ಸಂಸತ್ತಿನ ಮುಂಗಾರು ಅಧಿವೇಶನದ 3ನೇ ದಿನವಾದ ಬುಧವಾರ (ಜುಲೈ 22), ವಿರೋಧ ಪಕ್ಷಗಳ ಸಂಸದರು ಕಪ್ಪು ಬಟ್ಟೆ ಧರಿಸಿ ಸಂಸತ್ತಿಗೆ ಆಗಮಿಸುವ ಮೂಲಕ ‘ಕಪ್ಪು ದಿನ’ ಎಂದು ಪ್ರತಿಭಟನೆ ನಡೆಸಿದರು. ನೀಟ್-ಯುಜಿ ಪರೀಕ್ಷಾ ಅಕ್ರಮ, ದೆಹಲಿಯಲ್ಲಿ ಸಿಜೆಪಿ ಪ್ರತಿಭಟನಾನಿರತ ವಿದ್ಯಾರ್ಥಿಗಳ ಮೇಲೆ ಪೊಲೀಸರು ನಡೆಸಿದ ದೌರ್ಜನ್ಯ, ಅಯೋಧ್ಯೆ ರಾಮಮಂದಿರದ ದೇಣಿಗೆ ಕಳವು ಹಾಗೂ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿದ್ದಾರೆ.
ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ನೇತೃತ್ವದಲ್ಲಿ ನಡೆದ ಈ ‘ಕಪ್ಪು ದಿನ’ದ ಪ್ರತಿಭಟನೆಯಲ್ಲಿ ತೃಣಮೂಲ ಕಾಂಗ್ರೆಸ್‌ನ ಮಹುವಾ ಮೊಯಿತ್ರಾ, ಸಮಾಜವಾದಿ ಪಕ್ಷದ ಅವಧೇಶ್ ಪ್ರಸಾದ್ ಸೇರಿದಂತೆ ಪ್ರಮುಖ ವಿಪಕ್ಷ ಸಂಸದರು ಭಾಗವಹಿಸಿದ್ದರು. ಅಧಿವೇಶನದ ಮೊದಲ ಎರಡು ದಿನಗಳೂ (ಸೋಮವಾರ ಮತ್ತು ಮಂಗಳವಾರ) ಇದೇ ವಿಚಾರಗಳ ಕುರಿತು ಉಂಟಾದ ಗದ್ದಲದಿಂದಾಗಿ ಯಾವುದೇ ಗಮನಾರ್ಹ ಕಲಾಪಗಳು ನಡೆಯದೆ ಲೋಕಸಭೆ ಮತ್ತು ರಾಜ್ಯಸಭೆ ದಿನವಿಡೀ ಮುಂದೂಡಲ್ಪಟ್ಟಿದ್ದವು.
ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಸತ್ತಿನಲ್ಲಿ ತಕ್ಷಣವೇ ಚರ್ಚೆ ನಡೆಸುವಂತೆ ಹಲವು ನಾಯಕರು ನೋಟಿಸ್‌ಗಳನ್ನು ನೀಡಿದ್ದಾರೆ. ಜುಲೈ 20 ರಂದು ದೆಹಲಿಯಲ್ಲಿ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳ ಮೇಲಿನ ದೌರ್ಜನ್ಯದ ಕುರಿತು ಚರ್ಚಿಸಲು ತೃಣಮೂಲ ಕಾಂಗ್ರೆಸ್‌ನ ಮುಖ್ಯ ವಿಪ್ ನದಿಮುಲ್ ಹಕ್ ಅವರು ರಾಜ್ಯಸಭೆಯಲ್ಲಿ ನಿಯಮ 267 ರ ಅಡಿಯಲ್ಲಿ ನೋಟಿಸ್ ಸಲ್ಲಿಸಿದ್ದಾರೆ. ಅಂತೆಯೇ ಕಾಂಗ್ರೆಸ್ ಸಂಸದ ಹಿಬಿ ಈಡನ್ ಲೋಕಸಭೆಯಲ್ಲಿ ನಿಲುವಳಿ ಸೂಚನೆ (Adjournment Motion) ನೀಡಿದ್ದಾರೆ.
ಇದೇ ವೇಳೆ, ಆಮ್ ಆದ್ಮಿ ಪಾರ್ಟಿಯ ಸಂಸದ ಸಂಜಯ್ ಸಿಂಗ್ ಅವರು ನೀಟ್ ಪ್ರಶ್ನೆಪತ್ರಿಕೆ ಸೋರಿಕೆ, ಸಾರ್ವಜನಿಕ ಪರೀಕ್ಷಾ ವ್ಯವಸ್ಥೆಯ ವೈಫಲ್ಯ, ವಿದ್ಯಾರ್ಥಿಗಳ ಮೇಲಿನ ಪೊಲೀಸ್ ಕ್ರಮ ಹಾಗೂ ಸೋನಮ್ ವಾಂಗ್‌ಚುಕ್ ಅವರ ಆರೋಗ್ಯ ಸ್ಥಿತಿಯ ಕುರಿತು ಚರ್ಚಿಸಲು ರಾಜ್ಯಸಭೆಯಲ್ಲಿ ಕಲಾಪ ತಡೆಹಿಡಿಯುವಂತೆ ನೋಟಿಸ್ ನೀಡಿದ್ದಾರೆ. ಇನ್ನು ಕಾಂಗ್ರೆಸ್ ಸಂಸದ ಸಪ್ತಗಿರಿ ಉಲಕಾ, ಪತ್ರಿಕೆ ಸೋರಿಕೆ ಮತ್ತು ರಾಮಮಂದಿರದ ದೇಣಿಗೆ ದುರುಪಯೋಗದ ಬಗ್ಗೆ ತಕ್ಷಣ ಚರ್ಚೆಯಾಗಬೇಕು ಎಂದು ಪಟ್ಟುಹಿಡಿದಿದ್ದಾರೆ.
ಘಟನೆಯನ್ನು ತೀವ್ರವಾಗಿ ಖಂಡಿಸಿರುವ ಕಾಂಗ್ರೆಸ್ ನಾಯಕ ಪವನ್ ಖೇರಾ, ವಿದ್ಯಾರ್ಥಿಗಳ ಮೇಲಿನ ದೌರ್ಜನ್ಯವನ್ನು ವಿರೋಧಿಸಿ ನಾಲ್ಕು ಪ್ರಮುಖ ಬೇಡಿಕೆಗಳನ್ನು ಮಂಡಿಸಿದ್ದಾರೆ. ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ತಮ್ಮ ಸ್ಥಾನಗಳಿಗೆ ತಕ್ಷಣ ರಾಜೀನಾಮೆ ನೀಡಬೇಕು ಎಂದು ಅವರು ಪ್ರಮುಖವಾಗಿ ಆಗ್ರಹಿಸಿದ್ದಾರೆ.





