ಆಹಾರ ಕಿಟ್‌ ಸ್ಥಗಿತ, ರೇಷನ್‌ ಖರೀದಿಗೆ ಕೈಗಡ; ಕಾಡಂಚಿನ ಸಿದ್ದಿಗರ ಗೋಳು ಕೇಳುವರಾರು?

Date:

ಜಿಲ್ಲೆಯ ಅರಣ್ಯದಂಚಿನ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುವ ಸಿದ್ದಿ ಸಮುದಾಯದ ಸಾವಿರಾರು ಕುಟುಂಬಗಳಿಗೆ ಸರ್ಕಾರಿ ಸೌಲಭ್ಯಗಳು ಸಮರ್ಪಕವಾಗಿ ತಲುಪುತ್ತಿಲ್ಲ ಎಂಬ ಅಳಲು ಕೇಳಿಬರುತ್ತಿದೆ. ಅದರಲ್ಲೂ ಸಿದ್ದಿ ಕುಟುಂಬಗಳಿಗೆ ಪೌಷ್ಟಿಕ ಆಹಾರ ಒದಗಿಸುವ ಉದ್ದೇಶದಿಂದ ಜಾರಿಯಲ್ಲಿದ್ದ ಆಹಾರ ಕಿಟ್‌ ವಿತರಣೆಯು ಸುಮಾರು ಏಳು ತಿಂಗಳಿಂದ ಸ್ಥಗಿತಗೊಂಡಿದ್ದು, ಇದನ್ನೇ ಅವಲಂಬಿಸಿದ್ದ ಬಡ ಕುಟುಂಬಗಳ ಸಂಕಷ್ಟ ಮತ್ತಷ್ಟು ಹೆಚ್ಚಾಗಿದೆ.

ಜಿಲ್ಲೆಯ 7 ತಾಲೂಕುಗಳ 4,252 ಸಿದ್ದಿ ಕುಟುಂಬಗಳು ಆಹಾರ ಕಿಟ್‌ ಯೋಜನೆಯ ಫಲಾನುಭವಿಗಳಾಗಿವೆ. ಹಳಿಯಾಳದಲ್ಲಿ 1,822, ಯಲ್ಲಾಪುರದಲ್ಲಿ 1,778, ಅಂಕೋಲಾದಲ್ಲಿ 600, ಶಿರಸಿಯಲ್ಲಿ 380, ಮುಂಡಗೋಡದಲ್ಲಿ 368, ಕಾರವಾರದಲ್ಲಿ 23 ಹಾಗೂ ಜೋಯಿಡಾದಲ್ಲಿ 17 ಕುಟುಂಬಗಳು ಯೋಜನೆಯ ವ್ಯಾಪ್ತಿಯಲ್ಲಿವೆ. ದಿನಗೂಲಿ, ಕೂಲಿ ಹಾಗೂ ಸಣ್ಣಪುಟ್ಟ ಕೃಷಿಯನ್ನೇ ಅವಲಂಬಿಸಿರುವ ಕುಟುಂಬಗಳಿಗೆ ಕಿಟ್‌ ವಿತರಣೆ ಸ್ಥಗಿತಗೊಂಡಿರುವುದು ನೇರವಾಗಿ ದಿನನಿತ್ಯದ ಬದುಕಿನ ಮೇಲೆ ಪರಿಣಾಮ ಬೀರಿದೆ.

- Advertisement -
ಮಳೆಗಾಲದಲ್ಲಿ ಕೆಲಸವೂ ಕಡಿಮೆ, ಆದಾಯ ಶೂನ್ಯ:

ಸಿದ್ದಿ ಸಮುದಾಯದ ಬಹುತೇಕ ಕುಟುಂಬಗಳ ಜೀವನೋಪಾಯ ಕೂಲಿ ಕೆಲಸ, ಕೃಷಿ ಹಾಗೂ ಅರಣ್ಯ ಪ್ರದೇಶದ ಸಣ್ಣಪುಟ್ಟ ಕೆಲಸಗಳ ಮೇಲೆ ಅವಲಂಬಿತವಾಗಿದೆ. ಮಳೆಗಾಲದಲ್ಲಿ ಕೆಲಸದ ಅವಕಾಶಗಳು ಕಡಿಮೆಯಾಗುವುದರಿಂದ ಆದಾಯವೂ ಕುಸಿಯುತ್ತದೆ. ಇಂತಹ ಸಂದರ್ಭದಲ್ಲಿ ಅಕ್ಕಿ, ದ್ವಿದಳ ಧಾನ್ಯ, ಅಡುಗೆ ಎಣ್ಣೆ, ಬೆಲ್ಲ ಹಾಗೂ ಮೊಟ್ಟೆಗಳನ್ನು ಒಳಗೊಂಡ ಪೌಷ್ಟಿಕ ಆಹಾರ ಕಿಟ್‌ ಬಡ ಕುಟುಂಬಗಳಿಗೆ ನೆರವಾಗುತ್ತಿತ್ತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬೆಳಗಾವಿ | ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಕಬ್ಬು ಬೆಂಕಿಗಾಹುತಿ:...

ಬರಗಾಲದಿಂದ ಬೆಳೆ ನಷ್ಟ ಅನುಭವಿಸಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ರೈತರಿಗೆ ಇದೀಗ ವಿದ್ಯುತ್‌ ಶಾರ್ಟ್ ಸರ್ಕ್ಯೂಟ್ ಮತ್ತೊಂದು ಹೊಡೆತ ನೀಡಿದೆ. ವರ್ಷವಿಡೀ ಕಷ್ಟಪಟ್ಟು ಬೆಳೆಸಿದ ಕಬ್ಬು ಕಟಾವಿಗೆ ಬರುವ ಹೊತ್ತಿನಲ್ಲಿ ಬೆಂಕಿಗೆ ಆಹುತಿಯಾಗಿದ್ದು,...

ಹಾವೇರಿ | ಡಿಜಿಟಲ್ ಜನನ ಪ್ರಮಾಣ ಪತ್ರ ಗೊಂದಲ:...

ಹಳೆ ಮಾದರಿಯ ಕೈಬರಹ ಜನನ ಪ್ರಮಾನ ಪತ್ರದ ವಿಧಾನವನ್ನು ಬಿಟ್ಟು, ಡಿಜಿಟಲ್ ಜನನ ಪ್ರಮಾಣ ಪತ್ರ ನಿಯಮ ಜಾರಿಗೊಳಿಸಿದ್ದರಿಂದ ಹಲವು ಸಮಸ್ಯೆಗಳು ಎದುರಾಗಿದ್ದು, ಹದಿನಾರು ವರ್ಷಕ್ಕಿಂತ ಕೆಳಗಿನ ಮಕ್ಕಳಿಗೆ ಆಧಾರ್ ಕಾರ್ಡ್ ತಿದ್ದುಪಡಿ...

ವಲಸೆ ಹಳ್ಳಿಗರಿಗೆ ಮಾತ್ರವೇ? ಉದ್ಯೋಗಕ್ಕಾಗಿ ನಗರ ಸೇರುವ ಯುವಜನರೂ...

ಭಾರತವು ವಿಶ್ವದಲ್ಲೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶ. ಹೆಚ್ಚುತ್ತಿರುವ ಜನಸಂಖ್ಯೆಯೊಂದಿಗೆ ಆಹಾರ, ಶಿಕ್ಷಣ, ಆರೋಗ್ಯ, ವಸತಿ ಮತ್ತು ಉದ್ಯೋಗದ ಬೇಡಿಕೆಯೂ ಹೆಚ್ಚುತ್ತಿದೆ. ದೇಶದ ಅಭಿವೃದ್ಧಿಗೆ ಮಾನವ ಸಂಪನ್ಮೂಲವೇ ದೊಡ್ಡ ಶಕ್ತಿಯಾಗಿದ್ದರೂ, ಆ...

ಆದರೆ ಅಗತ್ಯವಿರುವ ಅವಧಿಯಲ್ಲೇ ಕಿಟ್‌ ಪೂರೈಕೆ ಸ್ಥಗಿತಗೊಂಡಿರುವುದರಿಂದ ಆಹಾರ ಸಾಮಗ್ರಿಗಳ ಖರೀದಿಗೂ ಕೆಲ ಕುಟುಂಬಗಳು ಸಾಲ, ಉದ್ರಿ ಹಾಗೂ ಕೈಗಡದ ಮೊರೆ ಹೋಗುವಂತಾಗಿದೆ ಎಂದು ಸಿದ್ದಿ ಸಮುದಾಯದ ಯುವಕ ಅನಿಲ್ ಹೊಸಳ್ಳಿ ಅವರು ಪರಿಸ್ಥಿತಿ ವಿವರಿಸಿದರು. ತಿಂಗಳುಗಳಿಂದ ಕಿಟ್‌ ಸಿಗದಿರುವುದು ಆರ್ಥಿಕವಾಗಿ ದುರ್ಬಲ ಕುಟುಂಬಗಳ ಮೇಲೆ ಹೆಚ್ಚುವರಿ ಹೊರೆ ಹಾಕಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ಕಿಟ್‌ ಜತೆಗೆ ಪಡಿತರಕ್ಕೂ ಕೆವೈಸಿ ಕಿರಿಕಿರಿ:

ಆಹಾರ ಕಿಟ್‌ ವಿತರಣೆಗೆ ಸಂಬಂಧಿಸಿದಂತೆ ಫಲಾನುಭವಿಗಳ ಗುರುತಿನ ಚೀಟಿ ಹಾಗೂ ಕೆವೈಸಿ ದಾಖಲೆಗಳನ್ನು ದೃಢೀಕರಿಸಿಕೊಳ್ಳುವಂತೆ ಸೂಚನೆ ನೀಡಲಾಗಿದೆ. ಇದರಿಂದ ಈಗಾಗಲೇ ಆರ್ಥಿಕ ಸಂಕಷ್ಟದಲ್ಲಿರುವ ಕುಟುಂಬಗಳಿಗೆ ಮತ್ತೊಂದು ಸುತ್ತಿನ ಕಚೇರಿ ಅಲೆದಾಟ ಆರಂಭವಾಗಿದೆ.

ಹಿಂದೆ ಅಧಿಕಾರಿಗಳೇ ಫಲಾನುಭವಿಗಳ ಮನೆಗಳಿಗೆ ತೆರಳಿ ದಾಖಲೆ ಪರಿಶೀಲನೆ ನಡೆಸುತ್ತಿದ್ದರು. ಇದೀಗ ಫಲಾನುಭವಿಗಳೇ ಕಚೇರಿಗಳಿಗೆ ತೆರಳಬೇಕಾಗಿದೆ. ಅರಣ್ಯಂಚಿನ ದೂರದ ಪ್ರದೇಶಗಳಿಂದ ವೃದ್ಧರು, ಮಹಿಳೆಯರು ಹಾಗೂ ಕೂಲಿ ಕಾರ್ಮಿಕರು ಕಚೇರಿಗೆ ತೆರಳುವುದು ಸುಲಭವಲ್ಲ. ಸರ್ವರ್‌ ಹಾಗೂ ನೆಟ್‌ವರ್ಕ್‌ ಸಮಸ್ಯೆಯಿಂದ ಕೆಲಸ ಒಂದೇ ದಿನದಲ್ಲಿ ಪೂರ್ಣಗೊಳ್ಳದೆ ಹಲವು ಬಾರಿ ತೆರಳಬೇಕಾಗುತ್ತದೆ ಎಂಬುದು ಫಲಾನುಭವಿಗಳ ಅಳಲು.

ಈದಿನ.ಕಾಮ್‌
ಜೊತೆಗೆ ಮಾತನಾಡಿದ ಯಲ್ಲಾಪುರ ತಾಲ್ಲೂಕಿನ ತೊಟ್ಟಿಲಗುಂಡಿ ನಿವಾಸಿ ರಾಕಿ ಬಸ್ನಾಲ ಸಾಲಗಟ್ಟಿ ಕೆವೈಸಿ ಪ್ರಕ್ರಿಯೆಯಿಂದ ಗ್ರಾಮಸ್ಥರು ಎದುರಿಸುತ್ತಿರುವ ಸಮಸ್ಯೆಯನ್ನು ವಿವರಿಸಿದರು.

“ಮನೆಯಲ್ಲಿ ಇರುವ ಎಲ್ಲರೂ ಕೆವೈಸಿ ಮಾಡಿಸಿಕೊಳ್ಳಬೇಕು ಎಂದರೆ ಖಾಸಗಿ ವಾಹನಕ್ಕೆ ಸುಮಾರು ₹400 ಖರ್ಚಾಗುತ್ತದೆ. ಅದೊಂದು ದಿನದಲ್ಲಿ ಮುಗಿಯುವ ಕೆಲಸವೂ ಅಲ್ಲ. ಸರ್ವರ್‌, ನೆಟ್‌ವರ್ಕ್‌ ಸಮಸ್ಯೆ ಎಂದು ಎರಡು-ಮೂರು ದಿನ ಅಲೆದಾಡಬೇಕಾಗುತ್ತದೆ. ಆ ದಿನಗಳಲ್ಲಿ ಕೂಲಿ ಕೆಲಸಕ್ಕೆ ಹೋಗಲು ಆಗುವುದಿಲ್ಲ. ಕೆಲಸಕ್ಕೆ ಹೋಗದಿದ್ದರೆ ನಮ್ಮ ಜೀವನ ನಡೆಯುವುದು ಹೇಗೆ?” ಎಂದು ಅವರು ಪ್ರಶ್ನಿಸಿದರು.

ಸರ್ಕಾರಿ ಸೌಲಭ್ಯ ಪಡೆಯಲು ತೆರಳುವಾಗಲೇ ವಾಹನ ವೆಚ್ಚದ ಜತೆಗೆ ದಿನಗೂಲಿ ನಷ್ಟವಾಗುವುದು ಕೂಲಿ ಕುಟುಂಬಗಳಿಗೆ ಹೆಚ್ಚುವರಿ ಹೊರೆಯಾಗಿದೆ.

ತೊಟ್ಟಿಲಗುಂಡಿಯಲ್ಲಿ ಸಾರಿಗೆ ಸಂಕಷ್ಟ:

ಜಿಲ್ಲೆಯ ಸಿದ್ದಿ ಸಮುದಾಯದ ಆಹಾರ ಕಿಟ್‌ ಸಮಸ್ಯೆ ವ್ಯಾಪಕವಾಗಿದ್ದರೂ, ತೊಟ್ಟಿಲಗುಂಡಿ ಗ್ರಾಮದ ಸಿದ್ದಿ ಹಾಗೂ ಗೌಳಿ ಸಮುದಾಯದ ಜನರು ಎದುರಿಸುತ್ತಿರುವ ಸ್ಥಳೀಯ ಸಮಸ್ಯೆಗಳೂ ಬೇರೆ ಯಾಗಿವೆ.

ಗೌಳಿ ಮತ್ತು ಸಿದ್ದಿ ಸಮುದಾಯದ ಸುಮಾರು 1,000ಕ್ಕೂ ಹೆಚ್ಚು ಜನರು ವಾಸಿಸುವ ಈ ಅರಣ್ಯಂಚಿನ ಪ್ರದೇಶದಲ್ಲಿ ಸಮರ್ಪಕ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಇಲ್ಲ. ಗ್ರಾಮಕ್ಕೆ ಬಸ್‌ ಸೌಲಭ್ಯ ಕಲ್ಪಿಸುವಂತೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ ಈವರೆಗೆ ಶಾಶ್ವತ ಪರಿಹಾರ ದೊರೆತಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.

ಬಸ್‌ ಸಂಪರ್ಕದ ಕೊರತೆಯಿಂದ ಗ್ರಾಮದ ಮಕ್ಕಳು ಪ್ರತಿದಿನ ಸುಮಾರು 8 ಕಿ.ಮೀ. ದೂರ ನಡೆದು ಶಾಲೆಗೆ ತೆರಳಬೇಕಾದ ಪರಿಸ್ಥಿತಿ ಇದೆ. ಮಳೆಗಾಲದಲ್ಲಿ ಈ ಸಂಕಷ್ಟ ಮತ್ತಷ್ಟು ಹೆಚ್ಚಾಗುತ್ತದೆ. ಕೂಲಿ ಕೆಲಸಕ್ಕಾಗಿ ಹೊರಗೆ ತೆರಳುವ ಕಾರ್ಮಿಕರೂ ಸಾರಿಗೆ ಕೊರತೆಯಿಂದ ತೊಂದರೆ ಅನುಭವಿಸುತ್ತಿದ್ದು, ತುರ್ತು ಸಂದರ್ಭಗಳಲ್ಲಿ ಖಾಸಗಿ ವಾಹನಗಳನ್ನೇ ಅವಲಂಬಿಸಬೇಕಾಗಿದೆ.

ಜಾಬ್‌ ಕಾರ್ಡ್ ಇದ್ದರೂ ಕೆಲಸದ ಖಾತ್ರಿ ಇಲ್ಲ:

ತೊಟ್ಟಿಲಗುಂಡಿಯ ಬಹುತೇಕ ಕುಟುಂಬಗಳು ಕೂಲಿ ಕೆಲಸವನ್ನೇ ಜೀವನಾಧಾರ ಮಾಡಿಕೊಂಡಿವೆ. ಹಲವರ ಬಳಿ ಕಾರ್ಮಿಕ ಕಾರ್ಡ್ ಹಾಗೂ ನರೇಗಾ ಜಾಬ್‌ ಕಾರ್ಡ್‌ಗಳಿದ್ದರೂ, ಅವುಗಳ ಮೂಲಕ ನಿರಂತರವಾಗಿ ಕೆಲಸ ದೊರೆಯುತ್ತಿಲ್ಲ ಎಂಬುದು ಗ್ರಾಮಸ್ಥರ ಅಳಲು.

ಒಂದೆಡೆ ನಿಯಮಿತ ಉದ್ಯೋಗದ ಕೊರತೆ, ಮತ್ತೊಂದೆಡೆ ಸರ್ಕಾರಿ ಸೌಲಭ್ಯಕ್ಕಾಗಿ ದಾಖಲೆಗಳೊಂದಿಗೆ ಕಚೇರಿಗೆ ಅಲೆದಾಟ. ಕೆಲಸಕ್ಕೆ ಹೋದರೆ ದಾಖಲೆಗಳ ಕೆಲಸ ಬಾಕಿ; ದಾಖಲೆಗಾಗಿ ಕಚೇರಿಗೆ ಹೋದರೆ ದಿನಗೂಲಿ ನಷ್ಟ. ಈ ಪರಿಸ್ಥಿತಿ ಬಡ ಕುಟುಂಬಗಳ ಸಂಕಷ್ಟವನ್ನು ಮತ್ತಷ್ಟು ಹೆಚ್ಚಿಸಿದೆ.

‘ಅಧಿಕಾರಿಗಳೇ ಗ್ರಾಮಕ್ಕೆ ಬಂದರೆ ಅನುಕೂಲ’:

ತೊಟ್ಟಿಲಗುಂಡಿಯ ಸಿದ್ದಿ ಸಮುದಾಯದ ಮಹಿಳೆ ಮೇರಿ ಸೆಬಾಸ್ಟಿಯನ್ ಫೆರ್ನಾಂಡಿಸ್ ಅವರು, ಅರಣ್ಯ ಪ್ರದೇಶದಲ್ಲಿ ವಾಸಿಸುವ ಜನರ ಪರಿಸ್ಥಿತಿಯನ್ನು ಪರಿಗಣಿಸಿ ದಾಖಲೆ ಪರಿಶೀಲನೆ ಹಾಗೂ ಕೆವೈಸಿ ಪ್ರಕ್ರಿಯೆಯನ್ನು ಗ್ರಾಮ ಮಟ್ಟದಲ್ಲಿಯೇ ನಡೆಸಬೇಕು ಎಂದು ಒತ್ತಾಯಿಸಿದರು.

“ನಮ್ಮಲ್ಲಿ ವೃದ್ಧರು, ಮಹಿಳೆಯರು ಹಾಗೂ ಕೂಲಿ ಕಾರ್ಮಿಕರು ಇದ್ದಾರೆ. ಪ್ರತಿಯೊಂದು ಸೌಲಭ್ಯಕ್ಕಾಗಿ ದೂರದ ಕಚೇರಿಗೆ ಹೋಗುವುದು ಸುಲಭವಲ್ಲ. ಅಧಿಕಾರಿಗಳೇ ಗ್ರಾಮಕ್ಕೆ ಬಂದು ದಾಖಲೆ ಪರಿಶೀಲನೆ ಮಾಡಿದರೆ ಎಲ್ಲರಿಗೂ ಅನುಕೂಲವಾಗುತ್ತದೆ. ಸಾರಿಗೆ, ಉದ್ಯೋಗ, ಶಿಕ್ಷಣ ಸೇರಿದಂತೆ ಹಲವು ಸಮಸ್ಯೆಗಳನ್ನು ನಾವು ಎದುರಿಸುತ್ತಿದ್ದೇವೆ,” ಎಂದು ಅವರು ಹೇಳಿದರು.

ಸಿದ್ದಿಗಳ ಆಹಾರ ಕಿಟ್‌ ಯೋಜನೆ:

ವಾರ್ಷಿಕವಾಗಿ ₹5 ಲಕ್ಷಕ್ಕಿಂತ ಕಡಿಮೆ ಆದಾಯ ಹೊಂದಿರುವ, ಅರಣ್ಯಂಚಿನ ಪ್ರದೇಶಗಳಲ್ಲಿ ಕೃಷಿ ಹಾಗೂ ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುವ ಸಿದ್ದಿ ಕುಟುಂಬಗಳಿಗೆ ಪೌಷ್ಟಿಕ ಆಹಾರ ಒದಗಿಸುವ ಉದ್ದೇಶದಿಂದ ಈ ಯೋಜನೆ ಜಾರಿಯಲ್ಲಿದೆ.

ಕಿಟ್‌ನಲ್ಲಿ ಅಕ್ಕಿ, ದ್ವಿದಳ ಧಾನ್ಯ, ಅಡುಗೆ ಎಣ್ಣೆ ಹಾಗೂ ಬೆಲ್ಲದ ಜತೆಗೆ ಮೊಟ್ಟೆಗಳನ್ನೂ ನೀಡಲಾಗುತ್ತಿತ್ತು. ಆರಂಭದಲ್ಲಿ ಪ್ರತಿ ತಿಂಗಳು ವಿತರಿಸಲಾಗುತ್ತಿದ್ದ ಕಿಟ್‌ ನಂತರ ಎರಡು ತಿಂಗಳಿಗೊಮ್ಮೆ ನೀಡುವ ವ್ಯವಸ್ಥೆಯಾಗಿತ್ತು. ಆದರೆ ಇದೀಗ ಸುಮಾರು ಏಳು ತಿಂಗಳಿಂದ ವಿತರಣೆಯೇ ಸ್ಥಗಿತಗೊಂಡಿದೆ.

ರಾಜ್ಯ ಮಟ್ಟದಲ್ಲಿ ಟೆಂಡರ್‌ ಪ್ರಕ್ರಿಯೆ ಪೂರ್ಣಗೊಳ್ಳದ ಕಾರಣ ವಿತರಣೆಯಲ್ಲಿ ವಿಳಂಬವಾಗಿದೆ ಎಂದು ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಸೌಲಭ್ಯ ತಲುಪಲು ಸರಳ ವ್ಯವಸ್ಥೆ ಬೇಕು:

ಸಿದ್ದಿ ಸಮುದಾಯದ ಸಮಸ್ಯೆ ಆಹಾರ ಕಿಟ್‌ ಸ್ಥಗಿತಕ್ಕೆ ಮಾತ್ರ ಸೀಮಿತವಾಗಿಲ್ಲ. ಆಹಾರ, ಉದ್ಯೋಗ, ಸಾರಿಗೆ, ಶಿಕ್ಷಣ ಹಾಗೂ ಸರ್ಕಾರಿ ಯೋಜನೆಗಳ ಅನುಷ್ಠಾನದಲ್ಲೂ ಹಲವು ಸವಾಲುಗಳಿವೆ. ಹೀಗಾಗಿ ಸ್ಥಗಿತಗೊಂಡಿರುವ ಪೌಷ್ಟಿಕ ಆಹಾರ ಕಿಟ್‌ ವಿತರಣೆಯನ್ನು ಶೀಘ್ರ ಪುನರಾರಂಭಿಸುವುದರ ಜತೆಗೆ, ಕೆವೈಸಿ ಪ್ರಕ್ರಿಯೆಯನ್ನು ಗ್ರಾಮ ಮಟ್ಟದಲ್ಲಿಯೇ ಸರಳವಾಗಿ ಪೂರ್ಣಗೊಳಿಸಿ, ಅರಣ್ಯಂಚಿನ ಗ್ರಾಮಗಳಿಗೆ ಸಾರಿಗೆ ಹಾಗೂ ಉದ್ಯೋಗ ಸೌಲಭ್ಯ ಕಲ್ಪಿಸಬೇಕು ಎಂಬುದು ಸಮುದಾಯದ ಒತ್ತಾಯ.

ಸರ್ಕಾರಿ ಸೌಲಭ್ಯಕ್ಕಾಗಿ ಕಚೇರಿಗೆ ಅಲೆದಾಡುವ ಬದಲು, ಸೌಲಭ್ಯವೇ ಫಲಾನುಭವಿಗಳ ಬಳಿಗೆ ತಲುಪಬೇಕು ಎಂಬುದು ಸಿದ್ದಿ ಸಮುದಾಯದ ನಿರೀಕ್ಷೆ

987638ca8c89079659d0147ec8165bb4e02be67aff4a7af8f502ae66e86a5a1e?s=150&d=mp&r=g
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಸರಾ ಸೇರಿ ಎಲ್ಲಾ ಉತ್ಸವಗಳಲ್ಲಿ ಆನೆಗಳ ಬಳಕೆ ನಿಷೇಧಿಸಿ, ರೋಬೋಟಿಕ್ ಆನೆ ಬಳಸಿ: ಅರಣ್ಯ ಸಚಿವರಿಗೆ ಮನವಿ

ನಾಡಹಬ್ಬ ಮೈಸೂರು ದಸರಾ ಮತ್ತು ಜಿಲ್ಲಾವಾರು ದಸರಾ ಆಚರಣೆಗಳು ಸೇರಿದಂತೆ ಯಾವುದೇ...

ಔರಾದ(ಬಿ) ಬಿಜೆಪಿ ಮಂಡಲದ ನೂತನ ಅಧ್ಯಕ್ಷರಾಗಿ ಅನಿರುದ್ಧ ವಾಡೇಕರ್ ಆಯ್ಕೆ

ಭಾರತೀಯ ಜನತಾ ಪಕ್ಷದ ಔರಾದ(ಬಿ) ಮಂಡಲದ ನೂತನ ಅಧ್ಯಕ್ಷರಾಗಿ ಅನಿರುದ್ಧ ವಾಡೇಕರ್...

ಆಂಧ್ರಪ್ರದೇಶ | ರಸ್ತೆ ಕಾಮಗಾರಿ ವೇಳೆ ಜೆಲಾಟಿನ್ ಸ್ಫೋಟ; ಶಾಲಾ ಶಿಕ್ಷಕಿ ಸೇರಿದಂತೆ ಹಲವರ ಸಾವು

ರಸ್ತೆ ಕಾಮಗಾರಿಗಾಗಿ ಬಳಸಲಾಗುತ್ತಿದ್ದ ಜೆಲಾಟಿನ್ ಸ್ಟಿಕ್‌ಗಳು ಅನಿರೀಕ್ಷಿತವಾಗಿ ಸ್ಫೋಟಗೊಂಡು, ಶಾಲಾ ಶಿಕ್ಷಕಿಯೊಬ್ಬರು...

ರಾಯಚೂರು | ಸ್ಮಶಾನದಲ್ಲಿ ಹೂತ ಶವಗಳ ಅವಶೇಷ ಸಾಗಣೆ ಆರೋಪ: ಮೂವರು ಪೊಲೀಸ್ ವಶಕ್ಕೆ

ನಗರದ 13ನೇ ವಾರ್ಡ್‌ನ ಮಾರುತಿ ನಗರ ಸ್ಮಶಾನದಲ್ಲಿ ಹೂತು ಹಾಕಿದ ಶವಗಳ...