ಆಕ್ರಮಿತ ವೆಸ್ಟ್ ಬ್ಯಾಂಕ್‌ನಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಇಸ್ರೇಲಿ ಅಕ್ರಮ ವಸಾಹತುಗಳ ನಿರ್ಮಾಣ ಹಾಗೂ ಅಲ್ಲಿ ನಡೆಯುತ್ತಿರುವ ಹಿಂಸಾಚಾರವನ್ನು ತಡೆಯುವ ನಿಟ್ಟಿನಲ್ಲಿ ಬ್ರಿಟನ್ ಸರ್ಕಾರ ದೊಡ್ಡ ಹಾಗೂ ಮಹತ್ವದ ರಾಜತಾಂತ್ರಿಕ ನಿರ್ಧಾರ ಕೈಗೊಂಡಿದೆ. ವೆಸ್ಟ್ ಬ್ಯಾಂಕ್‌ನ ಅಕ್ರಮ ಇಸ್ರೇಲಿ ವಸಾಹತುಗಳಲ್ಲಿ ತಯಾರಾಗುವ ಎಲ್ಲಾ ರೀತಿಯ ಸರಕು ಮತ್ತು ಸೇವೆಗಳ ಆಮದಿನ ಮೇಲೆ ಯುನೈಟೆಡ್ ಕಿಂಗ್‌ಡಮ್ (ಯುಕೆ) ಸಂಪೂರ್ಣ ನಿಷೇಧ ಹೇರಿದೆ.
ಬ್ರಿಟನ್ ಸಂಸತ್ತಿನ ಹೌಸ್ ಆಫ್ ಕಾಮನ್ಸ್‌ನಲ್ಲಿ ವಿದೇಶಾಂಗ ಕಾರ್ಯದರ್ಶಿ ಎಡ್ ಮಿಲಿಬ್ಯಾಂಡ್ ಅವರು ಈ ನಿರ್ಧಾರವನ್ನು ಅಧಿಕೃತವಾಗಿ ಪ್ರಕಟಿಸಿದರು. ಅಂತರರಾಷ್ಟ್ರೀಯ ಕಾನೂನಿನ ಪ್ರಕಾರ ವೆಸ್ಟ್ ಬ್ಯಾಂಕ್‌ನಲ್ಲಿ ಇಸ್ರೇಲ್ ನಡೆಸುತ್ತಿರುವ ವಸಾಹತುಗಳು ಕಾನೂನುಬಾಹಿರವಾಗಿವೆ. ಅಲ್ಲಿ ನಡೆಯುತ್ತಿರುವ ವಸಾಹತು ವಿಸ್ತರಣೆಯು ಭವಿಷ್ಯದಲ್ಲಿ ಸ್ವತಂತ್ರ ಪ್ಯಾಲೇಸ್ತೀನ್ ರಾಷ್ಟ್ರ ರಚನೆಯ (Two-State Solution) ಭರವಸೆಯನ್ನು ಸಂಪೂರ್ಣವಾಗಿ ಕುಗ್ಗಿಸುತ್ತಿದೆ ಎಂದು ಯುಕೆ ವಿದೇಶಾಂಗ ಸಚಿವಾಲಯ ಕಳವಳ ವ್ಯಕ್ತಪಡಿಸಿದೆ.
ಇದನ್ನೂ ಓದಿ: ಈ ದಿನ ಸಂಪಾದಕೀಯ|ಮೋದಿ ರಾಜಿ ರಾಜಕಾರಣದಿಂದ ಭಾರತದ ಸ್ವಾಭಿಮಾನ- ಸಾರ್ವಭೌಮತೆಗೆ ಧಕ್ಕೆ
ಬ್ರಿಟನ್ ಜಾರಿಗೆ ತಂದಿರುವ ಹೊಸ ನಿಯಮಾವಳಿಗಳ ಪ್ರಕಾರ, ವಸಾಹತುಗಳಲ್ಲಿ ಉತ್ಪಾದನೆಯಾಗುವ ಕೃಷಿ ಹಾಗೂ ಕೈಗಾರಿಕಾ ಉತ್ಪನ್ನಗಳ ಆಮದನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ. ವಸಾಹತುಗಳ ನಿರ್ಮಾಣ, ಮೂಲಸೌಕರ್ಯ, ರಿಯಲ್ ಎಸ್ಟೇಟ್ ಹಾಗೂ ಆರ್ಥಿಕ ನೆರವು ನೀಡುವ ಕಂಪನಿಗಳು ಮತ್ತು ವ್ಯಕ್ತಿಗಳ ವಿರುದ್ಧ ಹೊಸ ನಿರ್ಬಂಧಗಳನ್ನು ಹೇರಲಾಗುತ್ತದೆ. ವೆಸ್ಟ್ ಬ್ಯಾಂಕ್‌ನಲ್ಲಿ ಪ್ಯಾಲೇಸ್ತಿನಿಯನ್ನರ ವಿರುದ್ಧ ನಡೆಯುತ್ತಿರುವ ಹಿಂಸಾಚಾರದಲ್ಲಿ ಭಾಗಿಯಾಗಿರುವ ಮೂಲಭೂತವಾದಿ ವಸಾಹತುಶಾಹಿಗಳ ವಿರುದ್ಧವೂ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತದೆ.
ಬ್ರಿಟನ್ ಕೈಗೊಂಡ ಈ ನಿರ್ಧಾರವನ್ನು ಫ್ರಾನ್ಸ್ ಮತ್ತು ಕೆನಡಾ ದೇಶಗಳೂ ಬೆಂಬಲಿಸಿದ್ದು, ಶೀಘ್ರದಲ್ಲೇ ಇದೇ ರೀತಿಯ ನಿಷೇಧ ಹೇರುವುದಾಗಿ ಘೋಷಿಸಿವೆ. ಇದರೊಂದಿಗೆ ಸ್ಪೇನ್, ಐರ್ಲೆಂಡ್, ನಾರ್ವೆ ಸೇರಿದಂತೆ ಒಟ್ಟು 12 ದೇಶಗಳು ಜಂಟಿ ಹೇಳಿಕೆ ನೀಡಿ ಯುಕೆ ಕ್ರಮವನ್ನು ಬೆಂಬಲಿಸಿವೆ. ಬ್ರಿಟನ್ ಸರ್ಕಾರವು ಸ್ಪಷ್ಟಪಡಿಸಿರುವಂತೆ, ಈ ನಿಷೇಧವು ಕೇವಲ ಆಕ್ರಮಿತ ವೆಸ್ಟ್ ಬ್ಯಾಂಕ್‌ನ ಅಕ್ರಮ ವಸಾಹತುಗಳಿಗೆ ಮಾತ್ರ ಅನ್ವಯಿಸಲಿದ್ದು, ಇಸ್ರೇಲ್ ದೇಶದೊಂದಿಗಿನ ಸಾಮಾನ್ಯ ದ್ವಿಪಕ್ಷೀಯ ವ್ಯಾಪಾರ-ವಹಿವಾಟು ಮುಂದುವರಿಯಲಿದೆ.





