ವಿಜಯಪುರ ಜಿಲ್ಲೆಯ ಎಲ್ಲಾ ಗ್ರಾಮ ಸಭೆ ಹಾಗೂ ವಾರ್ಡ್ ಸಭೆಗಳಲ್ಲಿ ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ (ಎಸ್‌ಎಸ್‌ಆರ್) ಪ್ರಕ್ರಿಯೆಯನ್ನು ಚುನಾವಣಾ ಕೈಪಿಡಿಯ ನಿಯಮಾನುಸಾರ ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸುವಂತೆ ಮತ್ತು ಗ್ರಾಮ ಸಭೆ, ವಾರ್ಡ್ ಸಭೆಗಳಲ್ಲಿ ಮತದಾರರ ಪಟ್ಟಿಯ ಕಡ್ಡಾಯ ವಾಚನಕ್ಕೆ ಗ್ರಾಮ ಸ್ವರಾಜ್ ಕರ್ನಾಟಕ ರಾಜ್ಯ ಉಪಾಧ್ಯಕ್ಷ ಪ್ರದೀಪ್ ಸಿ. ಪಾಟೀಲ್ (ನಾಗರದಿನ್ನಿ) ಆಗ್ರಹಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, “ಚುನಾವಣಾ ಕೈಪಿಡಿಯ ನಿಯಮ 11.2.4(vi) ಪ್ರಕಾರ ಗ್ರಾಮ ಸಭೆ ಮತ್ತು ವಾರ್ಡ್ ಸಭೆಗಳಲ್ಲಿ ಮತದಾರರ ಪಟ್ಟಿಯನ್ನು ಸಾರ್ವಜನಿಕವಾಗಿ ಕಡ್ಡಾಯವಾಗಿ ಓದಿ ಕೇಳಿಸಬೇಕು. ಅಲ್ಲದೆ, ಈ ಕುರಿತು ನಡೆದ ಚರ್ಚೆಗಳು, ಸಲ್ಲಿಕೆಯಾದ ಆಕ್ಷೇಪಣೆಗಳು, ಸಲಹೆಗಳು ಹಾಗೂ ಕೈಗೊಂಡ ಕ್ರಮಗಳನ್ನು ಸಭೆಯ ನಡಾವಳಿ ಪುಸ್ತಕದಲ್ಲಿ ದಾಖಲಿಸುವುದು ಕಡ್ಡಾಯವಾಗಿದೆ. ಸಂಬಂಧಿತ ಅಧಿಕಾರಿಗಳು ಈ ನಿಯಮವನ್ನು ತಪ್ಪದೇ ಪಾಲಿಸಬೇಕು” ಎಂದು ಒತ್ತಾಯಿಸಿದ್ದಾರೆ.
ಮತದಾರರ ಪಟ್ಟಿಯು ಪ್ರಜಾಪ್ರಭುತ್ವದ ಮೂಲಾಧಾರವಾಗಿದ್ದು, ಪ್ರತಿಯೊಬ್ಬ ಅರ್ಹ ಮತದಾರರ ಹೆಸರು ಪಟ್ಟಿಯಲ್ಲಿ ಸರಿಯಾಗಿ ದಾಖಲಾಗಿರುವುದನ್ನು ಖಚಿತಪಡಿಸಿಕೊಳ್ಳುವುದು ಎಲ್ಲರ ಜವಾಬ್ದಾರಿಯಾಗಿದೆ ಎಂದು ತಿಳಿಸಿದ್ದಾರೆ.
ಗ್ರಾಮ ಪಂಚಾಯಿತಿಗಳು ಹಾಗೂ ಸಂಬಂಧಿತ ಚುನಾವಣಾ ಅಧಿಕಾರಿಗಳು ಗ್ರಾಮ ಸಭೆ ಮತ್ತು ವಾರ್ಡ್ ಸಭೆಗಳಲ್ಲಿ ನಿಯಮಾನುಸಾರ ಮತದಾರರ ಪಟ್ಟಿಯ ವಾಚನ ಮತ್ತು ದಾಖಲಾತಿ ಪ್ರಕ್ರಿಯೆ ನಡೆಸಬೇಕು ಎಂದು ಮನವಿ ಮಾಡಿದ್ದಾರೆ.
ಸಾರ್ವಜನಿಕರು ಗ್ರಾಮ ಸಭೆ ಮತ್ತು ವಾರ್ಡ್ ಸಭೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ತಮ್ಮ ಹೆಸರು ಹಾಗೂ ವಿವರಗಳನ್ನು ಪರಿಶೀಲಿಸಬೇಕು. ಯಾವುದೇ ಲೋಪ ಅಥವಾ ದೋಷ ಕಂಡುಬಂದಲ್ಲಿ ತಕ್ಷಣ ಸಂಬಂಧಿತ ಚುನಾವಣಾ ಅಧಿಕಾರಿಗಳ ಗಮನಕ್ಕೆ ತಂದು ತಿದ್ದುಪಡಿ ಮಾಡಿಸಿಕೊಳ್ಳುವಂತೆ ಪ್ರದೀಪ್ ಸಿ. ಪಾಟೀಲ್ ಕರೆ ನೀಡಿದ್ದಾರೆ.
“ಜಾಗೃತರಾಗೋಣ – ನಮ್ಮ ಮತದಾನದ ಹಕ್ಕನ್ನು ಪ್ರತಿಪಾದಿಸೋಣ” ಎಂಬ ಸಂದೇಶದೊಂದಿಗೆ ಸಾರ್ವಜನಿಕರಲ್ಲಿ ಮತದಾರರ ಪಟ್ಟಿಯ ಬಗ್ಗೆ ಜಾಗೃತಿ ಮೂಡಿಸುವಂತೆ ಅವರು ಮನವಿ ಮಾಡಿದ್ದಾರೆ.





