ಆಶಾ ಕಾರ್ಯಕರ್ತೆಯರ ಹಲವು ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಎಐಯುಟಿಯುಸಿಗೆ ಸಂಯೋಜನೆಗೊಂಡಿರುವ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದಿಂದ ಇದೇ ಫೆಬ್ರವರಿ 13, 14ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ರಾಜ್ಯ ಮಟ್ಟದ ‘ವಿಧಾನಸೌಧ ಚಲೋ’ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಸಂಘಟನೆಯ ರಾಜ್ಯ ಕಾರ್ಯದರ್ಶಿ ಡಿ.ನಾಗಲಕ್ಷ್ಮಿ ಹೇಳಿದರು.
ವಿಜಯಪುರ ಜಿಲ್ಲೆಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, “ರಾಜ್ಯದ ಮೂಲೆ ಮೂಲೆಗಳಿಂದ 20,000ಕ್ಕೂ ಅಧಿಕ ಮಂದಿ ಆಶಾ ಕಾರ್ಯಕರ್ತೆಯರು ಈ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಆಶಾಗಳನ್ನು ವಂಚಿಸುತ್ತಿರುವ ಆರ್‌ಸಿಹೆಚ್ ಪೋರ್ಟಲ್ ಅನ್ನು ವೇತನ ಪಾವತಿ ಪ್ರಕ್ರಿಯೆಯಿಂದ ಡೀಲಿಂಕ್ ಮಾಡಬೇಕು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ಮಾಸಿಕ ವೇತನ ಕನಿಷ್ಠ ₹15,000ಕ್ಕೆ ನಿಗದಿ ಮಾಡಬೇಕು. ಪ್ರೋತ್ಸಾಹಧನವಿಲ್ಲದ ಹೆಚ್ಚುವರಿ ಕೆಲಸಗಳನ್ನು ಹಾಗೂ ಮೊಬೈಲ್ ಆಧಾರಿತ ಕೆಲಸಗಳನ್ನು ಒತ್ತಾಯಪೂರ್ವಕವಾಗಿ ನೀಡಬಾರದು. ಹಲವು ವರ್ಷಗಳಿಂದ ಬಾಕಿಯಿರುವ ಪ್ರೋತ್ಸಾಹಧನ ಬಿಡುಗಡೆ ಮಾಡುವುದು ಸೇರಿದಂತೆ ಮುಂತಾದ ಬೇಡಿಕೆಗಳಿಗಾಗಿ ಆಗ್ರಹಿಸಿ ಈ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ” ಎಂದು ಹೇಳಿದರು.
“8 ವರ್ಷಗಳ ಹಿಂದೆ ರಾಜ್ಯ ಸರ್ಕಾರ, ಜಾರಿಗೊಳಿಸಿದ ಆರ್‌ಸಿಹೆಚ್ ಪೋರ್ಟಲ್‌ಗೆ ಲಿಂಕ್ ಮಾಡಿ ನೀಡುವ ವೇತನ ಮಾದರಿ ಆಶಾ ಕಾರ್ಯಕರ್ತೆಯರಿಗೆ ದೊಡ್ಡ ಶಾಪವಾಗಿ ಪರಿಣಮಿಸಿದೆ. ವಿವಿಧ ದಾಖಲೆಗಳ ಪ್ರಕಾರ ಪ್ರತಿ ತಿಂಗಳು ಕನಿಷ್ಠ ಶೇ.25-30ರಷ್ಟು ಅಂದರೆ 10,000 ರಿಂದ 12,000 ಆಶಾಗಳು ಆರ್‌ಸಿಹೆಚ್ ಪೋರ್ಟಲ್‌ನ ಸಮಸ್ಯೆಗಳಿಂದ ದೊಡ್ಡ ಮೊತ್ತದ ನಷ್ಟಕ್ಕೆ ಒಳಗಾಗಿದ್ದಾರೆ. ಆಶಾಗಳು ಕಷ್ಟಪಟ್ಟು ದುಡಿದ ಹಣ ಸೋರಿಕೆಯಾಗುತ್ತಲೇ ಇದೆ. ಈ ಹಣ ಎಲ್ಲಿ ಹೋಗುತ್ತಿದೆ ಎಂಬ ಪ್ರಶ್ನೆ ಆಶಾಗಳನ್ನು ಕಾಡುತ್ತಲೇ ಇದೆ. ಇದನ್ನು ಸರಿಪಡಿಸುವಂತೆ ಸಂಘವು ಸಾಕಷ್ಟು ಬಾರಿ ಪ್ರತಿಭಟನೆ ನಡೆಸಿದೆ. ಆರೋಗ್ಯ ಸಚಿವರ ಹಾಗೂ ಉನ್ನತ ಅಧಿಕಾರಿಗಳ ಉಪಸ್ಥಿತಿಯಲ್ಲಿ ಹಲವು ಸುತ್ತಿನ ಮಾತುಕತೆ ನಡೆಸಿದೆ. ಸಾಕಷ್ಟು ದಾಖಲೆಗಳನ್ನೂ ಕೂಡ ಸಂಘವು ನೀಡಿದೆ. ಆದರೂ ಆರೋಗ್ಯ ಇಲಾಖೆ ಹೇಗಾದರೂ ಈ ಪೋರ್ಟಲ್‌ಗೆ ಲಿಂಕ್ ಮಾಡಿ ಪ್ರೋತ್ಸಾಹಧನ ನೀಡುವ ಮಾದರಿಯನ್ನು ಉಳಿಸಿಕೊಳ್ಳುವ ತನ್ನ ಹಠಮಾರಿ ಧೋರಣೆನ್ನು ಮುಂದುವರೆಸಿದೆ. ‘ಮೂಗಿಗೆ ತುಪ್ಪ ಸವರಿದಂತೆ’ ಕೆಲವು ಪರಿಹಾರ ನೀಡಲು ಆರೋಗ್ಯ ಇಲಾಖೆ ಮುಂದಾಯಿತೆ ಹೊರತು, ಸಮಸ್ಯೆಗಳ ಆಳಕ್ಕೆ ಇಳಿಯಲೇ ಇಲ್ಲ. ಈ ಮೂಲಕ ಆರೋಗ್ಯ ಇಲಾಖೆ ಸುಮ್ಮನೆ ಕಾಲಹರಣ ಮಾಡಿದೆಯೇ ಹೊರತು, ಬೇರೆ ಏನು ಸಾಧನೆಗೈಯ್ಯಲಿಲ್ಲ” ಎಂದು ಆರೋಪಿಸಿದರು.
“ಆಶಾಗಳ ವೇತನ ಪಾವತಿ ಪ್ರಕ್ರಿಯೆಯನ್ನು ಆರ್‌ಸಿಹೆಚ್ ಪೋರ್ಟಲ್‌ನಿಂದ ಡಿ-ಲಿಂಕ್ ಮಾಡುವುದು. ಈ ಹಿನ್ನಲೆಯಲ್ಲಿ, ಈ ಬೇಡಿಕೆಯ ಜೊತೆಗೆ ₹15,000 ನಿಶ್ಚಿತ ವೇತನ ನೀಡುವಂತೆ, ಇತರ ನ್ಯಾಯಸಮ್ಮತ ಬೇಡಿಕೆಗಳನ್ನು ಈಡೇರಿಸುವಂತೆ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುತ್ತಿದೆ. ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಈ ಪ್ರತಿಭಟನೆಯನ್ನು ಯಶಸ್ವಿಗೊಳಿಸುವಂತೆ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘವು ಕರೆ ನೀಡುತ್ತದೆ. ಹಾಗೆಯೇ ಜನತೆ ಕೂಡ ಎಲ್ಲಾ ರೀತಿಯ ಬೆಂಬಲ ಸಹಕಾರ ನೀಡಬೇಕು” ಎಂದು ಮನವಿ ಮಾಡಿದರು.
“ಕಳೆದ 8 ವರ್ಷಗಳಿಂದ ದುಡಿದಷ್ಟು ಪ್ರೋತ್ಸಾಹ ಧನ ಸಿಗದೇ ಆಗುತ್ತಿರುವ ವಂಚನೆ ತಡೆಗಟ್ಟಲು ಆಶಾ ಪೇಮೆಂಟ್ ಪ್ರಕ್ರಿಯೆಯಿಂದ ಆರ್‌ಸಿಹೆಚ್ ಪೋರ್ಟಲ್ ಅನ್ನು ಡಿ-ಲಿಂಕ್ ಮಾಡಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಆಶಾ ಕಾರ್ಯಕರ್ತೆಯರಿಗೆ ಮಾಸಿಕ ಕನಿಷ್ಠ ₹15,000 ಪ್ರೋತ್ಸಾಹಧನ ನೀಡಬೇಕು. ಮೊಬೈಲ್ ಕೆಲಸಗಳನ್ನು ಒತ್ತಾಯ ಪೂರಕವಾಗಿ ಮಾಡಿಸಿಕೊಳ್ಳುತ್ತಿರುವುದನ್ನು ಕೈಬಿಡಬೇಕು. ಇಲ್ಲದಿದ್ದಲ್ಲಿ ಮೊಬೈಲ್, ಡಾಟಾ ಒದಗಿಸಬೇಕು. ಮೊಬೈಲ್ ಕೆಲಸಗಳಿಗೆ ಪ್ರೋತ್ಸಾಹ ಧನ ನಿಗದಿ ಮಾಡಬೇಕು. ಯಾರಿಗೆ ಮೊಬೈಲ್ ಕೆಲಸ ಮಾಡಲು ಆಗುವುದಿಲ್ಲವೋ ಅವರಿಗೆ ಪರ್ಯಾಯ ವ್ಯವಸ್ಥೆ ಮಾಡಬೇಕು” ಎಂದು ಆಗ್ರಹಿಸಿದರು.
ಈಗಾಗಲೇ ಇಲಾಖಾ ಸಚಿವರು, ಉನ್ನತ ಅಧಿಕಾರಿಗಳ ಸಭೆಯಲ್ಲಿ ಸರ್ಕಾರಕ್ಕೆ ಶಿಫಾರಸು ಮಾಡಿ ಪ್ರಸ್ತಾವನೆ ಕಳುಹಿಸಿರುವ, ಸರ್ಕಾರದಿಂದ ಆದೇಶಿಸಬೇಕಾದ ಬೇಡಿಕೆಗಳು
“ನಗರ ಆಶಾ ಕಾರ್ಯಕರ್ತೆಯರ ಹೆಚ್ಚುವರಿ ಕೆಲಸ ಮತ್ತು ನಗರ ಜೀವನದ ದುಬಾರಿ ಖರ್ಚು ವೆಚ್ಚಗಳಿಗೆ ಅನುಗುಣವಾಗಿ ಕನಿಷ್ಟ ₹2,000 ಗೌರವಧನವನ್ನು ಹೆಚ್ಚಿಗೆ ಮಾಡಬೇಕು. 60 ವರ್ಷಕ್ಕೆ ಸೇವಾ ನಿವೃತ್ತಿ ಪಡೆಯುವ ಕಾರ್ಯಕರ್ತೆಯರಿಗೆ ಪಶ್ಚಿಮ ಬಂಗಾಳ ರಾಜ್ಯದಲ್ಲಿ ಇರುವಂತೆ ₹3 ಲಕ್ಷಕ್ಕೆ ಹೆಚ್ಚಿಸಬೇಕು. ತೀವ್ರವಾದ ಅನಾರೋಗ್ಯ, ಚಿಕಿತ್ಸೆ ಪಡೆಯುವ ಅವಧಿಯಲ್ಲಿ ಕನಿಷ್ಟ 3 ತಿಂಗಳುಗಳ ಕಾಲ ರಾಜ್ಯ ಸರ್ಕಾರದ ನಿಶ್ಚಿತ ಗೌರವಧನ ಮತ್ತು ರುಟೀನ್ ಚಟುವಟಿಕೆಗಳ ನಿಗದಿತ ಪ್ರೋತ್ಸಾಹ ಧನ ನೀಡಬೇಕು” ಎಂದು ಒತ್ತಾಯಿಸಿದರು.
“ಸುವರ್ಣ ಆರೋಗ್ಯ ಟ್ರಸ್ಟ್‌ನ ಆರೋಗ್ಯ ವಿಮಾ ಯೋಜನೆಯಂತೆ ₹5 ಲಕ್ಷದವರೆಗೆ ವಿವಿಧ ಕಾಯಿಲೆಗಳಿಗೆ ಉಚಿತ ಚಿಕಿತ್ಸೆಯನ್ನು ಆಶಾ ಮತ್ತು ಆಶಾ ಕುಟುಂಬಕ್ಕೆ ನೀಡಬೇಕು. ಕಳೆದ 2 ವರ್ಷದಿಂದ ನೀಡದಿರುವ ಸಮವಸ್ತ್ರಗಳನ್ನು ಒದಗಿಸಲು ಕೂಡಲೇ ಕ್ರಮ ಕೈಗೊಳ್ಳಬೇಕು. ಕಳೆದ 4 ವರ್ಷದಿಂದ ನೀಡದಿರುವ ಪ್ರತಿ ವರ್ಷ ನೀಡುವ ಡೈರಿಯನ್ನು ನಿಗದಿತ ಸಮಯಕ್ಕೆ ಒದಗಿಸಬೇಕು” ಎಂದು ಆಗ್ರಹಿಸಿದರು.
ಆದ್ಯತೆಯ ಮೇಲೆ ಸರ್ಕಾರದಿಂದ ಈಡೇರಬೇಕಾದ ಬೇಡಿಕೆಗಳು
“ಕಳೆದ ಹಲವಾರು ವರ್ಷಗಳಿಂದ ಆರ್‌ಸಿಹೆಚ್ ಪೋರ್ಟಲ್‌ನ ವಿವಿಧ ಸಮಸ್ಯೆಗಳ ಕಾರಣಗಳಿಂದ ಬಾಕಿಯಿರುವ ಪ್ರೋತ್ಸಾಹಧನವನ್ನು ನೀಡಲು ಕ್ರಮ ಕೈಗೊಳ್ಳಬೇಕು. 2019-21ರ ವರೆಗಿನ ಕೋವಿಡ್ ವಿಶೇಷ ಪ್ರೋತ್ಸಾಹ ಧನ ಹಾಗೂ ನಾನ್ ಎಂಸಿಟಿಎಸ್ ಹಣ ₹2000ವನ್ನು ಎಲ್ಲ ಆಶಾಗಳಿಗೆ ಪಾವತಿಸಬೇಕು. ಆಶಾ ಕಾರ್ಯಕ್ರಮದಲ್ಲಿ ಫೆಸಿಲಿಟೇಟರ್ ಹುದ್ದೆಯಲ್ಲಿ ಸೇವೆ ಸಲ್ಲಿಸುತ್ತಿರುವವರಿಗೆ ಅವರ ಹುದ್ದೆಗೆ ತಕ್ಕಂತೆ ಮಾಸಿಕ ವೇತನ, ಪ್ರಯಾಣ ಭತ್ಯೆ ಇತ್ಯಾದಿಗಳನ್ನು ಹೆಚ್ಚಿಸಬೇಕು. ಆಶಾಗಳ ಸಂಖ್ಯೆಗೆ ಅನುಗುಣವಾಗಿ ಆಶಾ ಸುಗಮಗಾರರನನ್ನು ನೇಮಿಸಬೇಕು. ನಗರ ಪ್ರದೇಶಗಳಿಗೂ ಸುಗಮಕಾರರನ್ನು ನೇಮಿಸಬೇಕು. ಆಶಾ ಕಾರ್ಯಕರ್ತೆಯರನ್ನು ಕಾರ್ಮಿಕರೆಂದು ಪರಿಗಣಿಸಿ, ಕನಿಷ್ಟ ವೇತನ, ಗ್ರಾಜ್ಯುಟಿ, ಪಿಎಫ್-ಇಎಸ್‌ಐ ಸೌಲಭ್ಯ ನೀಡಬೇಕು” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ಐದು ಗ್ಯಾರಂಟಿ ಯೋಜನೆಗಳು ಜನಪರವಾಗಿವೆ : ಶಾಸಕ ಟಿ. ರಘುಮೂರ್ತಿ
ಪತ್ರಿಕಾಗೋಷ್ಠಿಯಲ್ಲಿ ಎಐಯುಟಿಯುಸಿಯ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಎಚ್ ಟಿ, ಸಂಘಟನಾಕಾರ ಭರತಕುಮಾರ ಮತ್ತು ಆಶಾ ಮುಖಂಡರುಗಳಾದ ಭಾರತಿ ದೇವಕತೆ, ಅಂಬಿಕಾ ಒಳಸಂಗ, ಜ್ಯೋತಿ ಅಂಬಲಿ, ಲಕ್ಷ್ಮೀ ಸೀಮಿಕೇರಿ, ಲೈಲಾ ಕಾಶಿಬಾಯಿ, ಸುಮಂಗಲಾ, ಗೀತಾ, ಸಾವಿತ್ರಿ ಸೇರಿದಂತೆ ಇತರರು ಇದ್ದರು.