ವಿಶೇಷ ಸಮಗ್ರ ಪರಿಷ್ಕರಣೆ (SIR)-2026ರ ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಜೀವಂತ ವ್ಯಕ್ತಿಯೊಬ್ಬರನ್ನು ತಪ್ಪಾಗಿ ‘ಮೃತ’ ಎಂದು ದಾಖಲಿಸಿ ಕರಡು ಮತದಾರರ ಪಟ್ಟಿಯಿಂದ ಕೈಬಿಟ್ಟಿರುವ ಪ್ರಕರಣಕ್ಕೆ ಸಂಬಂಧಿಸಿ ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರದ ಮತದಾರರ ನೋಂದಣಾಧಿಕಾರಿಗಳ ಕಚೇರಿ ಸ್ಪಷ್ಟೀಕರಣ ನೀಡಿದೆ.
203-ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರದ ಭಾಗ ಸಂಖ್ಯೆ 24ಕ್ಕೆ ಸಂಬಂಧಿಸಿದ ಬಿಜೈ ನ್ಯೂ ರೋಡ್ನ ಜೆಸ್ಪಿನ್ ಅಪಾರ್ಟ್ಮೆಂಟ್ನ ನಿವಾಸಿ ಡೊನಾಲ್ಡ್ ಜೋಸೆಫ್ ರೇಗೂ ಅವರ ಹೆಸರನ್ನು ಗಣತಿ ನಮೂನೆಯಲ್ಲಿ (Enumeration Form) ‘ಮೃತ’ ಎಂದು ದಾಖಲಿಸಿ ಕರಡು ಮತದಾರರ ಪಟ್ಟಿಯಿಂದ ಕೈಬಿಡಲಾಗಿತ್ತು. ಈ ಕುರಿತು ಸೆಪ್ಟೆಂಬರ್ 1ರಂದು ದಿನಪತ್ರಿಕೆಯಲ್ಲಿ ವರದಿ ಪ್ರಕಟವಾಗಿದ್ದು, ಪ್ರಕರಣದ ಕುರಿತು ಪರಿಶೀಲನೆ ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪರಿಶೀಲನೆಯ ವೇಳೆ, ಡೊನಾಲ್ಡ್ ಜೋಸೆಫ್ ರೇಗೂ ಅವರು ಸದರಿ ವಿಳಾಸದಲ್ಲಿ ವಾಸವಾಗಿದ್ದು, ಕರಡು ಮತದಾರರ ಪಟ್ಟಿ ಪ್ರಕಟವಾಗುವ ಮೊದಲು ಭಾಗ ಸಂಖ್ಯೆ 23ರ ಮತದಾರರ ಪಟ್ಟಿಯಲ್ಲಿ ಕ್ರಮ ಸಂಖ್ಯೆ 48ರಲ್ಲಿ ಅವರ ಹೆಸರು ದಾಖಲಾಗಿತ್ತು. ಅವರ ಹೆಸರಿಗೆ Enumeration Form ಕೂಡ ಬಂದಿದ್ದು, ಅದನ್ನು ಸಂಬಂಧಪಟ್ಟ ಬೂತ್ ಮಟ್ಟದ ಅಧಿಕಾರಿ (BLO) ವಿತರಿಸಿದ್ದರು.

ಡೊನಾಲ್ಡ್ ಜೋಸೆಫ್ ರೇಗೂ ಅವರು Enumeration Form ಅನ್ನು ಭರ್ತಿ ಮಾಡಿ BLOಗೆ ಸಲ್ಲಿಸಿದ್ದರು. ಆದರೆ ನಮೂನೆಯಲ್ಲಿ 2002ರ ಮತದಾರರ ಪಟ್ಟಿಗೆ ಸಂಬಂಧಿಸಿದ Mapping ವಿವರ ಹಾಗೂ ಸಂಬಂಧಿಯ ವಿವರಗಳನ್ನು ದಾಖಲಿಸಿರಲಿಲ್ಲ. ವೈಯಕ್ತಿಕ ಮಾಹಿತಿಯನ್ನು ಮಾತ್ರ ನಮೂದಿಸಿದ್ದರು. ಇದೇ ವೇಳೆ ತಮ್ಮ ತಂದೆಯ ಮರಣ ಪ್ರಮಾಣಪತ್ರವನ್ನು Enumeration Formನೊಂದಿಗೆ ಲಗತ್ತಿಸಿದ್ದರು.
ಈ ಸಂದರ್ಭದಲ್ಲಿ BLO ಅವರು ನಮೂನೆಯನ್ನು ‘No Mapping Case’ ಎಂದು ಪರಿಗಣಿಸಿ ಸ್ವೀಕರಿಸಿದ್ದರು. ಆದರೆ ನಂತರ Enumeration Form ಅನ್ನು ಡಿಜಿಟಲೀಕರಣಗೊಳಿಸುವ ಸಂದರ್ಭದಲ್ಲಿ ಮತದಾರರು ತಂದೆಯ ಮರಣ ಪ್ರಮಾಣಪತ್ರವನ್ನು ಲಗತ್ತಿಸಿರುವುದನ್ನು ಆಧರಿಸಿ, ತಪ್ಪಾಗಿ ಡೊನಾಲ್ಡ್ ಜೋಸೆಫ್ ರೇಗೂ ಅವರನ್ನೇ ಮೃತ ವ್ಯಕ್ತಿ ಎಂದು ದಾಖಲಿಸಿ ಮತದಾರರ ಪಟ್ಟಿಯಿಂದ ಹೆಸರು ಕೈಬಿಟ್ಟಿರುವುದು ಪರಿಶೀಲನೆಯಲ್ಲಿ ಬೆಳಕಿಗೆ ಬಂದಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ 203-ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರದ ಮತದಾರರ ನೋಂದಣಾಧಿಕಾರಿಗಳು ಸಂಬಂಧಪಟ್ಟ BLO ಅವರಿಂದ ಈಗಾಗಲೇ ಸ್ಪಷ್ಟೀಕರಣ ಪಡೆದಿದ್ದಾರೆ. ಅಲ್ಲದೆ, ಕಚೇರಿಯಿಂದಲೂ BLO ಅವರಿಗೆ ಸ್ಪಷ್ಟೀಕರಣ ನೀಡುವಂತೆ ಸೂಚಿಸಲಾಗಿದೆ ಎಂದು ತಿಳಿಸಲಾಗಿದೆ.
ತಮ್ಮ ಹೆಸರು ಕರಡು ಮತದಾರರ ಪಟ್ಟಿಯಿಂದ ಕೈಬಿಟ್ಟಿರುವುದು BLO ಅವರ ಗಮನಕ್ಕೆ ಬಂದ ಕೂಡಲೇ, ಆಗಸ್ಟ್ 29ರಂದು ಮತದಾರರ ನೋಂದಣಾಧಿಕಾರಿ ಹಾಗೂ BLO ಅವರು ಖುದ್ದಾಗಿ ಡೊನಾಲ್ಡ್ ಜೋಸೆಫ್ ರೇಗೂ ಅವರನ್ನು ಸಂಪರ್ಕಿಸಿದ್ದಾರೆ. ಬಳಿಕ BLO App ಮೂಲಕ ಮತದಾರರ ಪಟ್ಟಿಗೆ ಮರುಸೇರ್ಪಡೆಗೊಳಿಸಲು ಅಗತ್ಯ ದಾಖಲೆಗಳನ್ನು ನಿಯಮಾನುಸಾರ ಪಡೆದು ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹೀಗಾಗಿ ಡೊನಾಲ್ಡ್ ಜೋಸೆಫ್ ರೇಗೂ ಅವರ ಹೆಸರನ್ನು 203-ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರದ ಭಾಗ ಸಂಖ್ಯೆ 24ರ ಮತದಾರರಾಗಿ ಅಂತಿಮ ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಲಾಗಿದೆ.






