನೆಯಡಿಯಲ್ಲಿ ವಿಜಯಪುರ ಜಿಲ್ಲೆ ತಾಳಿಕೋಟೆ ತಾಲೂಕಿನ ವಿವಿಧ ಗ್ರಾಮಗಳಿಂದ ನಿನ್ನೆ ಕೃಷಿ ವಿಜ್ಞಾನ ಕೇಂದ್ರಕ್ಕೆ ತರಬೇತಿಗಾಗಿ ಆಗಮಿಸಿದ್ದ ರೈತರನ್ನು ಉದ್ದೇಶಿಸಿ ಮಾತನಾಡಿದ ಅವರು, “ರೈತರು ಹೈನುಗಾರಿಕೆ, ಮೀನುಕೃಷಿ, ಜೇನುಕೃಷಿ, ರೇಷ್ಮೆ ಕೃಷಿ, ಕಸಿ ಮಾಡುವಿಕೆ, ನೀರಾವರಿ, ತಾಂತ್ರಿಕತೆ ಕುರಿತಂತೆ ಜ್ಞಾನ ಹೊಂದಿರಬೇಕು. ಇದರಿಂದ ಅವರು ಲಾಭಗಳಿಸಲು ಸಾಧ್ಯವಾಗುತ್ತದೆ” ಎಂದು ಸಲಹೆ ನೀಡಿದರು.
ಕೇಂದ್ರದ ಹಿರಿಯ ವಿಜ್ಞಾನಿ ಡಾ. ಎಸ್ ಎಂ ವಸ್ತ್ರದ ಮಾತನಾಡಿ, “ತರಬೇತಿಗೆ ಆಗಮಿಸಿದ ರೈತರಿಗೆ ವಿವಿಧ ಪ್ರಾತ್ಯಕ್ಷಿಕೆ ಘಟಕಗಳಾದ ಜೇನು ಕೃಷಿ, ಎರೆಹುಳು ಕೃಷಿ, ಆಡು ಕುರಿ ಸಾಕಾಣಿಕೆ ಘಟಕ ಹಾಗೂ ವಿವಿಧ ಬೆಳೆ ಪ್ರಾತ್ಯಕ್ಷಿಕೆಗಳಿಗೆ ಭೇಟಿ ಆಯೋಜಿಸಿ ಸ್ಥಳದಲ್ಲಿಯೇ ಮಾಹಿತಿ ನೀಡುವ ವ್ಯವಸ್ಥೆ ಮಾಡಲಾಗಿದೆ. ರೈತರೆಲ್ಲರೂ ಅದರ ಸದುಪಯೋಗ ಪಡೆದುಕೊಳ್ಳಬೇಕು” ಎಂದರು.
ತರಬೇತಿ ನೀಡುವಲ್ಲಿ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳಾದ ಡಾ. ಪ್ರಸನ್, ಡಾ. ಶಿವರಾಜ ಕಾಂಬಳೆ ಸಹಕರಿಸಿದರು.
ಈ ಸುದ್ದಿ ಓದಿದ್ದೀರಾ?: ವಿಜಯಪುರ | ʼಮನುಸ್ಮೃತಿʼ ಆಧಾರಿತ ಸಂವಿಧಾನಕ್ಕೆ ಸನಾತನಿಗಳ ಕೂಗು; ಭಾರತವನ್ನು ಛಿದ್ರಗೊಳಿಸುವ ಹುನ್ನಾರ
ಕಾರ್ಯಕ್ರಮದಲ್ಲಿ ವಾಟರ್ ಸಂಸ್ಥೆಯ ಸಿದ್ದನಗೌಡ ಬಿರಾದಾರ, ನಬಿ ವಾಲಿಕಾರ ಭಾಗವಹಿಸಿದ್ದರು. ಬೆಕಿನಾಳ, ವಣಕ್ಯಾಳ, ಬೂದಿಹಾಳ, ಬನಹಟ್ಟಿ, ನೀರಲಗಿ ಗ್ರಾಮಗಳ 108 ರೈತರು ಭಾಗವಹಿಸಿ ತರಬೇತಿಯ ಪ್ರಯೋಜನ ಪಡೆದುಕೊಂಡರು.
