ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR)-2026ರ ಅಂಗವಾಗಿ ವಿಜಯಪುರ ನಗರದಲ್ಲಿ ಗುರುವಾರ ಮಧ್ಯಾಹ್ನ 12 ಗಂಟೆಯವರೆಗೆ 2,52,570 ಮತದಾರರ ಗಣತಿ ನಮೂನೆಗಳನ್ನು ವಿತರಿಸಲಾಗಿದ್ದು, ಈ ಪೈಕಿ 76,777 ಗಣತಿ ನಮೂನೆಗಳನ್ನು ಡಿಜಿಟೈಜ್ ಮಾಡಲಾಗಿದೆ ಎಂದು ಮಹಾನಗರ ಪಾಲಿಕೆ ಆಯುಕ್ತ ವಿಜಯ ಮೆಕ್ಕಳಕಿ ತಿಳಿಸಿದ್ದಾರೆ.
ನಗರದ ಮಹಾನಗರ ಪಾಲಿಕೆ ಸಭಾಂಗಣದಲ್ಲಿ ನಗರ ಮತಕ್ಷೇತ್ರದ ರಾಜಕೀಯ ಪಕ್ಷಗಳ ಮುಖಂಡರೊಂದಿಗೆ ನಡೆದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, “ಆನ್ಲೈನ್ ಮೂಲಕ 1,979 ಗಣತಿ ನಮೂನೆಗಳು ಸಲ್ಲಿಕೆಯಾಗಿವೆ” ಎಂದು ಹೇಳಿದರು.
ಸಭೆಯಲ್ಲಿ ನೀಡಿದ ಮಾಹಿತಿಯಂತೆ, “11 ಮತದಾರರನ್ನು ಸಂಪರ್ಕಿಸಲು ಸಾಧ್ಯವಾಗಿಲ್ಲ. 468 ಮತದಾರರು ಶಾಶ್ವತವಾಗಿ ಸ್ಥಳಾಂತರಗೊಂಡಿದ್ದು, 867 ಮಂದಿ ಮೃತಪಟ್ಟಿದ್ದಾರೆ. ಈಗಾಗಲೇ 730 ಮಂದಿ ಮತದಾರರು ನೋಂದಾಯಿಸಿಕೊಂಡಿದ್ದು, ಇತರೆ 69 ಪ್ರಕರಣಗಳ ಪರಿಶೀಲನೆ ನಡೆಯುತ್ತಿದೆ” ಎಂದು ತಿಳಿಸಿದರು.
“ನಗರದಲ್ಲಿ ಶೇ.87ರಷ್ಟು ಮತದಾರರಿಗೆ ಮನೆ ಮನೆಗೆ ತೆರಳಿ ಗಣತಿ ನಮೂನೆಗಳನ್ನು ವಿತರಿಸಲಾಗಿದೆ. ಇನ್ನೂ ನಮೂನೆ ತಲುಪದ ಮತದಾರರ ಗುರುತಿನ ಚೀಟಿ ಮಾಹಿತಿ ಹಾಗೂ ದೂರವಾಣಿ ಸಂಖ್ಯೆಗಳನ್ನು ಸಂಗ್ರಹಿಸಿ ಸಂಬಂಧಿತ ಬಿಎಲ್ಒಗಳಿಗೆ ಒದಗಿಸುವ ಕಾರ್ಯವೂ ಪ್ರಗತಿಯಲ್ಲಿದೆ” ಎಂದು ತಿಳಿಸಿದರು.
ಸಭೆಯಲ್ಲಿ ರಾಜಕೀಯ ಪಕ್ಷಗಳ ಮುಖಂಡರು ನಗರದಲ್ಲಿ ಕೆಲ ಮತದಾರರು ಒಂದಕ್ಕಿಂತ ಹೆಚ್ಚು ಮತದಾರರ ಗುರುತಿನ ಚೀಟಿಗಳನ್ನು ಹೊಂದಿರುವ ಬಗ್ಗೆ ಗಮನ ಸೆಳೆದು, ಪರಿಶೀಲನೆ ನಡೆಸಿ ಒಂದು ಸ್ಥಳದಲ್ಲಿ ಮಾತ್ರ ಮತದಾನದ ಹಕ್ಕು ಉಳಿಯುವಂತೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಆಯುಕ್ತರು, “ಉದ್ದೇಶಪೂರ್ವಕವಾಗಿ ಸುಳ್ಳು ಮಾಹಿತಿ ನೀಡಿ ಒಂದಕ್ಕಿಂತ ಹೆಚ್ಚು ಮತದಾರರ ಗುರುತಿನ ಚೀಟಿಗಳನ್ನು ಉಳಿಸಿಕೊಂಡರೆ ಜನಪ್ರತಿನಿಧಿಗಳ ಕಾಯ್ದೆಯ ಸೆಕ್ಷನ್ 31ರ ಅಡಿಯಲ್ಲಿ ಗರಿಷ್ಠ ಒಂದು ವರ್ಷದ ಜೈಲು ಶಿಕ್ಷೆ, ದಂಡ ಅಥವಾ ಎರಡನ್ನೂ ವಿಧಿಸಲು ಅವಕಾಶವಿದೆ” ಎಂದು ತಿಳಿಸಿದರು.
“ರಾಜಕೀಯ ಪಕ್ಷಗಳಿಂದ ನೇಮಕಗೊಂಡಿರುವ ಬಿಎಲ್ಎಗಳು ಪ್ರತಿದಿನದ ಮಾಹಿತಿ ನೀಡಲಿದ್ದು, ಬಿಎಲ್ಒಗಳು ಮನೆ ಸದಸ್ಯರು ಹಾಗೂ ಅಕ್ಕಪಕ್ಕದ ನಿವಾಸಿಗಳ ಸಮ್ಮುಖದಲ್ಲಿ ಸ್ಥಳ ಪರಿಶೀಲನೆ ನಡೆಸಿ ಮಹಜರ್ ವರದಿ ಸಿದ್ಧಪಡಿಸಲಿದ್ದಾರೆ” ಎಂದು ಹೇಳಿದರು.
ಯಾವುದೇ ಅರ್ಹ ಮತದಾರರ ಹೆಸರು ಕರಡು ಮತದಾರರ ಪಟ್ಟಿಯಿಂದ ಹೊರಗುಳಿಯದಂತೆ ಹಾಗೂ ಅನರ್ಹರು ಪಟ್ಟಿಗೆ ಸೇರ್ಪಡೆಯಾಗದಂತೆ ರಾಜಕೀಯ ಪಕ್ಷಗಳ ಬಿಎಲ್ಎಗಳು ಬಿಎಲ್ಒಗಳಿಗೆ ಸಹಕಾರ ನೀಡಬೇಕು ಎಂದು ಸಭೆಯಲ್ಲಿ ಮನವಿ ಮಾಡಲಾಯಿತು.
ನಗರ ಮತಕ್ಷೇತ್ರದಲ್ಲಿ ಒಟ್ಟು 285 ಮತಗಟ್ಟೆಗಳಿದ್ದು, ಅವುಗಳಲ್ಲಿ 72 ಮತಗಟ್ಟೆಗಳಲ್ಲಿ 1,200ಕ್ಕಿಂತ ಹೆಚ್ಚು ಮತದಾರರಿದ್ದಾರೆ. ಹೀಗಾಗಿ ಸಮೀಪದ ಮತಗಟ್ಟೆಗಳಿಗೆ ಮತದಾರರನ್ನು ವರ್ಗಾಯಿಸುವುದು ಹಾಗೂ ಅಗತ್ಯವಿದ್ದರೆ ಚುನಾವಣಾ ಆಯೋಗದ ನಿರ್ದೇಶನದಂತೆ ಹೆಚ್ಚುವರಿ ಮತಗಟ್ಟೆ ಸ್ಥಾಪಿಸಲು ಪ್ರಸ್ತಾವನೆ ಸಲ್ಲಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.




