ಗಣೇಶ ಚತುರ್ಥಿ ಹಬ್ಬವನ್ನು ಎಲ್ಲರೂ ಶಾಂತಿ, ಸೌಹಾರ್ದ ಹಾಗೂ ಸಂಭ್ರಮದಿಂದ ಆಚರಿಸಬೇಕು ಎಂದು ಸಿಪಿಐ ಮಹಮ್ಮದ್ ಫಸಿಯುದ್ದಿನ್ ಹೇಳಿದರು.
ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಪಟ್ಟಣದ ರಾಘವೇಂದ್ರ ಕಲ್ಯಾಣ ಮಂಟಪದಲ್ಲಿ ನಡೆದ ಗಣೇಶ ಚತುರ್ಥಿ ಶಾಂತಿಪಾಲನಾ ಸಭೆಯಲ್ಲಿ ಅವರು ಮಾತನಾಡಿ, “ಸಾರ್ವಜನಿಕ ಸ್ಥಳಗಳಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಿಕೊಳ್ಳಬೇಕು. ಗಣೇಶ ವಿಸರ್ಜನೆ ಮೆರವಣಿಗೆ ಸಂದರ್ಭದಲ್ಲಿ ಎಲ್ಲರೂ ನಿಗದಿಪಡಿಸಿದ ಒಂದೇ ಮಾರ್ಗದಲ್ಲಿ ಸಾಗಬೇಕು. ಹಬ್ಬದ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ್ ಇಲಾಖೆ ಅಗತ್ಯ ಸಹಕಾರ ನೀಡಲಿದೆ” ಎಂದು ಹೇಳಿದರು.
ಪಿಎಸ್‌ಐ ವಿಜಯಕುಮಾರ ತಳವಾರ, ಅಪರಾಧ ವಿಭಾಗದ ಪಿಎಸ್‌ಐ ಆರ್.ಎಸ್. ಬಂಗಿ, ಪುರಸಭೆ ಮುಖ್ಯಾಧಿಕಾರಿ ಮಲ್ಲನಗೌಡ ಬಿರಾದಾರ ಹಾಗೂ ಅಗ್ನಿಶಾಮಕ ಠಾಣಾಧಿಕಾರಿ ತಿಪ್ಪಣ ನಾವದಗಿ ಮಾತನಾಡಿ, “ಗಣೇಶ ಮೂರ್ತಿ ಪ್ರತಿಷ್ಠಾಪನೆಯ ಬಳಿಕ ಪ್ರಸಾದ ವ್ಯವಸ್ಥೆ ಕೈಗೊಂಡಲ್ಲಿ ಪುರಸಭೆಗೆ ಮಾಹಿತಿ ನೀಡಬೇಕು. ಅಗತ್ಯವಿದ್ದಲ್ಲಿ ವಾಹನಗಳ ವ್ಯವಸ್ಥೆ ಮಾಡಲಾಗುವುದು. ಗಣೇಶ ಮಂಟಪಗಳನ್ನು ನಿರ್ಮಿಸುವಾಗ ವಾಹನಗಳ ಸಂಚಾರಕ್ಕೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಬೇಕು” ಎಂದು ತಿಳಿಸಿದರು.
ಎಂ.ಎ. ಬಾಗೇವಾಡಿ ಶಿರಸ್ತೆದಾರ, ಹೆಸ್ಕಾಂ ಇಲಾಖೆಯ ಈರಣ್ಣ ಹರಿಜನ, ಮುಖಂಡರಾದ ಸಂಗಪ್ಪ ಮೇಲಿನಮನಿ, ಮಹಾಂತಗೌಡ ಕಾಶಿನಕುಂಟಿ, ಪರಶುರಾಮ ನಾಲತ್ತವಾಡ, ಬಸವರಾಜ ನಂದಿಕೇಶ್ವರಮಠ, ಮಹಾಂತೇಶ ಬೂದಿಹಾಳಮಠ, ಅಪ್ಪುಗೌಡ ಪಾಟೀಲ, ಸೋಮು ಮೇಟಿ, ಪುನೀತ ಹಿಪ್ಪರಗಿ, ಮುರ್ತುಜ ಬಿದರಕುಂದಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಗಜಾನನ ಪ್ರತಿಷ್ಠಾನ ಸಮಿತಿಯ ಯುವಕರು ಇದ್ದರು.





