ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಅಂಗಳದಲ್ಲಿ ಸಾಂಸ್ಕೃತಿಕ ಮೆರುಗು ಹೆಚ್ಚಿದ್ದು, ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ಮಹಿಳಾ ಸಾಂಸ್ಕೃತಿಕ ಹಬ್ಬ ಎಲ್ಲರ ತನು-ಮನಸೆಳೆಯಿತು.
ವಿವಿಯಿಂದ ಹಮ್ಮಿಕೊಂಡ ಮಹಿಳಾ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗಿಯಾದ ವಿದ್ಯಾರ್ಥಿನಿಯರು ಜಾನಪದ, ದೇಶಭಕ್ತ ಸೇರಿದಂತೆ ಹಲವಾರು ನೃತ್ಯಗಳನ್ನು ಪ್ರದರ್ಶಿಸಿದರು. ಭಾರತೀಯ ಸಾಂಸ್ಕೃತಿಕ ಪರಂಪರೆಯನ್ನು ಸಾರುವ ಭರತನಾಟ್ಯ, ಯೋಗನೃತ್ಯ, ಲವಣೆ, ಹಾಸ್ಯನೃತ್ಯಗಳು ವಿವಿಧ ಬಗೆಯ ನೃತ್ಯಗಳಲ್ಲಿ ಹಲವಾರು ವಿಭಾಗಗಳ ವಿದ್ಯಾರ್ಥಿನಿಯರು ಭಾಗಿಯಾಗಿ ಸಾಂಸ್ಕೃತಿಕ ಪಟ್ಟಕ್ಕೆ ಮೆರಗು ತಂದರು.
ಪ್ರತಿ ಸಾರಿಯಂತೆ ಈ ಬಾರಿಯೂ ಮಹಿಳಾ ದಿನಾಚರಣೆ ಪ್ರಯುಕ್ತ ವಿವಿಯ ಅಂಗಳದಲ್ಲಿ ಆಹಾರ ಮೇಳಕ್ಕೆ ವಿಶ್ವವಿದ್ಯಾನಿಲಯದ ಹಂಗಾಮಿ ಕುಲಪತಿ ಪ್ರೊ. ಶಾಂತಾದೇವಿ ಟಿ ಚಾಲನೆ ನೀಡಿದರು. ಈ ಆಹಾರ ಮೇಳದಲ್ಲಿ ವಿವಿಧ ವಿಭಾಗದ ವಿದ್ಯಾರ್ಥಿನಿಯರು ತಮ್ಮ ಮಳಿಗೆಗಳನ್ನು ಹಾಕಿಕೊಂಡು ಬಿಸಿಲಿನ ಬೇಗೆ ತಣಿಸುವ ತಂಪು ಲಿಂಬು ಪಾನೀಯ, ಮಸಾಲಾ ಮಜ್ಜಿಗೆ, ರಾಗಿ ಅಂಬಲಿ, ಫ್ರೂಟ್ ಸಲಾಡ್ ಸೇರಿದಂತೆ ವಿವಿಧ ಬಗೆಯ ಖ್ಯಾದ್ಯಗಳನ್ನು ಮಾರಾಟಕ್ಕೆ ಇಟ್ಟಿದ್ದರು. ಹಲವಾರು ಜನರ ಆಹಾರ ಮಾಳಿಗೆಗಳಿಗೆ ಭೇಟಿ ನೀಡಿ ವಿವಿಧ ಬಗೆಯ ತಿಂಡಿ ಸವಿದು ಆನಂದಸಿದರು. ವಿಶೇಷವಾಗಿ ಆಹಾರ ಮೇಳದಲ್ಲಿ ಹಲವು ಬಗೆಯ ಖಾದ್ಯಗಳನ್ನು ತಯಾರಿಸಿ ಮಾರಾಟ ಮಾಡಿ ಭೋಜನ ಪ್ರಿಯರನ್ನು ತಮ್ಮತ್ತ ಸೆಳೆಯುತ್ತಿದ್ದರು.

ಪುಸ್ತಕ ಮಳಿಗೆ, ಬಟ್ಟೆ ಮಳಿಗೆ ಮತ್ತು ಮಹಿಳೆಯರ ಅಂದವನ್ನು ಹೆಚ್ಚಿಸುವ ವಿವಿಧ ಬಗೆಯ ಆಭರಣ, ಬಟ್ಟೆಗಳು ಮಹಿಳೆಯರ ಕಣ್ಮನ ಸೆಳೆಯುವಂತಿದ್ದವು. ಮನೆಯ ಅಂದವನ್ನು ಹೆಚ್ಚಿಸುವುದರ ಜೊತೆಗೆ ನಮ್ಮ ಆರೋಗ್ಯವನ್ನು ವೃದ್ಧಿಸುವಲ್ಲಿ ಸಹಾಯಕಾರಿಯಾಗುವಂತಹ ಸಸಿಗಳನ್ನು ಕೂಡ ಈ ಮೇಳದಲ್ಲಿ ಇಡಲಾಗಿದ್ದು ವಿಶೇಷವಾಗಿತ್ತು.
ಇದನ್ನೂ ಓದಿ: ವಿಜಯಪುರ | ಆಲಮಟ್ಟಿ ಚಂದ್ರಮ್ಮದೇವಿ ಜಾತ್ರೆ ಆರಂಭ
ಮಹಿಳಾ ಸಾಂಸ್ಕೃತಿಕ ಹಬ್ಬ ಕಾರ್ಯಕ್ರಮಗಳನ್ನು ಅತ್ಯಂತ ಅಚ್ಚುಕಟ್ಟಾಗಿ ಸಂಘಟಿಸುತ್ತಿರುವ ಸಮಿತಿಯ ಸದಸ್ಯೆ ಸಂಚಾಲಕಿ ಪ್ರೊ. ಲಕ್ಷ್ಮೀದೇವಿ ವೈ. ಮತ್ತು ಮಹಿಳಾ ಅಧ್ಯಯನ ವಿಭಾಗದ ತಂಡ ಹಾಗೂ ವಿವಿಧ ಸಮಿತಿಯ ಅಧ್ಯಕ್ಷರು ಮತ್ತು ಸದಸ್ಯರನ್ನು, ಮಹಿಳಾ ವಿವಿಯ ಹಂಗಾಮಿ ಕುಲಪತಿ ಪ್ರೊ. ಕಾಂತಾದೇವಿ ಟಿ, ಕುಲಸಚಿವ ಶಂಕರಗೌಡ ಸೋಮನಾಳ ಹಾಗೂ ಮೌಲ್ಯಮಾಪನ ಕುಲಸಚಿವ ಪ್ರೊ.ಎಚ್.ಎಮ್. ಚಂದ್ರಶೇಖರ ಅವರು ಅಭಿನಂದಿಸಿದ್ದಾರೆ.
