ವಿಜಯಪುರ ಜಿಲ್ಲೆ ಫಲವತ್ತಾದ ಭೂಮಿಗೆ ಹೆಸರುವಾಸಿಯಾದ ಜಿಲ್ಲೆ. ಈ ಜಿಲ್ಲೆ ಈಗ ಸಮಗ್ರ ನೀರಾವರಿಗೆ ಒಳಪಟ್ಟಿದೆ. ಡೋಣಿ ಪಾತ್ರದ ರೈತರ ಜಮೀನು ಸವಳು-ಜವಳಾಗುತ್ತಿದೆ ಎಂದು ಧಾರವಾಡ ಕೃಷಿ ವಿವಿ ವ್ಯವಸ್ಥಾಪನಾ ಮಂಡಳಿ ಸದಸ್ಯೆ ಪಾರ್ವತಿ ಕುರ್ಲೆ ವಿಷಾದಿಸಿದರು.
ವಿಜಯಪುರ ನಗರದ ಹೊರಹೊಲಯದ ಹಿಟ್ನಳ್ಳಿಯ ಕೃಷಿ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಮಣ್ಣು ದಿನಾಚಾರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
“ಫಲವತ್ತಾದ ಮಣ್ಣಿನ ಸಂರಕ್ಷಣೆ ಮತ್ತು ಮಣ್ಣಿನ ಸವಕಳಿಯನ್ನು ಸಂರಕ್ಷಿಸುವತ್ತ ಚಿಂತನೆ ಮಾಡಬೇಕಾಗಿದೆ. ಈ ಕುರಿತು ವಿಜ್ಞಾನಿಗಳು ಇಲಾಖಾ ಅಧಿಕಾರಿಗಳು ಸೂಕ್ತ ಮಣ್ಣು ಮತ್ತು ನೀರು ಸಂರಕ್ಷಣೆ ಕ್ರಮಗಳನ್ನು ಆಳವಡಿಸಿಕೊಳ್ಳಲು ರೈತರಿಗೆ ಅರಿವು ಮೂಡಿಸಬೇಕು” ಎಂದು ಹೇಳಿದರು.
ಕಾರ್ಯಕ್ರಮದ ಮುಖ್ಯ ಅತಿಥಿ, ಮಣ್ಣು ಉಳಿಸಿ ಆಂದೋಲನ ರುವಾರಿ ಬಸವರಾಜ ಬಿರಾದಾರ ಮಾತನಾಡಿ, “ಪಂಚಭೂತಗಳಲ್ಲಿ ಒಂದಾಗಿರುವ ಮಣ್ಣು ಜೀವಸಂಕುಲಕ್ಕೆ ಉಚಿತವಾಗಿ ಸಿಕ್ಕಿರುವ ಬೆಲೆ ಕಟ್ಟಲಾಗದ ಸಂಪತ್ತು. ಮಾನವನ ಅತ್ಯವಶ್ಯಕಗಳಾದ ಆಹಾರ, ಬಟ್ಟೆ ಮತ್ತು ವಸತಿಗಳನ್ನು ಉತ್ಪಾದಿಸಲು ಮಣ್ಣು ಮೂಲಾಧಾರ. ಕಾರಣ ಮಣ್ಣು ಜೀವನದ ಕಣ್ಣು, ಪ್ರಕೃತಿಯ ಜೀವಾಳ. ಇದನ್ನು ರಕ್ಷಿಸಬೇಕಾಗಿರುವುದು ಪ್ರತಿಯೊಬ್ಬರ ಕರ್ತವ್ಯ” ಎಂದರು.
ಅತಿಥಿಯಾಗಿ ಸಹ ವಿಸ್ತರಣಾ ನಿರ್ದೇಶಕ ಡಾ. ರವೀಂದ್ರ ಬೆಳ್ಳಿ ಮಾತನಾಡಿ, “ಮಣ್ಣಿನ ಸಂರಕ್ಷಣೆ ಹಾಗೂ ಸಮರ್ಪಕ ನಿರ್ವಹಣೆ ಅತ್ಯವಶ್ಯ ಹಾಗೂ ಅನಿವಾರ್ಯ. ಆದ್ದರಿಂದ ಇವುಗಳನ್ನು ವೈಜ್ಞಾನಿಕವಾಗಿ ನಿರ್ವಹಿಸಿ, ಅದರ ಉತ್ಪಾದನಾ ಸಾಮರ್ಥ್ಯವನ್ನು ಅತ್ಯುನ್ನತ ಮಟ್ಟದಲ್ಲಿ ಕಾಪಾಡಿ, ಮುಂದಿನ ಪೀಳಿಗೆಗೆ ಕೊಡುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ಮಣ್ಣಿನ ಗುಣಮಟ್ಟ, ಆರೋಗ್ಯ ಕೃಷಿ ಮತ್ತು ಪರಿಸರ ಸಂರಕ್ಷಣೆಯ ಮೂಲಾಧಾರವಾಗಿದೆ. ಆದ್ದರಿಂದ ಮಣ್ಣನ್ನು ಫಲವತ್ತಾಗಿಡಲು ಹಾಗೂ ಅದರ ಉತ್ಪಾದಕತೆಯನ್ನು ಕಾಪಾಡಲು ಮಣ್ಣಿನ ಮೌಲ್ಯಮಾಪನ, ಮೇಲ್ವಿಚಾರಣೆ ಮತ್ತು ನಿರ್ವಹಣೆ ಅತ್ಯಗತ್ಯವಾಗಿದೆ” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಗುಡಿಬಂಡೆ | ನಿವೇಶನ ಹಂಚಿಕೆಗೆ ಅಧಿಕಾರಿಗಳ ನಿರ್ಲಕ್ಷ್ಯ; ಕಡೇಹಳ್ಳಿ ಗ್ರಾಮ ದಲಿತರ ಪ್ರತಿಭಟನೆ
ವಿಶ್ವ ಮಣ್ಣು ದಿನಾಚರಣೆ ಅಂಗವಾಗಿ ಹಮ್ಮಿಕೊಂಡ ಪ್ರಬಂಧ ಸ್ಪರ್ಧೆ, ಚಿತ್ರಕಲೆ ಸ್ಪರ್ಧೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಡಾ. ಎನ್ ಡಿ ಸುನೀತಾ, ಡಾ. ಎಸ್ ಹೆಚ್ ಗುತ್ತರಗಿ, ಡಾ. ಮಹಾಂತೇಶ ತೆಗ್ಗಿ, ಡಾ. ಸಿದ್ದರಾಮ ಪಾಟೀಲ, ಡಾ. ಕಿರಣಕುಮಾರ, ಡಾ. ಸುದೀಪಕುಮಾರ, ಕೆ ಎನ್ ನದಾಫ್ ಸೇರಿದಂತೆ ಕೃಷಿ ಕಾಲೇಜಿನ ಸಮಸ್ತ ಸಿಬ್ಬಂದಿವರ್ಗ ಮತ್ತು ವಿದ್ಯಾರ್ಥಿ, ವಿದ್ಯಾರ್ಥಿನಿಯರು ಇದ್ದರು.