ಕಳೆದ 23 ವರ್ಷಗಳಿಂದ ಸರ್ಕಾರಿ ಶಾಲಾ ಕಾಲೇಜುಗಳಿಗೆ ಮೂಲ ಸೌಲಭ್ಯಗಳನ್ನು ಒದಗಿಸುವಂತೆ ಹಾಗೂ ಹಲವು ರೀತಿಯ ಉನ್ನತ ಶಿಕ್ಷಣದ ವಿದ್ಯಾಸಂಸ್ಥೆಗಳನ್ನು ಸ್ಥಾಪನೆ ಮಾಡುವಂತೆ ಆಗ್ರಹಿಸಿ ಎಐಡಿಎಸ್‌ಒ ಹೋರಾಟ ಮಾಡುತ್ತಾ ಬಂದಿದೆ ಎಂದು ವಿಜಯಪುರ ಜಿಲ್ಲಾ ಕಾರ್ಯದರ್ಶಿ ಕಾವೇರಿ ರಜಪೂತ ಹೇಳಿದರು.
ವಿಜಯಪುರ ನಗರದ ಜಾಲವಾದ ಹಳ್ಳಿಯಲ್ಲಿ ಹಮ್ಮಿಕೊಂಡಿದ್ದ ಎಐಡಿಎಸ್‌ಒ 70ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.
“ಬಿಜಾಪುರ ಜಿಲ್ಲೆಯಲ್ಲಿ ಒಂದು ಸರ್ಕಾರಿ ಮೆಡಿಕಲ್ ಕಾಲೇಜು ಮತ್ತು ಎಂಜಿನಿಯರಿಂಗ್ ಕಾಲೇಜುಗಳನ್ನು ಸ್ಥಾಪನೆ ಮಾಡುವಂತೆ ಒತ್ತಾಯಿಸಿ, ಮೆಡಿಕಲ್ ವಿದ್ಯಾರ್ಥಿಗಳ ಸಮಸ್ಯೆಗಳು, ಡಿಪ್ಲೊಮಾ ವಿದ್ಯಾರ್ಥಿಗಳ ಹೋರಾಟ ಹೀಗೆ ಕಳೆದ 10 ವರ್ಷಗಳಿಂದ ನಿರಂತರವಾಗಿ ಹಲವಾರು ಹೋರಾಟಗಳನ್ನು ಮಾಡಿ ಸಂಘಟನೆಯನ್ನು ಕಟ್ಟಿ ಬೆಳೆಸುತ್ತಾ ಬಂದಿದ್ದೇವೆ. ಕಳೆದ ವರ್ಷ ಸರ್ಕಾರ 13,800 ಸರ್ಕಾರಿ ಶಾಲೆಗಳನ್ನು ವಿಲೀನಗೊಳಿಸುವ ಹೆಸರಿನಲ್ಲಿ ಮುಚ್ಚಲು ಆದೇಶ ಹೊರಡಿಸಿದಾಗ, ಬಿಜಾಪುರ ಜಿಲ್ಲೆಯಲ್ಲಿಯೂ 15,000ಕ್ಕೂ ಹೆಚ್ಚು ಸಹಿ ಸಂಗ್ರಹಿ, ಎನ್‌ಇಪಿ-2020 ವಿರೋಧಿಸಿ ಹಲವಾರು ಹೋರಾಟಗಳನ್ನು ಕಟ್ಟಲಾಯಿತು” ಎಂದು ತಿಳಿಸಿದರು.
“ವಿದ್ಯಾರ್ಥಿಗಳಲ್ಲಿ ಸಾಂಸ್ಕೃತಿಕ ಅಧಃಪತನ, ಅಶ್ಲೀಲ ಸಿನೆಮಾಗಳಿಗೆ ಬಲಿಯಾಗುತ್ತಿರುವುದು ದುಃಖದ ಸಂಗತಿ. ಇಲ್ಲಿ ವಿದ್ಯಾರ್ಥಿಗಳಲ್ಲಿ ಆದರ್ಶ, ಮೌಲ್ಯಗಳನ್ನು ಮೈಗೂಡಿಸಲು ಭಗತ್ ಸಿಂಗ್, ನೇತಾಜಿ ಸುಭಾಷ್ ಚಂದ್ರ ಬೋಸ್, ಈಶ್ವರ ಚಂದ್ರ ವಿದ್ಯಾಸಾಗರ ಇನ್ನೂ ಅನೇಕ ಮಹಾನ್ ವ್ಯಕ್ತಿಗಳ ವಿಚಾರಗಳನ್ನು ವಿದ್ಯಾರ್ಥಿಗಳ ಮಧ್ಯೆ ಕೊಂಡೊಯ್ಯುತ್ತಿದ್ದೇವೆ. ವೈಜ್ಞಾನಿಕ, ಧರ್ಮ ನಿರಪೇಕ್ಷ ಮತ್ತು ಪ್ರಜಾಸತ್ತಾತ್ಮಕ ಶಿಕ್ಷಣಕ್ಕಾಗಿ ಹೋರಾಡುತ್ತಿರುವ ನಮ್ಮ ದೇಶದ ಏಕೈಕ ವಿದ್ಯಾರ್ಥಿಗಳ ಸಂಘಟನೆಯಾಗಿದೆ” ಎಂದು ಹೇಳಿದರು.
“ರಾಜಾ ರಾಮಮೋಹನ್ ರಾಯ್, ಈಶ್ವರ ಚಂದ ವಿದ್ಯಾಸಾಗರ, ಜ್ಯೋತಿಬಾ ರಾವ್ ಫುಲೆ, ಸಾವಿತ್ರಿ ಬಾಯಿ ಫುಲೆ, ಕುದ್ಮಲ್ ರಂಗರಾಯರು ಮುಂತಾದ ಮಹಾನ್ ನವೋದಯ ಚಿಂತಕರ ಕನಸಾಗಿದ್ದು, ಅದನ್ನು ಸಾಧಿಸುವುದು ನಮ್ಮ ಕರ್ತವ್ಯ. ನಮಗೆ ಶಿಕ್ಷಣದ ಉದ್ದೇಶವು ಕೇವಲ ಪದವಿ, ವೃತ್ತಿ ಅಥವಾ ಹಣದ ಗಳಿಕೆಯಲ್ಲ. ಆದರೆ, ಅದರ ನಿಜವಾದ ಅರ್ಥ ಮನುಷ್ಯನಾಗುವುದು. ವಿದ್ಯಾರ್ಥಿಗಳಾಗಿ ನಾವು ನಮ್ಮ ಮಾನವ ಸಮಾಜದ ಬಹುದೊಡ್ಡ ನಿಧಿಯಾದ ಜ್ಞಾನವನ್ನು ಬೆಳೆಸಲು ಪ್ರಾಮಾಣಿಕವಾಗಿ ಶ್ರಮಿಸಬೇಕು” ಎಂದರು.
ಈ ಸುದ್ದಿ ಓದಿದ್ದೀರಾ? ತುಮಕೂರು | 334 ಗ್ರಾಮಗಳಿಗೂ ಸ್ಮಶಾನ ಭೂಮಿ ಮಂಜೂರು: ಶಾಸಕ ಎಸ್ ಆರ್ ಶ್ರೀನಿವಾಸ್
“ಶಿಕ್ಷಣ, ಜ್ಞಾನ, ಸಂಸ್ಕೃತಿ ಮತ್ತು ಮಾನವೀಯತೆಯನ್ನು ಎಲ್ಲ ರೀತಿಯ ದಾಳಿಯಿಂದ ರಕ್ಷಿಸಲು ಸಾಧ್ಯವಿರುವ ಎಲ್ಲ ರೀತಿಯಲ್ಲಿ ನಮ್ಮನ್ನು ನಾವು ತೊಡಗಿಸಿಕೊಳ್ಳಬೇಕು” ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಈ ಕಾರ್ಯಕ್ರಮದಲ್ಲಿ ಅನೇಕ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಎಐಡಿಎಸ್‌ಒ 70ನೇ ಸಂಸ್ಥಾಪನಾ ದಿನದ ಅಂಗವಾಗಿ ಮಕ್ಕಳು ಶಾಲೆಗಳಲ್ಲಿ ಸೂಕ್ತಿ ಪ್ರದರ್ಶನ ಹಾಕಿದ್ದರು.