ವಿಜಯಪುರ ಜಿಲ್ಲೆಯಲ್ಲಿ ಬಹುದಿನಗಳ ಬೇಡಿಕೆಯಾಗಿರುವ ಸರ್ಕಾರಿ ವೈದ್ಯಕೀಯ ಕಾಲೇಜನ್ನು ಯಾವುದೇ ವಿಳಂಬವಿಲ್ಲದೆ ಸ್ಥಾಪಿಸಬೇಕು ಎಂದು ಆಗ್ರಹಿಸಿ ವಿಜಯಪುರ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನಾ ಹೋರಾಟ ಸಮಿತಿಯ ನಿಯೋಗವು ಜಿಲ್ಲಾ ಉಸ್ತುವಾರಿ ಸಚಿವ ಎಂ ಬಿ ಪಾಟೀಲ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿತು.
“ವಿಜಯಪುರ ಜಿಲ್ಲೆಯಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪಿಸಬೇಕೆಂಬ ಬೇಡಿಕೆ ಹಲವು ವರ್ಷಗಳಿಂದ ಜಿಲ್ಲೆಯ ಜನರು, ವಿದ್ಯಾರ್ಥಿಗಳು ಹಾಗೂ ವಿವಿಧ ಸಂಘಟನೆಗಳಿಂದ ವ್ಯಕ್ತವಾಗುತ್ತಿದ್ದು, ಸರ್ಕಾರ ಈ ಬೇಡಿಕೆಯನ್ನು ಗಂಭೀರವಾಗಿ ಪರಿಗಣಿಸಿ ಶೀಘ್ರ ಕ್ರಮ ಕೈಗೊಳ್ಳಬೇಕು” ಎಂದು ಸಮಿತಿ ಒತ್ತಾಯಿಸಿತು.
“ಮುಂಬರುವ ಸಚಿವ ಸಂಪುಟ ಸಭೆಯಲ್ಲೇ ವಿಜಯಪುರ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಅನುಮೋದನೆ ನೀಡಬೇಕು. ಕಾಲೇಜು ಸ್ಥಾಪನೆಗೆ ಅಗತ್ಯವಿರುವ ಅನುದಾನವನ್ನು ಮುಂಬರುವ ರಾಜ್ಯ ಬಜೆಟ್ನಲ್ಲಿ ಘೋಷಿಸಬೇಕು. ಸಚಿವ ಸಂಪುಟದ ಅನುಮೋದನೆ ದೊರೆತ ತಕ್ಷಣ ಆಡಳಿತಾತ್ಮಕ ಹಾಗೂ ತಾಂತ್ರಿಕ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ ಕಾಲೇಜು ಸ್ಥಾಪನೆಗೆ ಚಾಲನೆ ನೀಡಬೇಕು” ಎಂದು ಸಮಿತಿ ಮನವಿ ಮಾಡಿತು.
“ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಯಿಂದ ಬಡ ಹಾಗೂ ಮಧ್ಯಮ ವರ್ಗದ ವಿದ್ಯಾರ್ಥಿಗಳಿಗೆ ಕಡಿಮೆ ವೆಚ್ಚದಲ್ಲಿ ವೈದ್ಯಕೀಯ ಶಿಕ್ಷಣ ಪಡೆಯಲು ಅವಕಾಶ ದೊರೆಯಲಿದೆ. ಅಲ್ಲದೆ, ಜಿಲ್ಲೆಯ ಜನರಿಗೆ ಗುಣಮಟ್ಟ ಮತ್ತು ಕೈಗೆಟುಕುವ ವೈದ್ಯಕೀಯ ಸೇವೆಗಳು ಲಭ್ಯವಾಗಲಿದ್ದು, ವಿಜಯಪುರವನ್ನು ಉತ್ತರ ಕರ್ನಾಟಕದ ಪ್ರಮುಖ ವೈದ್ಯಕೀಯ ಶಿಕ್ಷಣದ ಜತೆಗೆ ಆರೋಗ್ಯ ಕೇಂದ್ರವನ್ನಾಗಿ ಬೆಳೆಸಲು ಸಹಕಾರಿಯಾಗಲಿದೆ” ಎಂದು ಸಮಿತಿ ತಿಳಿಸಿತು.
“ಸರ್ಕಾರಿ ವೈದ್ಯಕೀಯ ಕಾಲೇಜು ಕೇವಲ ಶಿಕ್ಷಣ ಸಂಸ್ಥೆಯ ಬೇಡಿಕೆಯಲ್ಲ. ಇದು ಜಿಲ್ಲೆಯ ಜನರ ಆರೋಗ್ಯ, ಶಿಕ್ಷಣ ಹಾಗೂ ಭವಿಷ್ಯದ ಅಭಿವೃದ್ಧಿಗೆ ಸಂಬಂಧಿಸಿದ ಪ್ರಮುಖ ಬೇಡಿಕೆಯಾಗಿದೆ. ಹೀಗಾಗಿ ರಾಜ್ಯ ಸರ್ಕಾರ ಈ ವಿಚಾರವನ್ನು ಆದ್ಯತೆಯ ಮೇರೆಗೆ ಪರಿಗಣಿಸಿ ಶೀಘ್ರ ನಿರ್ಧಾರ ಕೈಗೊಳ್ಳಬೇಕು” ಎಂದು ಸಮಿತಿ ಆಗ್ರಹಿಸಿತು.
ಮನವಿ ಸ್ವೀಕರಿಸಿದ ಸಚಿವ ಎಂ ಬಿ ಪಾಟೀಲ ಅವರು ಸಮಿತಿಯ ಬೇಡಿಕೆಯನ್ನು ಆಲಿಸಿ, ಈ ವಿಚಾರವನ್ನು ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳಲು ಪ್ರಯತ್ನಿಸುವುದಾಗಿ ಭರವಸೆ ನೀಡಿದರು.
ಈ ಸುದ್ದಿ ಓದಿದ್ದೀರಾ? ಶ್ರೀನಿವಾಸಪುರ | ಕರ್ನಾಟಕ ಮೌಲಾನಾ ಆಜಾದ್ ಸಾರ್ವಜನಿಕ ಶಾಲೆಯ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗೆ ಸನ್ಮಾನ
ಈ ಸಂದರ್ಭದಲ್ಲಿ ಸಮಿತಿಯ ಸದಸ್ಯರಾದ ಬಿ. ಭಗವಾನ್ ರೆಡ್ಡಿ, ಅಕ್ರಂ ಮಾಶಲ್ಕರ್, ಲಲಿತಾ ಬಿಜ್ಜರಗಿ, ಭೋಗೇಶ್ ಸೋಲಾಪುರ್, ಸಿದ್ದಲಿಂಗ ಬಾಗೇವಾಡಿ, ಜಗದೇವ ಸೂರ್ಯವಂಶಿ, ಸಿದ್ರಾಮಯ್ಯ ಹಿರೇಮಠ್, ಮಲ್ಲಿಕಾರ್ಜುನ ಎಚ್ ಟಿ, ಸಿ ಎಚ್ ಲೆಂಡೆ, ಬಿ ಎಸ್ ಬೀರಕಬ್ಬಿ, ನೀಲಂಬಿಕಾ ಬಿರಾದಾರ ಹಾಗೂ ಸುರೇಶ್ ಬಿಜಾಪುರ ಸೇರಿದಂತೆ ಹಲವರು ಇದ್ದರು.





