ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಸಾಸಾಬಾಳ ಗ್ರಾಮದಲ್ಲಿ ಹಿಂದೂ–ಮುಸ್ಲಿಂ ಸೌಹಾರ್ದದ ಪ್ರತೀಕವಾಗಿರುವ ನಿಂಗಪ್ಪ ಮುತ್ಯಾ ಉರುಸ ಜಾತ್ರಾ ಮಹೋತ್ಸವ ಅಕ್ಟೋಬರ್ 20 ಮತ್ತು 21ರಂದು ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರುಗಲಿದೆ ಎಂದು ಉತ್ಸವ ಸಮಿತಿ ತಿಳಿಸಿದೆ.
ಜಾತ್ರೆಯ ಮೊದಲ ದಿನವಾದ ಅ. 20ರಂದು ಬೆಳಿಗ್ಗೆ 9 ಗಂಟೆಗೆ ಗಂಧಲೇಪನ ಕಾರ್ಯಕ್ರಮ ನಡೆಯಲಿದೆ. ಅಂದು ಸಂಜೆ ಕ್ರೀಡಾಭಿಮಾನಿಗಳಿಗಾಗಿ ರಾಜ್ಯಮಟ್ಟದ ಪುರುಷರ ಮುಕ್ತ ಕಬಡ್ಡಿ ಪಂದ್ಯಾವಳಿಯನ್ನು ಹೊನಲು ಬೆಳಕಿನಲ್ಲಿ ಆಯೋಜಿಸಲಾಗಿದೆ.
ಪಂದ್ಯಾವಳಿಯಲ್ಲಿ ವಿಜೇತರಾಗುವ ತಂಡಗಳಿಗೆ ಆಕರ್ಷಕ ನಗದು ಬಹುಮಾನಗಳನ್ನು ಘೋಷಿಸಲಾಗಿದೆ. ಪ್ರಥಮ ಸ್ಥಾನ ಪಡೆಯುವ ತಂಡಕ್ಕೆ ₹51 ಸಾವಿರವನ್ನು ಮಾಜಿ ಶಾಸಕ ರಮೇಶ ಭೂಸನೂರ ನೀಡಲಿದ್ದಾರೆ. ದ್ವಿತೀಯ ಬಹುಮಾನ ₹31 ಸಾವಿರವನ್ನು ಬಿಜೆಪಿ ಮಂಡಲ ಅಧ್ಯಕ್ಷ ಸಂತೋಷಗೌಡ ಪಾಟೀಲ ಡಂಬಳ, ತೃತೀಯ ಬಹುಮಾನ ₹21 ಸಾವಿರವನ್ನು ಯುವ ಉದ್ಯಮಿ ಭೀಮಾಶಂಕರ ಅಲ್ಲಾಪೂರ ಹಾಗೂ ನಾಲ್ಕನೇ ಬಹುಮಾನ ₹11 ಸಾವಿರವನ್ನು ಬಿಜೆಪಿ ಮುಖಂಡ ಗೊಲ್ಲಾಳಪ್ಪಗೌಡ ಗಾಣೂರ ವಿತರಿಸಲಿದ್ದಾರೆ.
ಅ.21ರಂದು ದೀಪೋತ್ಸವದ ಧಾರ್ಮಿಕ ಕಾರ್ಯಕ್ರಮ ನಡೆಯಲಿದ್ದು, ರಾತ್ರಿ ‘ತಾಯಿಯ ಋಣ’ ಎಂಬ ಸಾಮಾಜಿಕ ನಾಟಕ ಪ್ರದರ್ಶನಗೊಳ್ಳಲಿದೆ. ಶಾಸಕ ಅಶೋಕ ಮನಗೂಳಿ ಅವರು ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಲಿದ್ದಾರೆ. ಧಾರ್ಮಿಕ ಆಚರಣೆ, ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಜಾತ್ರೆಯನ್ನು ಅರ್ಥಪೂರ್ಣವಾಗಿ ಆಚರಿಸಲು ಸಮಿತಿ ಸಿದ್ಧತೆ ಕೈಗೊಂಡಿದೆ.





