ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಸಮುದಾಯಗಳಿಗೆ ಮೀಸಲಿರುವ ಆಸ್ತಿ, ಅನುದಾನವನ್ನು ದುರ್ಬಳಕ ಮಾಡಿಕೊಂಡು, ಆ ಸಮುದಾಯಗಳ ಹಕ್ಕನ್ನು ಕಿತ್ತುಕೊಳ್ಳಲಾಗುತ್ತಿದೆ. ಇಂತಹ ಅಕ್ರಮಗಳು ನಿಲ್ಲಬೇಕು. ದಲಿತರ ಮೇಲೆ ದೌರ್ಜನ್ಯ ಎಸಗಿದವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ದುರ್ಬಳಕೆಯಾದ ಆಸ್ತಿ, ಅನುದಾನವನ್ನು ಹಿಂಪಡೆದು, ಎಸ್‌ಸಿ/ಎಸ್‌ಟಿ ಆಡಳಿತ ಮಂಡಳಿಗೆ ನೀಡಬೇಕೆಂದು ವಿಕಾಸ್ ಹೊಸಮನಿ ಆಗ್ರಹಿಸಿದರು.
ಎಸ್‌ಸಿ/ಎಸ್‌ಟಿ ಅನುದಾನ ದುರ್ಬಳಕೆ ವಿರುದ್ಧ ವಿಜಯಪುರ ಸಮಾಜಕಲ್ಯಾಣ ಇಲಾಖೆ ಕಚೇರಿ ಎದುರು ಕಳೆದ 25 ದಿನಗಳಿಂದ ವಿಕಾಸ್ ಹೊಸಮನಿ ಪ್ರತಿಭಟನಾ ಧರಣಿ ನಡೆಸುತ್ತಿದ್ದಾರೆ. ಇಂಡಿ ತಾಲೂಕಿನ ಎಸ್‌ಸಿ/ಎಸ್‌ಟಿ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ನಿಲಯ, ಶ್ರೀ ಶಂಕರಲಿಂಗ ಉಚಿತ ಪ್ರಸಾದ ನಿಲಯವನ್ನು ಎಸ್‌ಸಿ/ಎಸ್‌ಟಿ ಸಮುದಾಯಗಳಿಗೆ ಸೇರದವರು ನಕಲಿ ದಾಖಲೆ ಕೊಟ್ಟು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ” ಎಂದು ಅವರು ಆರೋಪಿಸಿದ್ದಾರೆ.
“ಕೆಲವು ದಲಿತ ಸಮುದಾಯಕ್ಕೆ ಸೇರದವರು ಸಮಾಜ ಕಲ್ಯಾಣ ಇಲಾಖೆಗೆ ನಕಲಿ ದಾಖಲೆಗಳನ್ನು ನೀಡಿ ಅನುದಾನ ಪಡೆದು, ದುರ್ಬಳಕೆ ಮಾಡುತ್ತಿದ್ದಾರೆ. ಹಣಕಾಸು ಮತ್ತು ಇನ್ನಿತರ ದಾಖಲೆಗಳಲ್ಲಿ ಆಕ್ರಮ, ಅವ್ಯವಹಾರ ನಿರಂತರವಾಗಿ ನಡೆಯುತ್ತಿದೆ. ಎಸ್‌ಟಿ/ಎಸ್‌ಟಿ ಸಮುದಾಯಗಳಿಗೆ ಸಿಗಬೇಕಾದ ಶಿಕ್ಷಣ ಸಂಸ್ಥೆಯ ಆಸ್ತಿ, ಅನುದಾನವನ್ನು ಪ್ರಬಲ ಜಾತಿಗರು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಅಂತಹವರ ವಿರುದ್ಧ ಕ್ರಮ ಕೈಗೊಳ್ಳಬೇಕು” ಎಂದು ಆಗ್ರಹಿಸಿದ್ದಾರೆ.
ವಿಕಾಸ್ ಹೊಸಮನಿ ಅವರ ಧರಣಿಗೆ ಕರ್ನಾಟಕ ಜೈ ಭೀಮ್ ಆರ್ಮಿ ಏಕತಾ ಮಿಷನ್‌ನ ರಾಜ್ಯ ಅಧ್ಯಕ್ಷ ಮತನ್, ಜಿಲ್ಲಾ ಅಧ್ಯಕ್ಷ ಮಲ್ಲು ಜಾಲಗೇರ ಹಾಗೂ ಸಂಘಟನೆಯ ಕಾರ್ಯಕರ್ತರು ಬೆಂಬಲ ನೀಡಿದ್ದಾರೆ.