16ನೇ ಹಣಕಾಸು ಆಯೋಗದ ಅನುದಾನವನ್ನು ಗ್ರಾಮಗಳ ಮೂಲಸೌಕರ್ಯ ಅಭಿವೃದ್ಧಿ ಹಾಗೂ ಜನರ ಅಗತ್ಯಗಳಿಗೆ ಅನುಗುಣವಾಗಿ ಪರಿಣಾಮಕಾರಿಯಾಗಿ ಬಳಸಲು, ವಿಜಯಪುರ ಜಿಲ್ಲೆಯ ಕೊಲ್ಹಾರ ತಾಲೂಕಿನ ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ ಗ್ರಾಮಸಭೆ ಹಾಗೂ ವಾರ್ಡ್ ಸಭೆಗಳನ್ನು ನಡೆಸಿ ಸಮಗ್ರ ಕ್ರಿಯಾ ಯೋಜನೆ ರೂಪಿಸಿ ಅನುಷ್ಠಾನಗೊಳಿಸಬೇಕು ಎಂದು ಗ್ರಾಮ ಸ್ವರಾಜ್ಯ ಕರ್ನಾಟಕ ಆಗ್ರಹಿಸಿದೆ.
ಈ ಕುರಿತು ರಾಜ್ಯ ಉಪಾಧ್ಯಕ್ಷ ಪ್ರದೀಪ ಚ. ಪಾಟೀಲ (ನಾಗರದಿನ್ನಿ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.
“ಗ್ರಾಮ ಪಂಚಾಯಿತಿಗಳಿಗೆ ಲಭ್ಯವಾಗುವ 16ನೇ ಹಣಕಾಸು ಆಯೋಗದ ಅನುದಾನದ ಬಳಕೆಯಲ್ಲಿ ಜನರ ಭಾಗವಹಿಸುವಿಕೆ ಹಾಗೂ ಪಾರದರ್ಶಕತೆ ಖಚಿತಪಡಿಸಿಕೊಳ್ಳಬೇಕು. ಗ್ರಾಮಸಭೆ ಮತ್ತು ವಾರ್ಡ್ ಸಭೆಗಳ ಮೂಲಕ ಸ್ಥಳೀಯ ಜನರ ಅಗತ್ಯಗಳು ಹಾಗೂ ಅಭಿವೃದ್ಧಿ ಆದ್ಯತೆಗಳನ್ನು ಗುರುತಿಸಿ, ಅವುಗಳ ಆಧಾರದ ಮೇಲೆ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸಮಗ್ರ ಕ್ರಿಯಾ ಯೋಜನೆ ಸಿದ್ಧಪಡಿಸಲು ಅಗತ್ಯ ನಿರ್ದೇಶನ ನೀಡಬೇಕು” ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಕ್ರಿಯಾ ಯೋಜನೆಯಲ್ಲಿ ಕುಡಿಯುವ ನೀರಿನ ಮೂಲಗಳ ಸಂರಕ್ಷಣೆ, ನೀರು ಪೂರೈಕೆ ವ್ಯವಸ್ಥೆ, ಕೆರೆ-ಹಳ್ಳ-ಕಾಲುವೆಗಳ ಸಂರಕ್ಷಣೆ ಮತ್ತು ಪುನರುಜ್ಜೀವನ, ಗ್ರಾಮಗಳ ಸ್ವಚ್ಛತೆ, ಘನ ಮತ್ತು ದ್ರವ ತ್ಯಾಜ್ಯ ನಿರ್ವಹಣೆ, ಚರಂಡಿ ಹಾಗೂ ಮಳೆನೀರು ಹರಿವಿನ ವ್ಯವಸ್ಥೆಗೆ ಆದ್ಯತೆ ನೀಡಬೇಕು ಎಂದು ತಿಳಿಸಲಾಗಿದೆ.
ಅಲ್ಲದೆ, ಸಾರ್ವಜನಿಕ ಸ್ಥಳಗಳು ಹಾಗೂ ಪಂಚಾಯಿತಿಯ ಆಸ್ತಿಗಳ ನಿರ್ವಹಣೆ, ಪರಿಸರ ಮತ್ತು ನೀರಿನ ಸಂರಕ್ಷಣಾ ಕಾಮಗಾರಿಗಳು ಸೇರಿದಂತೆ ಗ್ರಾಮಸಭೆಯಲ್ಲಿ ಜನರು ಸೂಚಿಸುವ ಸ್ಥಳೀಯ ಹಾಗೂ ತುರ್ತು ಅಗತ್ಯದ ಕಾಮಗಾರಿಗಳನ್ನು ಕ್ರಿಯಾ ಯೋಜನೆಯಲ್ಲಿ ಸೇರಿಸಬೇಕು ಎಂದು ಆಗ್ರಹಿಸಲಾಗಿದೆ.
ಕಾಮಗಾರಿಗಳ ಹೆಸರು, ಸ್ಥಳ, ಅಂದಾಜು ವೆಚ್ಚ, ಆದ್ಯತೆ, ಅನುಷ್ಠಾನದ ಅವಧಿ ಹಾಗೂ ನಿರೀಕ್ಷಿತ ಫಲಿತಾಂಶಗಳನ್ನು ಕ್ರಿಯಾ ಯೋಜನೆಯಲ್ಲಿ ಸ್ಪಷ್ಟವಾಗಿ ನಮೂದಿಸಬೇಕು. ಯೋಜನೆ ಮತ್ತು ವೆಚ್ಚದ ವಿವರಗಳನ್ನು ಗ್ರಾಮಸಭೆಯ ಮುಂದೆ ಮಂಡಿಸಿ ಸಾರ್ವಜನಿಕರಿಗೆ ಮಾಹಿತಿ ನೀಡುವ ಮೂಲಕ ಸಾಮಾಜಿಕ ಹೊಣೆಗಾರಿಕೆಯನ್ನು ಖಚಿತಪಡಿಸಿಕೊಳ್ಳಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
“ಜನರ ಹಣ–ಜನರ ಯೋಜನೆ–ಜನರ ಮೇಲ್ವಿಚಾರಣೆ” ಎಂಬ ಆಶಯದೊಂದಿಗೆ 16ನೇ ಹಣಕಾಸು ಆಯೋಗದ ಅನುದಾನವನ್ನು ಬಳಸಬೇಕು. ಕೋಲಾರ ತಾಲೂಕಿನ ಎಲ್ಲ ಗ್ರಾಮ ಪಂಚಾಯಿತಿಗಳಿಗೆ ಈ ಕುರಿತು ಅಗತ್ಯ ನಿರ್ದೇಶನ ನೀಡಿ, ಗ್ರಾಮಸಭೆ ಆಧಾರಿತ ಸಮಗ್ರ ಕ್ರಿಯಾ ಯೋಜನೆಗಳನ್ನು ಸಿದ್ಧಪಡಿಸಿ ಅನುಮೋದನೆ ಪಡೆದು ಅನುಷ್ಠಾನಗೊಳಿಸಲು ತುರ್ತು ಕ್ರಮ ಕೈಗೊಳ್ಳಬೇಕು ಎಂದು ಪ್ರದೀಪ ಪಾಟೀಲ ಮನವಿ ಮಾಡಿದ್ದಾರೆ.





