ವಿಜಯಪುರ ಜಿಲ್ಲೆಯ ಸಿಂದಗಿಯಲ್ಲಿ ಮಳೆ ಕೊರತೆಯಿಂದ ಬಿತ್ತನೆ ಮಾಡಿರುವ ಬೆಳೆಗಳನ್ನು ಉಳಿಸಿಕೊಳ್ಳಲು ರೈತರು ಪರದಾಡುತ್ತಿರುವ ಸಂದರ್ಭದಲ್ಲಿ ಸಮರ್ಪಕ ವಿದ್ಯುತ್ ಪೂರೈಕೆ ಮಾಡದಿರುವುದನ್ನು ಖಂಡಿಸಿ ಸಿಂದಗಿ ತಾಲೂಕಿನ ಸಾಸಾಬಾಳ ಗ್ರಾಮದ ಸುತ್ತಮುತ್ತಲಿನ ರೈತರು ಗೋಲಗೇರಿ 33/11 ಕೆವಿ ವಿದ್ಯುತ್ ವಿತರಣಾ ವಿಭಾಗದ ಕಚೇರಿ ಎದುರು ಧರಣಿ ನಡೆಸಿದರು.
ಈ ವರ್ಷ ಮಳೆ ಪ್ರಮಾಣ ಕಡಿಮೆಯಾಗಿರುವುದರಿಂದ ಬಿತ್ತನೆ ಮಾಡಿರುವ ಬೆಳೆಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸುವುದು ರೈತರಿಗೆ ಸವಾಲಾಗಿ ಪರಿಣಮಿಸಿದೆ. ಇಂತಹ ಸಂದರ್ಭದಲ್ಲಿ ರೈತರ ಜಮೀನುಗಳಿಗೆ ಸಮರ್ಪಕ ವಿದ್ಯುತ್ ಪೂರೈಕೆ ಮಾಡಬೇಕಾದ ಹೆಸ್ಕಾಂ ಅಧಿಕಾರಿಗಳು ನಿಗದಿತ ಅವಧಿಯಲ್ಲೂ ವಿದ್ಯುತ್ ನೀಡುತ್ತಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ರೈತರಿಗೆ ದಿನಕ್ಕೆ ಕನಿಷ್ಠ 6ರಿಂದ 7 ಗಂಟೆಗಳ ಕಾಲ ವಿದ್ಯುತ್ ಪೂರೈಕೆ ಮಾಡಬೇಕಿದ್ದರೂ, ಗೋಲಗೇರಿ ವಿಭಾಗದಲ್ಲಿ ಕೇವಲ 2ರಿಂದ 3 ಗಂಟೆಗಳಷ್ಟೇ ವಿದ್ಯುತ್ ನೀಡಲಾಗುತ್ತಿದೆ. ಇದರಿಂದ ಬೆಳೆಗಳಿಗೆ ನೀರು ಹಾಯಿಸಲು ಸಾಧ್ಯವಾಗದೆ ರೈತರು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ದೂರಿದರು.
ವಿದ್ಯುತ್ ಸಮಸ್ಯೆ ಕುರಿತು ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ ಸೂಕ್ತವಾಗಿ ಸ್ಪಂದಿಸಿಲ್ಲ. ಹೀಗಾಗಿ ಅನಿವಾರ್ಯವಾಗಿ ಕಚೇರಿ ಎದುರು ಧರಣಿ ನಡೆಸಬೇಕಾಯಿತು ಎಂದು ರೈತರು ಹೇಳಿದರು.
ಸ್ಥಳಕ್ಕೆ ಆಗಮಿಸಿದ ತಾಲೂಕು ಅಧಿಕಾರಿಗಳಾದ ಎ.ಡಬ್ಲ್ಯೂ ರಾಠೋಡ್ ಅವರು ರೈತರ ಮನವಿ ಸ್ವೀಕರಿಸಿ, ಇನ್ನು ಮುಂದೆ ರೈತರಿಗೆ ಸಮರ್ಪಕವಾಗಿ ವಿದ್ಯುತ್ ಪೂರೈಕೆ ಮಾಡುವುದಾಗಿ ಭರವಸೆ ನೀಡಿದರು. ಅಧಿಕಾರಿಗಳ ಭರವಸೆ ಹಿನ್ನೆಲೆಯಲ್ಲಿ ರೈತರು ಧರಣಿಯನ್ನು ಕೈಬಿಟ್ಟರು.
ಪ್ರತಿಭಟನೆಯಲ್ಲಿ ಮುಖಂಡರಾದ ರಮೇಶ್ ಸಾಸಾಬಾಳ, ಶ್ರೀಶೈಲ ಚಿಂಚೋಳಿ, ಕುಮಾರ್ ಬಿರಾದಾರ್, ಈರಬಸಪ್ಪ ಚನ್ನೂರ, ನಿಂಗಣ್ಣ ರೊಡಗಿ, ರವಿ ಹೊಳಕೂಂದಿ ಸೇರಿದಂತೆ ಸಾಸಾಬಾಳ ಗ್ರಾಮದ ಸುತ್ತಮುತ್ತಲಿನ ರೈತರು ಪಾಲ್ಗೊಂಡಿದ್ದರು.




