ಪತ್ರಿಕಾ ರಂಗದ ವ್ಯಾಪ್ತಿ ವಿಸ್ತಾರವಾಗುತ್ತಿರುವ ಈದಿನ ಮಾನಗಳಲ್ಲಿ ಪ್ರತಿಯೊಬ್ಬ ಪ್ರಜೆಯೂ ಪತ್ರಕರ್ತನ ಮನೋಭಾವ ಬೆಳೆಸಿಕೊಳ್ಳಬೇಕು. ಸಾಮಾಜಿಕ ಜಾಲತಾಣದ ಪ್ರಭಾವದಿಂದ ಈಗಾಗಲೇ ಪತ್ರಕರ್ತರಾಗುವತ್ತ ಮುನ್ನುಗ್ಗುತ್ತಿರುವ ಯುವಜನತೆ ಅದನ್ನು ಸರಿಯಾದ ಮಾರ್ಗದಲ್ಲಿ ಬಳಸಿಕೊಳ್ಳಬೇಕು ಎಂದು ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ, ಮಾಜಿ ಶಾಸಕ ಎ ಎಸ್ ಪಾಟೀಲ ನಡಹಳ್ಳಿ ಅಭಿಪ್ರಾಯಪಟ್ಟರು.
ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಅರಿಹಂತ ಸಮೂಹ ಶಿಕ್ಷಣ ಸಂಸ್ಥೆಯ ಸಭಾಂಗಣದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಘಟಕ ಏರ್ಪಡಿಸಿದ್ದ ಪತ್ರಿಕಾ ದಿನಾಚರಣೆ, ವಾರ್ಷಿಕ ಪ್ರಶಸ್ತಿ ಪ್ರಧಾನ, ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
“ಇಂದು ಮಾಧ್ಯಮ ಎನ್ನುವುದು ಬರವಣಿಗೆಯ ಆಧಾರದಲ್ಲಿ ನಿಂತಿಲ್ಲ, ನಿಜವಾದ ಪತ್ರಕರ್ತ ಹೊರಹೊಮ್ಮುವುದು ಆತನ ಬರವಣಿಗೆಯಿಂದ. ಪ್ರಿಂಟ್, ಡಿಜಿಟಲ್, ವಿಜುವಲ್, ಸೋಷಿಯಲ್ ಮೀಡಿಯಾಗಳ ವ್ಯಾಪ್ತಿ ಸಾಕಷ್ಟು ವಿಸ್ತಾರವಾಗಿದೆ. ಇದು ಈಗಿನ ಅದ್ಭುತ. ಪತ್ರಕರ್ತರಿಗೆ ಸಂವಹನ ಸಾಮರ್ಥ್ಯ, ಭಾಷಾ ಪ್ರೌಢಿಮೆ ಚೆನ್ನಾಗಿರಬೇಕು. ಇವೆರಡೂ ಇರುವವನೇ ನಿಜವಾದ ಪತ್ರಕರ್ತ” ಎಂದರು.
“ಈ ದಿನಗಳಲ್ಲಿ ತಂತ್ರಜ್ಞಾನ ಸದುಪಯೋಗ, ದುರುಪಯೋಗ ಎರಡೂ ಆಗುತ್ತಿದೆ. ನಾನು, ನನ್ನ ಕುಟುಂಬ, ನನ್ನ ದೇಶ ಎನ್ನುವುದರ ಜೊತೆಗೆ ದೇಶದ ಹೆಮ್ಮೆಯ ಪ್ರಜೆಯಾಗುವತ್ತ ಯುವಜನತೆ ಗಮನ ಕೇಂದ್ರೀಕರಿಸಬೇಕು. ಮಾಧ್ಯಮದವರು ಇತಿಹಾಸ ಅರಿತುಕೊಳ್ಳಬೇಕು. ದಕ್ಷಿಣ ಭಾರತದಲ್ಲಿಯೇ ಉತ್ತರ ಕರ್ನಾಟಕ ಅತ್ಯಂತ ಸಂಪದ್ಭರಿತ ಪ್ರದೇಶವಾಗಿದೆ. ಇದರ ಮೇಲೆ ಬೆಳಕು ಚಲ್ಲುವ ಕಾರ್ಯ ಪತ್ರಕರ್ತರಿಂದಾಗಬೇಕು” ಎಂದರು.
ಸಂಘದ ಜಿಲ್ಲಾಧ್ಯಕ್ಷ ಪ್ರಕಾಶ ಬೆಣ್ಣೂರ, ಪ್ರಕಾ ಸಗರಿ, ಬಿಜೆಪಿ ಕಾಲೇಜಿನ ಪ್ರಾಂಶುಪಾಲ ವಿಫುಲ್ ಮಂಡಲ ಅಧ್ಯಕ್ಷ ಜಗದೀಶ ಪಂಪಣ್ಣವರ ವೇದಿಕೆಯಲ್ಲಿದ್ದರು. ಸಂಘದ ತಾಲೂಕು ಘಟಕ ಅಧ್ಯಕ್ಷ ಆರ್.ಬಿ.ವಡವಡಗಿ (ಮುತ್ತು) ಅಧ್ಯಕ್ಷತೆ ವಹಿಸಿದ್ದರು.
ಇದನ್ನೂ ಓದಿ: ವಿಜಯಪುರ | ಮಹಿಳಾ ವಿವಿ ಆವರಣದಲ್ಲಿರುವ ಅಕ್ಕಮಹಾದೇವಿ ಮೂರ್ತಿ ತೆರವಿಗೆ ಆಗ್ರಹ
ಇದೇ ವೇಳೆ ಪತ್ರಕರ್ತ ರಿಯಾಯ್ ಮುಲ್ಲಾ, ಹನುಮಂತ ಬೀರಗೊಂಡ, ಈಶ್ವರ ಈಳಗೇರ, ಹನುಮಂತ ಟಕ್ಕಳಕಿ (ಮುತ್ತು), ಕೃಷ್ಣಾ ಕುಂಬಾರ ಅವರಿಗೆ ತಾಲೂಕು ಮಟ್ಟದ ಉತ್ತಮ ಪತ್ರಕರ್ತ ವಾರ್ಷಿಕ ಪ್ರಶಸ್ತಿ ಪ್ರದಾನ ಮಾಡಲಾಯಿತು. ಹಿರಿಯ ಪತ್ರಕರ್ತ ಬಸವರಾಜ ಕುಂಬಾರ ಪುತ್ರಿ ಭಾಗ್ಯಶ್ರೀಯನ್ನು ಎಸ್ಸೆಸ್ಸೆಲ್ಸಿಯಲ್ಲಿ ಹೆಚ್ಚು ಅಂಕ ಪಡೆದಿದ್ದಕ್ಕಾಗಿ ಪತ್ರಕರ್ತರ ಮಕ್ಕಳಿಗೆ ನೀಡುವ ಗೌರವದೊಂದಿಗೆ ಸನ್ಮಾನಿಸಲಾಯಿತು. ಜಿಲ್ಲಾ ಸಂಘಕ್ಕೆ ನೂತನ ಅಧ್ಯಕ್ಷರಾದ ಹಿನ್ನೆಲೆ ಪ್ರಕಾಶ ಬೆಣ್ಣೂರ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಪವಿತ್ರಾ , ಮುತ್ತು ವಡವಡಗಿ, ಸಂಘದ ಪ್ರಧಾನ ಕಾರ್ಯದರ್ಶಿ ರವೀಂದ್ರ ನಂದೆಪ್ಪನವರ್, ಜಿಲ್ಲಾ ಪ್ರಶಸ್ತಿ ಪುರಸ್ಕೃತ ನೂರೇನಬಿ ನದಾಫ್, ಸಂಘದ ಸದಸ್ಯರು, ಉಪನ್ಯಾಸಕರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.