ವಿಜಯಪುರ | ʼನಾಲತವಾಡದಲ್ಲಿ ಪೂರ್ಣ ಪ್ರಮಾಣದ ಪೊಲೀಸ್‌ ಠಾಣೆ ಬೇಕುʼ- ಹೆಚ್ಚಿದ ಜನದನಿ

Date:

Advertisements

ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಪ್ರಮುಖ ಪಟ್ಟಣವಾದ ನಾಲತವಾಡದಲ್ಲಿ ಇದೀಗ ಪೊಲೀಸ್ ವ್ಯವಸ್ಥೆಯ ಸುಧಾರಣೆಯ ಅಗತ್ಯತೆಯ ಕುರಿತ ಕೂಗು ಎದ್ದಿದೆ. ಈಗಿನ ಪೊಲೀಸ್ ಹೊರ ಠಾಣೆಯನ್ನೇ ಪೂರ್ಣ ಪ್ರಮಾಣದ ಪೊಲೀಸ್ ಠಾಣೆಯನ್ನಾಗಿ ಮೇಲ್ದರ್ಜೆಗೇರಿಸಿ, ಪಿಎಸ್ಐರನ್ನು ನೇಮಕ ಮಾಡಬೇಕು ಎಂಬ ಒತ್ತಾಯ ಸ್ಥಳೀಯರಲ್ಲಿ ವ್ಯಾಪಕವಾಗಿದೆ.

ಆರ್ಥಿಕವಾಗಿ ಚುರುಕುಗೊಳ್ಳುತ್ತಿರುವ ಈ ಪಟ್ಟಣದಲ್ಲಿ ವ್ಯಾಪಾರ, ವಹಿವಾಟು ಹಾಗೂ ಕೈಗಾರಿಕೆ ದಿನದಿಂದ ದಿನಕ್ಕೆ ಪ್ರಬಲವಾಗುತ್ತಿದ್ದು, ಜನಸಂಖ್ಯೆಯೂ ತೀವ್ರವಾಗಿ ಏರುತ್ತಿದೆ. ಈ ಹಿನ್ನಲೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಬಿಗಿಯಾಗಿರಬೇಕೆಂಬ ಬೇಡಿಕೆ ಹೆಚ್ಚು ಪ್ರಾಮುಖ್ಯತೆ ಪಡೆದಿದೆ.

ನಾಲತವಾಡದವರೇ ಆದ ಕ್ಷೇತ್ರದ ಶಾಸಕ ಸಿ ಎಸ್ ನಾಡಗೌಡ ಅವರು ಪಟ್ಟಣದ ಅಭಿವೃದ್ಧಿಗೆ ಬದ್ಧರಾಗಿದ್ದು, ಇಲ್ಲಿ ಪೂರ್ಣ ಪ್ರಮಾಣದ ಪೊಲೀಸ್ ಠಾಣೆ ಸ್ಥಾಪನೆಗೆ ಆದ್ಯತೆ ನೀಡಲಿದ್ದಾರೆ ಎಂಬ ವಿಶ್ವಾಸ ಜನಮಾನಸದಲ್ಲಿ ಬೇರೂರುತ್ತಿರುವುದು ಗಮನಾರ್ಹವಾಗಿದೆ.

Advertisements

ಕೃಷ್ಣ ಮೇಲ್ದಂಡೆ ಯೋಜನೆಯಲ್ಲಿ ಮುಳುಗಿದ ಗ್ರಾಮಗಳಾದ ಬಿಜ್ಜೂರ, ಸುಲ್ತಾನಾಪುರ, ಖಾನಾಪುರ, ಕಾನೇಕೇರಿ, ಚಿಕ್ಕ ಬಿಜ್ಜುರ, ಲೋಟಗೇರಿ, ಘಾಳಪೊಜಿ, ಟಕ್ಕಳಕಿ, ಇಂಗಳಗಿ, ಬಲದಿನ್ನಿ, ಕಾರಕೋರ, ರಕ್ಕಸಗಿ, ಬಂಗಾರ ಗುಂಡ, ವೀರೇಶ ನಗರ, ನಾಗದೇನಾಳ ಗ್ರಾಮಗಳಿಗೆ ಪಟ್ಟಣದಿಂದ ಸುಮಾರು 15 ಕಿಮೀ ವ್ಯಾಪ್ತಿಯಲ್ಲಿ ಪುನರ್ವಸತಿ ಕಲ್ಪಿಸಲಾಗಿದೆ. ಪ್ರತ್ಯೇಕ ಗ್ರಾಮಗಳಾಗಿದ್ದರೂ ಪಟ್ಟಣದ ವ್ಯಾಪ್ತಿಯಲ್ಲಿವೆ. ಪಟ್ಟಣ ಬೆಳೆಯುತ್ತಿದೆ. ಇಪ್ಪತ್ತಕ್ಕೂ ಹೆಚ್ಚು ಬಡಾವಣೆಗಳು ತಲೆಯೆತ್ತಿ ನಿಂತಿವೆ. ಇಲ್ಲಿ ಸರ್ಕಾರಿ ಹಾಗೂ ಖಾಸಗಿ ಸೇರಿದಂತೆ ಸುಮಾರು 35 ಶಿಕ್ಷಣ ಸಂಸ್ಥೆಗಳು, 30ಕ್ಕೂ ಅಧಿಕ ವಿವಿಧ ರೀತಿಯ ಸಂಘ-ಸಂಸ್ಥೆಗಳು ಕ್ರಿಯಾಶೀಲವಾಗಿವೆ. ಕಬ್ಬು ಬೆಳೆಯುವ ಸಲುವಾಗಿ, ಕಾಲುವೆ ನೀರಿಗಾಗಿ ಹೋರಾಟ, ಪ್ರತಿಭಟನೆ ನಡೆಯುತ್ತಲೇ ಇರುತ್ತವೆ. ಅದಕ್ಕಾಗಿ ಇಲ್ಲಿ ಪಿಎಸ್ಐ ಹಾಗೂ ಎಎಸ್‌ಐ ಒಳಗೊಂಡ ದೊಡ್ಡ ಪೊಲೀಸ್ ಠಾಣೆಯ ಅಗತ್ಯ ಇದೆ ಎನ್ನುವುದು ಸ್ಥಳೀಯರ ಮಾತು.

ಪಟ್ಟಣದಲ್ಲಿ ವಿಜಯಪುರ, ಯಾದಗಿರಿ ಹಾಗೂ ರಾಯಚೂರ ರಾಜ್ಯ ಹೆದ್ದಾರಿಗಳಿವೆ. ಸಮೀಪದಲ್ಲಿ ಸಕ್ಕರೆ ಕಾರ್ಖಾನೆ, ಬೃಹತ್ ಎಣ್ಣೆ ಉದ್ಯಮಗಳು ಇರುವುದರಿಂದ ಕಾರ್ಮಿಕ ವಾಹನಗಳ ಸಂಖ್ಯೆ ಅಧಿಕವಾಗುತ್ತಾ ಬಂದಿದೆ. ಕಬ್ಬು ಕಟಾವು ಹಂಗಾಮಿನಲ್ಲಿ 5,000ಕ್ಕೂ ಅಧಿಕ ಕೂಲಿ ಕಾರ್ಮಿಕರು, ಐದು ನೂರಕ್ಕೂ ಅಧಿಕ ಕಬ್ಬು ತುಂಬುವ ಟ್ರ್ಯಾಕ್ಟರ್ ಮಹಾರಾಷ್ಟ್ರದಿಂದ ಬರುತ್ತವೆ. ಸಮೀಪದಲ್ಲಿ ಆಂಧ್ರಪ್ರದೇಶ ಮತ್ತು ತೆಲಂಗಾಣಕ್ಕೆ ಸಂಪರ್ಕ ಕಲ್ಪಿಸುವ ಹೆದ್ದಾರಿಗಳಿವೆ. ಕೃಷ್ಣ ನದಿಗೆ ನಿರ್ಮಿಸಿರುವ ಬಸವಸಾಗರ ಜಲಾಶಯ ಹತ್ತಿರವಿದೆ. 40 ಹಳ್ಳಿಗಳ ಹೋಬಳಿ ಕೇಂದ್ರವಾದ್ದರಿಂದ, ಹಬ್ಬ ಜಾತ್ರೆಗಳಿಗೆ, ಮದುವೆಯ ಜವಳಿ ಹಾಗೂ ಬಂಗಾರ ಖರೀದಿ ಜೋರಾಗಿರುತ್ತದೆ. ಇದರಿಂದ ಸಹಜವಾಗಿ ಸಂಚಾರ ದಟ್ಟಣೆ ಅಧಿಕವಾಗುತ್ತದೆ.

ಅಪಘಾತಗಳು ನಿರಂತರವಾಗಿದ್ದು, ಪೊಲೀಸರು ಸಂಚಾರ ನಿಯಂತ್ರಿಸಲು ಹರಸಹಾಸ ಪಡುತ್ತಿದ್ದಾರೆ. ಸೋಮವಾರ ಸಂತೆಯ ದಿನದಂದು ಮುಖ್ಯ ಬಜಾರ್‌ನಲ್ಲಿ ಜನದಟ್ಟಣೆ ಉಸಿರು ಕಟ್ಟಿಸುವ ಸ್ಥಿತಿಯಲ್ಲಿರುತ್ತದೆ. ಯಾರ ಜೇಬನ್ನು ಯಾರು ತುಂಬಿಸುತ್ತಾರೆ ದೇವರೇ ಬಲ್ಲ. ಈಗಿರುವ ಮೂವರು ಪೊಲೀಸ್ ಸಿಬ್ಬಂದಿ ಒತ್ತಡದಲ್ಲಿ ಕೆಲಸ ಮಾಡುತ್ತಾರೆ. ಕೃಷ್ಣ ನದಿ ತೀರದ ಗ್ರಾಮೀಣ ಪ್ರದೇಶಗಳಲ್ಲಿ ಆಗಾಗ ಕಳ್ಳತನ ಪ್ರಕರಣಗಳು ದಾಖಲಾಗುತ್ತಿರುತ್ತವೆ. ಪಟ್ಟಣ ಹಾಗೂ ಗ್ರಾಮೀಣಕ್ಕೆ ಒಂದೇ ಠಾಣೆ ಇದೆ. ಇದರಿಂದ ಜನರಿಗೆ ಪರಿಣಾಮಕಾರಿ ಸೇವೆ ಒದಗಿಸಲು ಸಾಧ್ಯವಾಗದೇ ಇರುವುದರಿಂದ ಇಲ್ಲಿನ ಪಟ್ಟಣಕ್ಕೆ ಪೊಲೀಸ್ ಠಾಣೆ ಅಗತ್ಯವಿದೆ ಎಂಬ ಮಾತು ವ್ಯಾಪಕವಾಗಿ ಕೇಳಿ ಬರುತ್ತದೆ.

ಇದನ್ನೂ ಓದಿ: ವಿಜಯಪುರ | ಲ್ಯಾಪ್‌ಟಾಪ್ ವಿತರಣೆಯಲ್ಲಿ ಸರ್ಕಾರದ ವಿಳಂಬ ನೀತಿ ಖಂಡಿಸಿ ದವಿಪ ಪ್ರತಿಭಟನೆ

ಈ ದಿನಕ್ಕೆ ಪ್ರತಿಕ್ರಿಯೆಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ, “ನಾಲತವಾಡದಲ್ಲಿ ಸದ್ಯ ಹೊರ ಠಾಣೆ ಇದೆ. ಪೂರ್ಣ ಪ್ರಮಾಣದ ಠಾಣೆ ಅಗತ್ಯ ಇದೆಯೇ ಎಂಬುದರ ಕುರಿತು ಪರಿಶೀಲಿಸಿ, ಅಗತ್ಯ ಇದ್ದರೆ ಆರಂಭಿಸಲು ಕ್ರಮ ಕೈಗೊಳ್ಳಲಾಗುವುದು” ಎಂದರು.

ಪಟ್ಟಣ ಪಂಚಾಯಿತಿ ಇಒಐಜಿ ಕೊಣ್ಣೂರು ಮಾತನಾಡಿ, “ರಾತ್ರಿಯಾದರೆ ಯಾವ ಓಣಿಯಲ್ಲಿ ಕಳ್ಳತನವಾಗುತ್ತದೆ ಎಂಬ ಭಯ ಕಾಡುತ್ತಿದೆ. ಪಟ್ಟಣದ ವ್ಯಾಪ್ತಿ ಬೃಹತ್ ಆಗಿ ಬೆಳೆಯುತ್ತಿದ್ದು, ಒಬ್ಬರೇ ಪೇದೆ ರಾತ್ರಿ ಗಸ್ತು ತಿರುಗುತ್ತಿದ್ದಾರೆ. ಠಾಣೆ ಮೇಲ್ದರ್ಜೆಗೇರಿಸಿ, ಸಿಬ್ಬಂದಿ ಹೆಚ್ಚಿಸಬೇಕು” ಎಂದರು.

ಡಿಎಸ್ಎಸ್ ತಾಲೂಕು ಮುಖಂಡ ಗುಂಡಪ್ಪ ಚಲವಾದಿ ಮಾತನಾಡಿ, “ನಾಲತವಾಡ ಪಟ್ಟಣ ಜಿಲ್ಲೆಯಲ್ಲಿ ಅಧಿಕ ಪ್ರಮಾಣದಲ್ಲಿ ಬೆಳೆಯುತ್ತಿದೆ ಜೊತೆಗೆ ಅಪರಾಧ ಕೃತ್ಯಗಳೂ ಹೆಚ್ಚಾಗುತ್ತಿವೆ. ಈ ಕುರಿತು ಪೊಲೀಸ್‌ ಇಲಾಖೆ ಕೂಡಲೇ ಗಮನಹರಿಸಬೇಕು. ಹೊರ ಠಾಣೆಯನ್ನು ಪೂರ್ಣ ಪ್ರಮಾಣದ ಠಾಣೆಯನ್ನಾಗಿ ಮೇಲ್ದರ್ಜೆಗೇರಿಸಿ ಸಿಬ್ಬಂದಿಗಳನ್ನು ಹೆಚ್ಚಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಪಟ್ಟಣದಾದ್ಯಂತ ಸಮಾಜಘಾತುಕ ಕೆಲಸಗಳು ಹೆಚ್ಚಾಗುವ ಸಂಭವವಿದೆ” ಎಂದರು.

ಯುವಜನ ಸೇನೆ ರಾಜ್ಯಾಧ್ಯಕ್ಷ ಶಿವಾನಂದ ವಾಲಿ ಮಾತನಾಡಿ, “16 ವರ್ಷದ ಯುವಕರು ಗಾಂಜಾದಂತಹ ಮಾದಕ ವಸ್ತುಗಳ ವ್ಯಸನಿಗಳಾಗುತ್ತಿದ್ದಾರೆ. ಇತ್ತೀಚಿಗೆ ವಸತಿ ನಿಲಯದಲ್ಲಿ ನಡೆದ ಪೋಕ್ಸೋ ಪ್ರಕರಣ, ಮಹಿಳೆಗೆ ಭದ್ರತೆ ಇರದೆ ನರಳುತ್ತಿರುವ ನಾಲತವಾಡ ಬಸ್ ನಿಲ್ದಾಣ ಸೇರಿದಂತೆ ಹಲವು ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ಠಾಣೆಯನ್ನು ಮೇಲ್ದರ್ಜೆಗೇರಿಸಬೇಕು. 40 ಹಳ್ಳಿಗಳ ಸುಮಾರು 25 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ ಪಟ್ಟಣಕ್ಕೆ ಕೇವಲ ಮೂವರು ಪೇದೆಗಳು ಭದ್ರತೆ ಕೊಡಲು ಹೇಗೆ ಸಾಧ್ಯ? ಈ ಹಿಂದೆ ಪೊಲೀಸ್ ಠಾಣೆ ಬೇಕು ಅಂತ ಹೋರಾಟ ಮಾಡಿದಾಗ ಅರೆಸ್ಟ್ ಮಾಡಿದ್ದರು. 1985 ರಲ್ಲಿ ಸದನದಲ್ಲಿ ಪ್ರಪೋಸಲ್ ಇದ್ದಾಗ್ಯೂ ರಾಜಕೀಯ ಇಚ್ಛಾ ಶಕ್ತಿ ಕೊರತೆಯಿಂದ ನೆನೆಗುದಿಗೆ ಬಿದ್ದಿರುವುದು ವಿಪರ್ಯಾಸ” ಎಂದರು.

ಇದನ್ನೂ ಓದಿ: ರಾಜ್ಯದ ಹಲವೆಡೆ ಭಾರೀ ಮಳೆ; ಬೆಳೆಹಾನಿಯಿಂದ ಕಾಂಗಾಲಾದ ರೈತರು

ನಾಲತವಾಡ ಪಟ್ಟಣದ ವೇಗವಾಗಿ ನಡೆಯುತ್ತಿರುವ ವಿಸ್ತರಣೆ ಮತ್ತು ಜನಸಂಖ್ಯೆ ಹೆಚ್ಚಳದ ಬೆನ್ನಲ್ಲೆ, ಇಲ್ಲಿ ಪೊಲೀಸ್ ವ್ಯವಸ್ಥೆ ಬಲಪಡಿಸುವ ಅಗತ್ಯ ದಿನದಿಂದ ದಿನಕ್ಕೆ ತೀವ್ರವಾಗುತ್ತಿದೆ. ಕಾನೂನು-ಸುವ್ಯವಸ್ಥೆಯ ದೃಷ್ಟಿಯಿಂದ ಪೂರ್ಣ ಪ್ರಮಾಣದ ಪೊಲೀಸ್ ಠಾಣೆಯ ಸ್ಥಾಪನೆ ಮಾತ್ರವಲ್ಲ, ಪಿಎಸ್ಐ ನೇಮಕವೂ ಅನಿವಾರ್ಯವಾಗಿದೆ ಎಂಬುದು ಸ್ಥಳೀಯರ ಅಭಿಪ್ರಾಯ. ಈಗ ಇದು ಕೇವಲ ಬೇಡಿಕೆಯಷ್ಟೇ ಅಲ್ಲ, ಒಂದು ಮೂಲಭೂತ ಅಗತ್ಯವಾಗಿದೆ. ಜನತೆ ತಮ್ಮ ಧ್ವನಿಯನ್ನು ಹತ್ತಿರವಿರುವ ಶಾಸಕರವರೆಗೆ ತಲುಪಿಸಿದ್ದು, ಆ ಧ್ವನಿಗೆ ಸ್ಪಂದನೆ ಸಿಗುವ ನಿರೀಕ್ಷೆಯಲ್ಲಿದ್ದಾರೆ.

WhatsApp Image 2025 02 05 at 18.09.20 1
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೀದರ್‌ | ಎಫ್‌ಆರ್‌ಎಸ್ ಕ್ರಮ ಖಂಡಿಸಿ ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ

ಅಂಗನವಾಡಿ ಕಾರ್ಯಕರ್ತೆಯರ ಮುಖಚರ್ಯೆ ಗುರುತಿಸುವ ಕ್ರಮಕ್ಕೆ (ಎಫ್ಆರ್‌ಎಸ್) ತಡೆ ಹಾಗೂ ಐಸಿಡಿಎಸ್...

ಯೂಟ್ಯೂಬರ್ ಸಮೀರ್ ಎಂ.ಡಿ. ಮನೆ ಸುತ್ತುವರಿದ ಖಾಕಿ ಪಡೆ, ತಾಯಿಯ ವಿಚಾರಣೆ

ಯೂಟ್ಯೂಬರ್ ಸಮೀರ್.ಎಂ.ಡಿ ಬಂಧನಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿರುವ ಸಮೀರ್ ಅವರ ಮನೆಯನ್ನು ಧರ್ಮಸ್ಥಳ...

ಈದಿನ ವಿಶೇಷ | ಧರ್ಮಸ್ಥಳ: ಉತ್ತರ ನೀಡಿದ ಗೃಹ ಸಚಿವರು; ಈಗಲೂ ಉಳಿದ ಹಲವು ಪ್ರಶ್ನೆಗಳು

ಸದನದಲ್ಲಿ ನಿಂತು ಷಡ್ಯಂತ್ರ ಎನ್ನುವವರಿಗೆ, ಎಸ್‌ಐಟಿ ರಚನೆಯಾಗಿದ್ದೇಕೆ? ಕಾನೂನು ಏನು ಹೇಳುತ್ತೆ?...

ಉಡುಪಿ | ಬ್ರಹ್ಮಾವರ ಪೊಲೀಸ್ ಠಾಣೆಯ 500ಮೀ ವಾಪ್ತಿಯಲ್ಲಿ ಆ.22ರವರೆಗೆ ನಿಷೇಧಾಜ್ಞೆ: ಜಿಲ್ಲಾಧಿಕಾರಿ

ಬ್ರಹ್ಮಾವರ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 177/2025ಕ್ಕೆ ಸಂಬಂಧಿಸಿದಂತೆ ಸಕ್ರಿಯ ಹಿಂದೂ...

Download Eedina App Android / iOS

X