ರಾಜ್ಯದಲ್ಲಿ 1999ರಲ್ಲಿ ವಿರೋಧ ಪಕ್ಷದ ನಾಯಕನಾಗಿ 5 ವರ್ಷ ಹೋರಾಟ ಮಾಡಿದೆ, ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಶ್ರಮಿಸಿದೆ. ಆದರೆ, ಚುನಾವಣೆಗೂ ಮುನ್ನ ನಾಲ್ಕು ತಿಂಗಳ ಹಿಂದೆ ಕೆಪಿಸಿಸಿ ಅಧ್ಯಕ್ಷರಾದ ಎಸ್ ಎಂ ಕೃಷ್ಣ ಅವರು ಮುಖ್ಯಮಂತ್ರಿಯಾದರು. ರಾಜಕೀಯವಾಗಿ ಅವಕಾಶ ತಪ್ಪಿರುವ ಬಗ್ಗೆ ಬೇಸರವಿಲ್ಲ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ವಿಜಯಪುರ ನಗರದ ಬಿಎಲ್‌ಡಿಇ ಸಂಸ್ಥೆಯನ್ನು ಕಟ್ಟಿ ಬೆಳೆಸಿದ ಫ.ಗು.ಹಳಕಟ್ಟಿ, ಬಂಥನಾಳ ಸಂಗನಬಸವ ಶಿವಯೋಗಿಗಳು, ಬಿ.ಎಂ.ಪಾಟೀಲ ಮತ್ತು ಬಂಗಾರಮ್ಮ ಸಜ್ಜನ ಸ್ಮರಣೆ ಕಾರ್ಯಕ್ರಮದಲ್ಲಿ ಭಾನುವಾರ ಅವರು ಮಾತನಾಡಿದರು.
ಎಲ್ಲ ಪ್ರಯತ್ನಗಳು ವ್ಯರ್ಥವಾದಂತೆ ಭಾಸವಾಯಿತು. ನಾನು ಐದು ವರ್ಷಗಳ ಕಾಲ ಅವಿಶ್ರಾಂತವಾಗಿ ಕೆಲಸ ಮಾಡಿದ್ದೆ. ಅವರು (ಕೃಷ್ಣ) ಕೇವಲ ನಾಲ್ಕು ತಿಂಗಳ ಮೊದಲು ಅಧ್ಯಕ್ಷರಾಗಿ ಬಂದು ಮುಖ್ಯಮಂತ್ರಿಯಾದರು. ಇಂತಹ ಹಲವು ನಿದರ್ಶನಗಳಿದ್ದು, ಅವುಗಳೆಲ್ಲದರ ಬಗ್ಗೆ ಒಮ್ಮೆಲೇ ಮಾತನಾಡುವುದು ಸೂಕ್ತವಲ್ಲ ಎಂದು ಕಾಂಗ್ರೆಸ್ ಹಿರಿಯ ನಾಯಕ ಹೇಳಿದರು.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಹೆಣ್ಣು ಮಕ್ಕಳ ಸುರಕ್ಷತೆಗೆ ‘ಶಕ್ತಿಶ್ರೀ’ ಸಾಕೇ?
‘ನಾನು ಎಂದೂ ಅಧಿಕಾರದ ಹಿಂದೆ ಹೋಗಿಲ್ಲ, ನನ್ನ ಪ್ರಯತ್ನಗಳ ಫಲವಾಗಿ ಅಧಿಕಾರ ಪಡೆದುಕೊಂಡಿದ್ದೇನೆ. ಕಾಂಗ್ರೆಸ್ ಅಧ್ಯಕ್ಷ ಹುದ್ದೆಯಿಂದ ಎಐಸಿಸಿ ಹುದ್ದೆವರೆಗೂ ಬಂದಿರುವೆ. ಮನಸ್ಸಿನಲ್ಲಿ ದುರಾಸೆ ಇಟ್ಟುಕೊಂಡು ಮಾಡುವ ಕೆಲಸಗಳಿಂದ ಏನೂ ಮಾಡಲು ಸಾಧ್ಯವಿಲ್ಲ’ ಎಂದರು.
‘ಆರು ವರ್ಷದ ಬಾಲಕನಾಗಿದ್ದಾಗ ರಜಾಕರ ಹಾವಳಿಯಲ್ಲಿ ನನ್ನ ತಾಯಿ, ಸಹೋದರಿಯನ್ನು ಕಳೆದುಕೊಂಡೆ, ತಂದೆಯ ಆಸರೆಯಲ್ಲಿ ಬೆಳೆದೆ’ ಎಂದು ಖರ್ಗೆ ಅವರು ತಮ್ಮ ಜೀವನದ ಅನೇಕ ಘಟನೆಗಳನ್ನು ನೆನಪಿಸಿಕೊಂಡು ಕ್ಷಣಹೊತ್ತು ಭಾವುಕರಾದರು.
1999ರ ಕರ್ನಾಟಕ ವಿಧಾನಸಭಾ ಚುನಾವಣೆ. ಆಗ ಮಲ್ಲಿಕಾರ್ಜುನ ಖರ್ಗೆಯವರು ಕಾಂಗ್ರೆಸ್ ಶಾಸಕಾಂಗ ಪಕ್ಷದ (ಸಿಎಲ್‌ಪಿ) ನಾಯಕರಾಗಿದ್ದರು. ರಾಜ್ಯದ ಮೂಲೆಮೂಲೆ ಸುತ್ತಿ, ಪಕ್ಷವನ್ನು ಅಧಿಕಾರಕ್ಕೆ ತರಲು ಐದು ವರ್ಷಗಳ ಕಾಲ ಅವಿಶ್ರಾಂತ ದುಡಿದಿದ್ದರು. ಅವರ ಪರಿಶ್ರಮಕ್ಕೆ ಫಲವೂ ಸಿಕ್ಕಿತ್ತು. ಕಾಂಗ್ರೆಸ್ 224 ಸ್ಥಾನಗಳ ಪೈಕಿ 132 ಸ್ಥಾನಗಳನ್ನು ಗೆದ್ದು ಭರ್ಜರಿ ಬಹುಮತದೊಂದಿಗೆ ಅಧಿಕಾರಕ್ಕೆ ಏರಿತ್ತು.