ಪ್ರತಿಯೊಬ್ಬರಿಗೂ ಒಂದಲ್ಲ ಒಂದು ಸಮಸ್ಯೆ ಇರುತ್ತವೆ. ಆ ಸಮಸ್ಯೆಗೆ ಹೆದರದೆ ಜೀವನದಲ್ಲಿ ಕುಗ್ಗದೆ ಅದನ್ನು ಎದುರಿಸಿ ಜೀವನ ಸಾಗಿಸಬೇಕು. ಅದೇ ರೀತಿ ನಮ್ಮ ಸುತ್ತ ಮುತ್ತಲೂ ಅನೇಕ ಜನರು ಈ ಆತ್ಮಹತ್ಯೆ ಮಾಡಿಕೊಳ್ಳುವ ಚಿಂತನೆಯಲ್ಲಿರುತ್ತಾರೆ. ಅಂತಹ ವಿಷಯಗಳು ನಮ್ಮ ನಿಮ್ಮ ಗಮನಕ್ಕೆ ಬಂದರೆ ಆ ವ್ಯಕ್ತಿಯ ಮನ ಪರಿವರ್ತನೆ ಮಾಡಿ ಆತ್ಮಹತ್ಯೆ ಮಾಡಿಕೊಳ್ಳುವುದನ್ನು ತಡೆಗಟ್ಟಬೇಕು ಎಂದು ಫಾದರ್ ಸಂತೋಷ್ ಹೇಳಿದರು.
ವಿಜಯಪುರ ಜಿಲ್ಲೆಯ ಸಿಂದಗಿ ನಗರದಲ್ಲಿ ಸಂಗಮ ಸಮಗ್ರ ಗ್ರಾಮೀಣ ಅಭಿವೃದ್ಧಿ ಕೇಂದ್ರದಿಂದ ಹಮ್ಮಿಕೊಂಡಿದ್ದ ವಿಶ್ವ ಆತ್ಮಹತ್ಯೆ ತಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
“ಕೆಲವೊಬ್ಬರಲ್ಲಿ ಗಾಬರಿ ಮತ್ತು ಆತಂಕದ ಕಾಯಿಲೆಗಳು ವಿವಿಧ ವಿಚಾರ ದುಗುಡ ಮಾನಸಿಕವಾಗಿ ಖಿನ್ನತೆಗೆ ಒಳಗಾದವರು ರಾಷ್ಟ್ರೀಯ ಟೆಲಿ ಮಾನಸಿಕ ಆರೋಗ್ಯ ಸಹಾಯವಾಣಿ 14416ಕ್ಕೆ ಕರೆ ಮಾಡಿ ನಿಮ್ಮ ನಿಮ್ಮ ಸಮಸ್ಯೆಗಳನ್ನು ತಿಳಿಸಬೇಕು. ಸಿಂದಗಿಯ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ಪ್ರತಿ ತಿಂಗಳು ಮೊದಲನೆ ಮಂಗಳವಾರ ಮನೋ ವೈದ್ಯರು ಬರುತ್ತಾರೆ. ಅಲ್ಲಿಗೆ ಬಂದು ಅವರನ್ನು ಭೇಟಿ ನೀಡುವುದು ಸೂಕ್ತ” ಎಂದು ಸಲಹೆ ನೀಡಿದರು.
ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎಸ್ ಡಿ ಕುಲಕರ್ಣಿ ಅತಿಥಿಯಾಗಿ ಮಾತನಾಡಿ, “ಅತ್ಮಹತ್ಯೆ ತಡೆಯಬೇಕೆಂದರೆ ನಾವು ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕು. ಜನರು ಮುಕ್ತವಾಗಿ ಮಾನಸಿಕ ಆರೋಗ್ಯ ಮತ್ತು ಖಿನ್ನತೆಯ ಬಗ್ಗೆ ಮಾತನಾಡಬೇಕು. ಅಂತಹವರನ್ನು ಸಮಾಧಾನ ಮಾಡುವುದರಿಂದ ಒಂದು ಜೀವದ ಬಲಿಯನ್ನು ತಪ್ಪಿಸಬಹುದು. ಇದಕ್ಕೆ ನಾವು ನೀವೆಲ್ಲರೂ ಒಗ್ಗೂಡಿದರೆ ಮಾತ್ರ ಸಾಧ್ಯ” ಎಂದರು.
“ಮೊದಲು 2023ರ ಸೆಪ್ಟಂಬರ್ 10ರಂದು ವಿಶ್ವ ಆತ್ಮಹತ್ಯೆ ತಡೆಗಟ್ಟುವಿಕೆ ದಿನವನ್ನು ಪ್ರಾರಂಭಿಸಲಾಯಿತು. ಪ್ರತಿವರ್ಷ ಏಳು ಲಕ್ಷಕ್ಕೂ ಹೆಚ್ಚು ಆತ್ಮಹತ್ಯೆಗಳು ಸಂಭವಿಸುತ್ತವೆ. ಈ ಎಲ್ಲ ಆತ್ಮಹತ್ಯೆಗೆ ಕುಟುಂಬದಲ್ಲಿ ಕಲಹ ಹಾಗೂ ವಿವಿಧ ಚಿಕ್ಕ ಚಿಕ್ಕ ಸಮಸ್ಯೆಗಳು ಕಾರಣವಾಗುತ್ತವೆ. ಸಾವೊಂದೇ ಪರಿಹಾರವಲ್ಲ. ಇದನ್ನು ತಪ್ಪಿಸಲು ನಾವು ಸರಿಯಾದ ಮಾರ್ಗದರ್ಶನ ನೀಡಬೇಕು” ಎಂದರು.
ಈ ಸುದ್ದಿ ಓದಿದ್ದೀರಾ? ಇದ್ದೂ ಸತ್ತಂತಿದೆ ‘ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆ’
ಕಾರ್ಯಕ್ರಮದಲ್ಲಿ ಅಥಿತಿಗಳ ಸ್ಥಾನವಹಿಸಿರುವ ಸಂಗಮ ಸಂಸ್ಥೆಯ ಸಹನಿರ್ದೇಶಕ ಸಿಸ್ಟರ್ ಸಿಂತಿಯಾಡಿ ಮೆಲ್ಲೊರವರು ಪ್ರಾಸ್ತಾವಿಕವಾಗಿ ಮಾತನಾಡಿದರು.
ಈ ಕಾರ್ಯಕ್ರಮದಲ್ಲಿ ವಿವಿಧ ಹಳ್ಳಿಯಿಂದ ಮಹಿಳೆಯರು, ಯುವಕರು, ಕಟ್ಟಡ ಕಾರ್ಮಿಕರು, ವಿಶೇಷ ಚೇತನರು ಮತ್ತು ಸಂಗಮ ಸಂಸ್ಥೆಯ ಎಲ್ಲ ಪದಾಧಿಕಾರಿಗಳು ಇದ್ದರು.