ಆ್ಯಪಲ್ ಕಂಪನಿಯು ತನ್ನ ನೂತನ ‘ಐಫೋನ್ 18 ಪ್ರೊ’ ಸರಣಿಯನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಈ ಹೊಸ ಸರಣಿಯ ಬಿಡುಗಡೆಯ ಬೆನ್ನಲ್ಲೇ, ಭಾರತದಲ್ಲಿ ತನ್ನ ಹಿಂದಿನ ಆವೃತ್ತಿಗಳಾದ ಐಫೋನ್ 16, ಐಫೋನ್ 17, ಐಫೋನ್ 17e ಹಾಗೂ ಐಫೋನ್ ಏರ್ ಸ್ಮಾರ್ಟ್‌ಫೋನ್‌ಗಳ ಬೆಲೆಯನ್ನು ಕಂಪನಿಯು ಗಣನೀಯವಾಗಿ ಹೆಚ್ಚಿಸಿದೆ. ಬೆಲೆ ಏರಿಕೆಯ ಈ ಹೊಸ ದರ ಪಟ್ಟಿಯು ಅಮೆರಿಕದ ಅಧಿಕೃತ ವೆಬ್‌ಸೈಟ್‌ನಲ್ಲೂ ಈಗಾಗಲೇ ಪ್ರತಿಫಲಿಸಿದೆ.
ಹೊಸ ದರಗಳ ಅನ್ವಯ, ಮೂಲ ಐಫೋನ್ 17ರ (256GB) ಆವೃತ್ತಿಯ ಬಿಡುಗಡೆ ಬೆಲೆ ₹82,900 ಇತ್ತು, ಇದೀಗ ಅದು ₹17,000 ಏರಿಕೆಯಾಗಿ ₹99,900ಕ್ಕೆ ತಲುಪಿದೆ. ಇದರ 512GB ಆವೃತ್ತಿಯ ಬೆಲೆ ಈಗ ₹1,24,900 ನಿಗಧಿಯಾಗಿದೆ. ಈ ಫೋನ್ ಮಿಸ್ಟ್ ಬ್ಲೂ, ಸೇಜ್, ಲ್ಯಾವೆಂಡರ್, ಕಪ್ಪು ಮತ್ತು ಬಿಳಿ ಸೇರಿದಂತೆ ಐದು ಬಣ್ಣಗಳಲ್ಲಿ ಲಭ್ಯವಿದೆ.
ಅದೇ ರೀತಿ, ಎಂಟ್ರಿ-ಲೆವೆಲ್ ಐಫೋನ್ 17e ಮಾದರಿಯ ಬೆಲೆ ₹15,000 ಹೆಚ್ಚಳ ಕಂಡು ₹64,900 ರಿಂದ ₹79,900ಕ್ಕೆ ಏರಿಕೆಯಾಗಿದೆ. ಹಳೆಯ ಐಫೋನ್ 16ರ ಬೆಲೆಯಲ್ಲಿ ₹10,000 ಹೆಚ್ಚಳವಾಗಿದ್ದು, ₹79,900 ರಿಂದ ₹89,900ಕ್ಕೆ ತಲುಪಿದೆ. ಗರಿಷ್ಠ ಬೆಲೆ ಏರಿಕೆಯು ಅಲ್ಟ್ರಾ-ಥಿನ್ ‘ಐಫೋನ್ ಏರ್’ ಮಾದರಿಯಲ್ಲಿ ಕಂಡುಬಂದಿದ್ದು, ಬರೋಬ್ಬರಿ ₹30,000 ದರ ಹೆಚ್ಚಳದೊಂದಿಗೆ ಅದರ ಆರಂಭಿಕ ಬೆಲೆ ₹1,19,900 ರಿಂದ ₹1,49,900ಕ್ಕೆ ಏರಿಕೆಯಾಗಿದೆ.
ಐಫೋನ್ 17 ಸ್ಮಾರ್ಟ್‌ಫೋನ್ 6.3-ಇಂಚಿನ ಡಿಸ್‌ಪ್ಲೇ ಹೊಂದಿದ್ದು, ಈ ಹಿಂದೆ ಕೇವಲ ಹೈ-ಎಂಡ್ ಪ್ರೊ-ಮಾದರಿಗಳಿಗೆ ಮಾತ್ರ ಸೀಮಿತವಾಗಿದ್ದ 120Hz ರಿಫ್ರೆಶ್ ರೇಟ್ ಅನ್ನು ಇದರಲ್ಲಿ ನೀಡಲಾಗಿದೆ. ಇದು 3,000 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಹಾಗೂ ಆಲ್‌ವೇಸ್-ಆನ್ ಡಿಸ್‌ಪ್ಲೇ ಸೌಲಭ್ಯವನ್ನು ಹೊಂದಿದೆ. ಗೀರುಗಳಿಂದ ರಕ್ಷಿಸಲು ‘ಸೆರಾಮಿಕ್ ಶೀಲ್ಡ್ 2’ ಗ್ಲಾಸ್ ಹಾಗೂ ಸೂರ್ಯನ ಬೆಳಕಿನ ಪ್ರಖರತೆ ತಡೆಯಲು ಆಂಟಿ-ರಿಫ್ಲೆಕ್ಟಿವ್ ಲೇಯರ್ ಅಳವಡಿಸಲಾಗಿದೆ.
ಮುಂಬರುವ ಕೃತಕ ಬುದ್ಧಿಮತ್ತೆ (AI) ಫೀಚರ್‌ಗಳನ್ನು ಬೆಂಬಲಿಸಲು ಹಾಗೂ ಅತ್ಯುತ್ತಮ ಗೇಮಿಂಗ್ ಅನುಭವ ನೀಡಲು ಇದರಲ್ಲಿ A19 SoC ಪ್ರೊಸೆಸರ್ ಬಳಸಲಾಗಿದೆ. ಕ್ಯಾಮೆರಾ ವಿಭಾಗದಲ್ಲಿ, ಹಿಂಭಾಗದಲ್ಲಿ ಆಪ್ಟಿಕಲ್ 2x ಟೆಲಿಫೋಟೊ ಕ್ರಾಪ್ ಜೊತೆಗೆ 48MP ಪ್ರೈಮರಿ ಸೆನ್ಸಾರ್ ಹಾಗೂ ಅತ್ಯಂತ ಸ್ಪಷ್ಟ ಚಿತ್ರಗಳನ್ನು ಸೆರೆಹಿಡಿಯುವ 48MP ಅಲ್ಟ್ರಾ-ವೈಡ್ ಕ್ಯಾಮೆರಾ ನೀಡಲಾಗಿದೆ. ಮುಂಭಾಗದಲ್ಲಿ 18MP ಚೌಕಾಕಾರದ ಕ್ಯಾಮೆರಾ ಅಳವಡಿಸಲಾಗಿದ್ದು, ಫೋನ್ ಅನ್ನು ಅಡ್ಡಲಾಗಿ ತಿರುಗಿಸದೆಯೇ ವೈಡ್ ಲ್ಯಾಂಡ್‌ಸ್ಕೇಪ್ ಭಾವಚಿತ್ರಗಳನ್ನು ತೆಗೆಯಬಹುದಾಗಿದೆ. ಜೊತೆಗೆ ವಿಡಿಯೊ ಕರೆಗಳಲ್ಲಿ ವ್ಯಕ್ತಿಯನ್ನು ಕೇಂದ್ರದಲ್ಲಿರಿಸುವ ‘ಸೆಂಟರ್ ಸ್ಟೇಜ್’ ಫೀಚರ್ ಸೇರ್ಪಡೆಯಾಗಿದೆ. ಐಫೋನ್ 16 ಗಿಂತ 8 ಗಂಟೆ ಹೆಚ್ಚಿನ, ಅಂದರೆ ಬರೋಬ್ಬರಿ 30 ಗಂಟೆಗಳ ವಿಡಿಯೊ ಪ್ಲೇಬ್ಯಾಕ್ ಸಾಮರ್ಥ್ಯವನ್ನು ಇದು ಹೊಂದಿದೆ ಎಂದು ಆ್ಯಪಲ್ ತಿಳಿಸಿದೆ.
ಅತ್ಯಾಧುನಿಕ ಐಫೋನ್ ಏರ್ ಮಾದರಿಯು 6.5-ಇಂಚಿನ ಸೂಪರ್ ರೆಟಿನಾ XDR OLED ಡಿಸ್‌ಪ್ಲೇ, 120Hz ಪ್ರೊಮೋಷನ್, ಆಲ್‌ವೇಸ್-ಆನ್, ಡೈನಾಮಿಕ್ ಐಲ್ಯಾಂಡ್ ಮತ್ತು 3,000 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಹೊಂದಿದೆ. ಇದು ಅತ್ಯಂತ ಪ್ರಬಲವಾದ A19 ಪ್ರೊ ಚಿಪ್‌ನಿಂದ ಕಾರ್ಯನಿರ್ವಹಿಸುತ್ತದೆ. ಹಿಂಭಾಗದಲ್ಲಿ 48MP ಫ್ಯೂಷನ್ ಕ್ಯಾಮೆರಾ ಮತ್ತು ಮುಂಭಾಗದಲ್ಲಿ 18MP ಸೆಂಟರ್ ಸ್ಟೇಜ್ ಕ್ಯಾಮೆರಾ ಒಳಗೊಂಡಿದೆ. 27 ಗಂಟೆಗಳ ವಿಡಿಯೊ ಪ್ಲೇಬ್ಯಾಕ್ ಸಾಮರ್ಥ್ಯದ ಬ್ಯಾಟರಿ ಇದರಲ್ಲಿದ್ದು, ವೇಗದ ಹಾಗೂ ವೈರ್‌ಲೆಸ್ ಚಾರ್ಜಿಂಗ್ ಸೌಲಭ್ಯವನ್ನು ಬೆಂಬಲಿಸುತ್ತದೆ.





