ಮೆಟ್ರಿಕ್ ನಂತರದ ಎಸ್‌ಸಿ/ಎಸ್‌ಟಿ ಬಾಲಕಿಯರ ವಸತಿ ನಿಲಯದಲ್ಲಿ ವಾರ್ಡನ್ ಮತ್ತು ಅಡುಗೆ ಸಿಬ್ಬಂದಿ ದೈಹಿಕ ಹಾಗೂ ಮಾನಸಿಕ ಕಿರುಕುಳ ನೀಡುತ್ತಿದ್ದಾರೆಂದು ಆರೋಪಿಸಿ ವಿದ್ಯಾರ್ಥಿನಿಯರು ವಿಜಯಪುರ ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿಗಳಿಗೆ ಮನವಿ ಸಲ್ಲಿಸಿ, ತುರ್ತು ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
“ಜಿಲ್ಲೆಯ ಬಸವನ ಬಾಗೇವಾಡಿಯ ವಸತಿ ನಿಲಯದ ವಾರ್ಡನ್ ರಾಜೇಶ್ವರಿ ಹಾಗೂ ಅಡುಗೆ ಸಿಬ್ಬಂದಿ ವಿದ್ಯಾರ್ಥಿನಿಯರೊಂದಿಗೆ ಅಮಾನವೀಯವಾಗಿ ವರ್ತಿಸುತ್ತಿದ್ದು, ಸಮಸ್ಯೆಗಳ ಕುರಿತು ಪ್ರಶ್ನಿಸಿದರೆ ಅವಾಚ್ಯ ಶಬ್ದಗಳಿಂದ ನಿಂದಿಸುವುದು, ಬೆದರಿಕೆ ಹಾಕುವುದು ಹಾಗೂ ದೈಹಿಕ ಹಲ್ಲೆ ನಡೆಸುವುದು ಸಾಮಾನ್ಯವಾಗಿದೆ” ಎಂದು ಆರೋಪಿಸಲಾಗಿದೆ.
“ಜುಲೈ 19ರಂದು ರಾತ್ರಿ ಸುಮಾರು 9ರ ಬಳಿಕ ಪರೀಕ್ಷೆ ತಯಾರಿಗಾಗಿ ಗ್ರಂಥಾಲಯದಲ್ಲಿ ಓದಲು ಅವಕಾಶ ನೀಡುವಂತೆ ಮನವಿ ಮಾಡಿಕೊಂಡಿದ್ದರೂ ಮನವಿಯನ್ನು ಪರಿಗಣಿಸುವ ಬದಲು ವಾರ್ಡನ್ ಹಾಗೂ ಸಿಬ್ಬಂದಿ ತಮ್ಮೆಲ್ಲರ ಮೇಲೆ ಹಲ್ಲೆ ನಡೆಸಿದ್ದು, ಕೆಲವರಿಗೆ ಮೈಮೇಲೆ ಬಾಸುಂಡೆಗಳು ಬರುವಂತೆ ಹೊಡೆದಿದ್ದಾರೆ” ಎಂದು ವಿದ್ಯಾರ್ಥಿನಿಯರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
“ಸರ್ಕಾರದ ವಸತಿ ನಿಲಯದಲ್ಲಿ ಶಿಕ್ಷಣಕ್ಕಾಗಿ ಉಳಿದಿರುವ ನಮಗೆ ಓದಲು ಅವಕಾಶ ಕೇಳಿದ ಕಾರಣಕ್ಕೆ ಹಲ್ಲೆ ನಡೆಸಿರುವುದು ಶಿಕ್ಷಣದ ಹಕ್ಕು, ಮಾನವ ಹಕ್ಕು ಹಾಗೂ ವಿದ್ಯಾರ್ಥಿನಿಯರ ಗೌರವಕ್ಕೆ ಧಕ್ಕೆ ತಂದಂತಾಗಿದೆ” ಎಂದು ವಿದ್ಯಾರ್ಥಿನಿಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

“ಇದಲ್ಲದೆ, ವಸತಿ ನಿಲಯದಲ್ಲಿ ನಡೆಯುವ ಅನ್ಯಾಯ ಮತ್ತು ದೌರ್ಜನ್ಯವನ್ನು ಪ್ರಶ್ನಿಸಿದರೆ ವಿದ್ಯಾರ್ಥಿನಿಯರನ್ನು ಬೆದರಿಸಿ ಮೌನವಾಗಿಸುವ ಪ್ರಯತ್ನ ನಡೆಯುತ್ತಿದೆ. ಹಾಗಾಗಿ ಕೂಡಲೇ ನಿಷ್ಪಕ್ಷಪಾತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು” ಎಂದು ಆಗ್ರಹಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೀದರ್ | ಅಲೆಮಾರಿ ಜನಾಂಗಕ್ಕೆ ವಸತಿ ಸೌಲಭ್ಯ ಕಲ್ಪಿಸಿ : ಸಂಸದ ಸಾಗರ ಖಂಡ್ರೆಗೆ ಮನವಿ
“ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಸಮುದಾಯಕ್ಕೆ ಸೇರಿದ ವಿದ್ಯಾರ್ಥಿನಿಯರಾಗಿರುವ ಹಿನ್ನೆಲೆಯಲ್ಲಿ, ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಅಗತ್ಯವಿದ್ದಲ್ಲಿ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಗಳ(ದೌರ್ಜನ್ಯ ತಡೆ) ಕಾಯ್ದೆ, 1989 ಸೇರಿದಂತೆ ಅನ್ವಯವಾಗುವ ಕಾನೂನುಗಳಡಿ ತನಿಖೆ ನಡೆಸಿ ನ್ಯಾಯ ಒದಗಿಸಬೇಕು” ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಈ ದಿನ.ಕಾಮ್ ವಿಜಯಪುರದ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಮಹೇಶ ಪೋತದಾರ ಅವರನ್ನು ಸಂಪರ್ಕಿಸಿದಾಗ ಮಾತನಾಡಿ, “ವಸತಿ ನಿಲಯಕ್ಕೆ ನಾನು ಭೇಟಿಮಾಡಿ ಸಮಸ್ಯೆ ಬಗೆಹರಿಸುತ್ತೇನೆ. ಹಲ್ಲೆ ಮಾಡಿದವರ ಮೇಲೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು. ಇಂತಹ ಘಟನೆಗಳು ಮರುಕಳಿಸದಂತೆ ಕ್ರಮವಹಿಸಲಾಗುವುದು” ಎಂದು ಪ್ರತಿಕ್ರಿಯಿಸಿದರು.





