ಔಪಚಾರಿಕ ಶಿಕ್ಷಣದೊಂದಿಗೆ ವೃತ್ತಿ ಶಿಕ್ಷಣವನ್ನು ವಿಲೀನಗೊಳಿಸಿ ವಿದ್ಯಾರ್ಥಿಗಳಿಗೆ ಮುಂದಿನ ಶೈಕ್ಷಣಿಕ ಹಾಗೂ ವೃತ್ತಿ ಜೀವನದ ಯೋಜನೆಗಳನ್ನು ತಯಾರು ಮಾಡಲು ಅನುಕೂಲ ಮಾಡುವುದು ಅಗತ್ಯವಿದೆ ಎಂದು ಉಪ ಪ್ರಾಚಾರ್ಯ ರಾಘವೇಂದ್ರ ಎಚ್ ಪುರೋಹಿತ್ ಅಭಿಪ್ರಾಯಪಟ್ಟರು.
ಜಿಲ್ಲೆಯ ಬಬಲೇಶ್ವರ ತಾಲೂಕಿನ ಕರ್ನಾಟಕ ಪಬ್ಲಿಕ್ ಶಾಲೆ ಮಮದಾಪುರದಲ್ಲಿ “ರಂಗೋತ್ಸವ ಮತ್ತು ನನ್ನ ವೃತ್ತಿ ನನ್ನ ಆಯ್ಕೆ” ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ವಿದ್ಯಾರ್ಥಿಗಳಿಗೆ ವೃತ್ತಿ ಯೋಜನೆಯ ಆಶಾದಾಯಕ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳಲು ಕರ್ನಾಟಕ ಪಬ್ಲಿಕ್ ಶಾಲೆ ಮಮದಾಪುರ ದಲ್ಲಿ ವೃತ್ತಿ ಯೋಜನ ಕೋಶವನ್ನು ಪ್ರಾರಂಭಿಸಿದೆ. ವಿದ್ಯಾರ್ಥಿಗಳು ಸಾಧ್ಯವಾದಷ್ಟು ಇದರ ಪ್ರಯೋಜನ ಪಡೆದುಕೊಳ್ಳಬೇಕು” ಎಂದರು.
ಕಾರ್ಯಕ್ರಮದಲ್ಲಿ ಮಕ್ಕಳಿಂದ ತಯಾರಿಸಲ್ಪಟ್ಟ ಚಿತ್ರಕಲೆ ಮತ್ತು ಕರಕುಶಲ ವಸ್ತುಗಳ ಪ್ರದರ್ಶನವನ್ನು ಉದ್ಘಾಟಿಸಿದ ಕರ್ನಾಟಕ ಲಲಿತಕಲಾ ಅಕಾಡೆಮಿಯ ಸದಸ್ಯೆ ರಾಜೇಶ್ವರಿ ಮೋಪಗಾರ, ತಮ್ಮ ನಿಜ ಜೀವನದ ಉದಾಹರಣೆಯೊಂದಿಗೆ ಮಗುವಿನ ಜೀವನದಲ್ಲಿ ವೃತ್ತಿ ಆಯ್ಕೆ ಸ್ವತಂತ್ರವಾಗಿ ಹಾಗೂ ಆಶಾದಾಯಕವಾಗಿ ಇರಬೇಕೆಂದರು.
ಇದನ್ನೂ ಓದಿ: ವಿಜಯಪುರ | ಕುಡಿಯುವ ನೀರು ಒದಗಿಸುವ ಡಿಬಿಒಟಿ ಯೋಜನೆ-1ಯಡಿ ಪೈಪಲೈನ್ ಆಳವಡಿಕೆಗೆ ಸೂಚನೆ
ಚಿತ್ರಕಲಾ ಶಿಕ್ಷಕಿ ಎಸ್ ಎಸ್ ಮೊಗಲಿ, ಹಿರಿಯ ಚಿತ್ರಕಲಾ ಶಿಕ್ಷಕ ರಶೀದ್ ಖಾನ್, ಶಿಕ್ಷಕ ಮಹದೇವಪ್ಪ ಮೊಪಗಾರ, ಭಾಗ್ಯಶ್ರೀ ಎಸ್ ಗಚ್ಚಿನಮಠ, ಮಹಾಂತೇಶ್ ಜಿ ಕುರಿ, ಅಶೋಕ್ ಎಸ್ ಇಂಡಿ ಹಾಗೂ ಸಮಸ್ತ ಕೆಪಿಎಸ್ ಪರಿವಾರದ ಶಿಕ್ಷಕರು ಹಾಗೂ 800ಕ್ಕೂ ಹೆಚ್ಚು ಮಕ್ಕಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
