ಬಸವಣ್ಣನವರು ಪ್ರತಿಪಾದಿಸಿದ ಸಮಾನತೆ, ಕಾಯಕ, ದಾಸೋಹ ಹಾಗೂ ಜಾತಿ ನಿರ್ಮೂಲನೆಯಂತಹ ತತ್ವಗಳನ್ನು ಸಮಾಜದಲ್ಲಿ ಪರಿಣಾಮಕಾರಿಯಾಗಿ ಅಳವಡಿಸಿಕೊಂಡಾಗ ಮಾತ್ರ ಸಮಸಮಾಜ ನಿರ್ಮಾಣ ಸಾಧ್ಯ ಎಂದು ಮಾಜಿ ವಿಧಾನ ಪರಿಷತ್ ಸದಸ್ಯ ಆಲ್ಕೋಡ ಹನಮಂತಪ್ಪ ಹೇಳಿದರು.
ವಿಜಯಪುರ ನಗರದ ಖಾಸಗಿ ಹೋಟೆಲ್‌ನಲ್ಲಿ ಕರ್ನಾಟಕ ರಾಜ್ಯ ಆದಿ ಜಾಂಬವ ಸಂಘದ ವಿಜಯಪುರ ಜಿಲ್ಲಾ ಸಮಿತಿ ವತಿಯಿಂದ ಆಯೋಜಿಸಿದ್ದ ‘ಸಾಮಾಜಿಕ ನ್ಯಾಯಕ್ಕಾಗಿ ಒಳ ಮೀಸಲಾತಿ’ ವಿಚಾರ ಸಂಕೀರ್ಣಕ್ಕೆ ಸಸಿಗೆ ನೀರುಣಿಸುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.
ಈ ದೇಶದ ಒಡೆಯರು ಎಂಬ ಆತ್ಮಗೌರವ ಪ್ರತಿಯೊಬ್ಬರಲ್ಲೂ ಮೂಡಬೇಕು.ಲಿಂಗಾಯತ ಧರ್ಮದ ಮೂಲ ಆಶಯಗಳು ಹಾಗೂ ಬಸವಣ್ಣನವರ ವಿಚಾರಧಾರೆಗಳನ್ನು ಸಮರ್ಪಕವಾಗಿ ಪಾಲಿಸುವಲ್ಲಿ ಲೋಪವಾಗಿದೆ. ಬಸವಣ್ಣನವರು ಕಾಯಕಕ್ಕೆ ಗೌರವ ನೀಡುವುದರ ಜತೆಗೆ ದಾಸೋಹದ ಸಂಪ್ರದಾಯದ ಮೂಲಕ ಸಮಾಜದಲ್ಲಿ ಸಮಾನತೆ ಹಾಗೂ ಸಹಬಾಳ್ವೆಯ ಸಂದೇಶ ಸಾರಿದ್ದರು ಎಂದರು.
ಡಾ. ಬಿ.ಆರ್. ಅಂಬೇಡ್ಕರ್ ಅವರು ಬಸವಣ್ಣನವರು ಹಾಗೂ ಬುದ್ಧನ ತತ್ವಗಳಿಂದ ಪ್ರಭಾವಿತರಾಗಿದ್ದರು. ಅಸ್ಪೃಶ್ಯತೆ ನಿರ್ಮೂಲನೆ, ಜಾತಿ ವ್ಯವಸ್ಥೆಯ ವಿರೋಧ, ಸಮಾನತೆ ಮತ್ತು ಮಾನವೀಯ ಮೌಲ್ಯಗಳಿಗೆ ಬಸವಣ್ಣ ಹಾಗೂ ಬುದ್ಧನ ತತ್ವಗಳಲ್ಲಿ ಹೆಚ್ಚಿನ ಮಹತ್ವ ನೀಡಲಾಗಿತ್ತು. ಇದೇ ಕಾರಣದಿಂದ ಅಂಬೇಡ್ಕರ್ ಅವರು ಅವರ ಆದರ್ಶಗಳನ್ನು ಗೌರವಿಸಿದ್ದರು ಎಂದು ತಿಳಿಸಿದರು.
ಮಾಜಿ ಶಾಸಕ ವೀರಭದ್ರಪ್ಪ ಹಾಲಭಾವಿ ಮಾತನಾಡಿ, ಬಸವಣ್ಣನವರು ಮಾದರ ಚೆನ್ನಯ್ಯ ಅವರನ್ನು ‘ಅಪ್ಪ’ ಎಂದು ಕರೆದಿದ್ದರು.ಅವರ ವಿಚಾರಧಾರೆಯಲ್ಲಿ ಯಾವುದೇ ಜಾತಿ-ಭೇದಭಾವ ಇರಲಿಲ್ಲ ಎಂದರು.
ಒಳ ಮೀಸಲಾತಿ ವಿಚಾರದಲ್ಲಿ ‘ಇಬ್ಬರ ಜಗಳ ಮೂರನೆಯವರಿಗೆ ಲಾಭ’ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ.ನಮ್ಮ ಸಮಾಜದ ಜನರು ಅಟ್ರಾಸಿಟಿ (ದೌರ್ಜನ್ಯ) ಮಾಡುವವರಲ್ಲ. ಅಂತಹ ಕೃತ್ಯಗಳಿಗೆ ನಮ್ಮ ಸಮಾಜ ಅವಕಾಶ ನೀಡಿಲ್ಲ, ಮುಂದೆಯೂ ನೀಡುವುದಿಲ್ಲ. ಆದರೆ ಮುಗ್ಧ ಸಮಾಜದ ಮೇಲೆ ಆಪಾದನೆ ಬಂದಿರುವುದು ವಿಷಾದನೀಯ. ಇಂತಹ ಆಪಾದನೆಗಳಿಗೆ ಅಂತ್ಯ ಹಾಡಬೇಕು ಎಂದು ಹೇಳಿದರು.
ಒಳ ಮೀಸಲಾತಿಗಾಗಿ ಕಳೆದ 35ರಿಂದ 40 ವರ್ಷಗಳಿಂದ ಹೋರಾಟ ನಡೆಸಲಾಗಿದ್ದು, ಇದೀಗ ಹೋರಾಟ ಯಶಸ್ವಿಯಾಗಿದೆ. ಸಾಮಾಜಿಕ ನ್ಯಾಯದ ಆಶಯ ಈಡೇರಿಸುವ ನಿಟ್ಟಿನಲ್ಲಿ ಮುಂದಿನ ಹೋರಾಟವನ್ನು ಸಂಘಟಿತವಾಗಿ ನಡೆಸಬೇಕಿದೆ ಎಂದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಪೂರ್ಣಾನಂದ ಭಾರತೀಯ ಸ್ವಾಮೀಜಿ ವಹಿಸಿದ್ದರು. ದೇವರಹಿಪ್ಪರಗಿ ಶಾಸಕ ರಾಜು ಪಾಟೀಲ ಕುದಿರಿ ಸಾಲವಡಗಿ ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಅಪ್ಪು ಗೌಡ ಪಾಟೀಲ, ಎಚ್.ಆರ್. ಭೀಮಾಶಂಕರ್, ಮಲ್ಲಿಕಾರ್ಜುನ ಯಂಡಿಗೇರಿ, ಪರಶುರಾಮ ರೊಣಿಹಾಳ ಸೇರಿದಂತೆ ಹಲವರು ಮಾತನಾಡಿದರು.
ಈ ಸಂದರ್ಭದಲ್ಲಿ ರಮೇಶ್ ಮಾಳಗಿ, ಮಲ್ಲನಗೌಡ ಪಾಟೀಲ, ಶರಣಬಸಪ್ಪ ದೊಡಮನಿ, ಲಚ್ಚಪ್ಪ ಮಾದರ, ಎಲ್.ಎಂ.ಬೆಳ್ಳುಬ್ಬಿ, ಪ್ರದೀಪ ತಳಕೇರಿ, ವಿನೋದ ದೊಡಮನಿ, ಸದಾನಂದ ಗುನ್ನಾಪುರ, ಗುರುಲಿಂಗಪ್ಪ ಅಂಗಡಿ, ಬಸವರಾಜ ಹರನಾಳ, ಹಣಮಂತ ಸಂತೋಷ ತಳಕೇರಿ, ಆರ್. ಲೋಕೇಶ, ಕಾಂತು ಗಚ್ಚಿನಮನಿ, ಶಿವಾನಂದ ಮಾದರ, ಯಶವಂತ ಕಾರಜೋಳ, ಸುನೀಲ ದೇವರಮನಿ, ಜಯಶ್ರೀ ವಾಡೆ, ಯಶೋಧ ಮೇಲಿನಕೇರಿ, ರೇಣುಕ ಮಾದರ, ಭಾರತಿ ವಾಡೆ, ಬಸ್ಸಮ್ಮ ಮಾದರ, ಸುವರ್ಣ ವಾಡೆ, ಇಂದ್ರ ಮಾದರ, ಸಾಬು ಗುಣದಾಳ, ವಿಜಯ ಕುಮಾರ ಜಂಬಗಿ, ಮಲ್ಲು ಲಾಳಿ, ಭೀಮರಾಯ ರತ್ನಕರ, ಶ್ರೀಧರ ಕಟ್ಟಿಮನಿ ಸೇರಿದಂತೆ ಹಲವರು ಇದ್ದರು.





