ಭ್ರೂಣಲಿಂಗ ಹತ್ಯೆ ತಡೆಯುವಂತೆ ಆಗ್ರಹಿಸಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದಿಂದ ವಿಜಯಪುರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ರಾಜ್ಯ ಸಂಘಟನಾ ಕಾರ್ಯದರ್ಶಿ ಶಿವಾನಂದ ಯಡಳ್ಳಿ ಮಾತನಾಡಿ, “ಕಳೆದ ಎರಡ್ಮೂರು ದಿನಗಳ ಹಿಂದೆ ಮೈಸೂರು ಮತ್ತು ಮಂಡ್ಯ ಜಿಲ್ಲೆಗಳಲ್ಲಿ ಹೆಣ್ಣು ಭ್ರೂಣಲಿಂಗ ಪತ್ತೆ ಮತ್ತು ಹತ್ಯೆ ಜಾಲವನ್ನು ಭೇದಿಸುವಲ್ಲಿ ಯಶಸ್ವಿಯಾಗಿರುವ ಬೆಂಗಳೂರು ಪೊಲೀಸ್ ಅಧಿಕಾರಿಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ. ಕೇವಲ ಈ ಜಾಲ ದಕ್ಷಿಣ ಕರ್ನಾಟಕದಲ್ಲಿದೆ. ಉತ್ತರ ಕರ್ನಾಟಕದಲ್ಲಿಯೂ ಸಕ್ರಿಯವಾಗಿದೆ ಎಂಬ ವದಂತಿ ಇದೆ. ಅದರಲ್ಲೂ ವಿಜಯಪುರ ಜಿಲ್ಲೆಯಲ್ಲಿ ಖಾಸಗಿ ಆಸ್ಪತ್ರೆಗಳನ್ನು ನಡೆಸುತ್ತಿರುವ ರಾಜಕಾರಣಿಗಳು, ಉದ್ಯಮಿಗಳು, ಸರ್ಕಾರಿ ಅಧಿಕಾರಿಗಳ ಸಂಬಂಧಿಕರು ಆಸ್ಪತ್ರೆಗಳಲ್ಲಿ ಈ ರೀತಿಯ ಪ್ರಕರಣಗಳು ಯಥೇಚ್ಛವಾಗಿ ಇದ್ದರೂ ಕೂಡ ಜಿಲ್ಲಾ ಅಧಿಕಾರಿಗಳ ನಿರ್ಲಕ್ಷದಿಂದಾಗಿ ಯಾವುದೇ ರೀತಿಯ ಪ್ರಕರಣಗಳು ಬೆಳಕಿಗೆ ಬಂದಿಲ್ಲ. ಹಾಗಾಗಿ ಜಿಲ್ಲೆಯಲ್ಲಿ ಒಂದು ತನಿಖಾ ತಂಡ ರಚಿಸಿ ಹೆಣ್ಣು ಭ್ರೂಣ ಹತ್ಯೆ ಪ್ರಕರಣಗಳು ವಿಜಯಪುರ ಜಿಲ್ಲೆಯಲ್ಲಿ ನಡೆಯದಂತೆ ಸೂಕ್ತ ಕ್ರಮ ವಹಿಸಬೇಕು” ಎಂದು ಒತ್ತಾಯಿಸಿದರು.
“ಮೈಸೂರು ಮತ್ತು ಮಂಡ್ಯ ಜಿಲ್ಲೆಯಲ್ಲಿ ಬಂಧನಕ್ಕೆ ಒಳಗಾದ ಈ ಜಾಲದ ಆರೋಪಿಗಳು ಹೇಳುವಂತೆ ಪ್ರತಿ ತಿಂಗಳು 22 ರಿಂದ 25 ಗರ್ಭಪಾತಗಳನ್ನು ಮಾಡಿಸಿದ್ದಾರೆ. ಹಾಗೂ ಕಳೆದ ಎರಡು ವರ್ಷಗಳಲ್ಲಿ ಸುಮಾರು 900 ಭ್ರೂಣಹತ್ಯೆಯನ್ನು ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ. ಪಂಜಾಬ್ ಯೂನಿಯನ್ ಆಫ್ ಇಂಡಿಯಾ ಮತ್ತು ಇತರ ಸ್ವಯಂ ಸೇವಕ ಆರೋಗ್ಯ ಸಂಘದ ವಿಷಯದಲ್ಲಿ ಭಾರತ ಸರ್ವೋಚ್ಚ ನ್ಯಾಯಾಲಯವು ಈ ರೀತಿ ಹೇಳಿರುತ್ತದೆ. ಹೆಣ್ಣು ಭ್ರೂಣಹತ್ಯೆ ನಿಯಂತ್ರಣಕ್ಕೆ ಕಟ್ಟುನಿಟ್ಟಾದ ಕಾನೂನು ಅನುಷ್ಠಾನದಲ್ಲಿ ಉದಾಸೀನತೆ ತೋರುವುದು ಭಾರತದಲ್ಲಿ ಜಾರಿಯಲ್ಲಿದೆ” ಎಂದರು.
“ಜಿಲ್ಲಾ ಆರೋಗ್ಯ ಅಧಿಕಾರಿಗಳು ಈವರೆಗೂ ಯಾವುದೇ ಖಾಸಗಿ ಆಸ್ಪತ್ರೆಗಳಿಗೆ ಅನಿರೀಕ್ಷಿತ ಭೇಟಿ ನೀಡಿ ಈ ರೀತಿಯ ಸಮಸ್ಯೆಗಳನ್ನು ಪರೀಕ್ಷಿಸುವ ಗೋಜಿಗೆ ಹೋಗದಿರುವುದು ಅವರ ಕರ್ತವ್ಯಲೋಪಕ್ಕೆ ಕಾರಣವಾಗಿದೆ. ಆದ್ದರಿಂದ ಈ ವಿಷಯದಲ್ಲಿ ಮುಂಜಾಗ್ರತೆ ಕ್ರಮ ಕೈಗೊಳ್ಳಬೇಕು” ಎಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ಶಿವಮೊಗ್ಗ | ಭ್ರೂಣ ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿರುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಕ್ಕೆ ಆಗ್ರಹ
ಈ ಸಂದರ್ಭದಲ್ಲಿ ರಾಕೇಶ್ ಇಂಗಳಗಿ, ಹಮೀದ್ ಇನಮ್ದಾರ, ಮಾಳಪ್ಪ ಮಯೂರ್, ಶ್ರೀಶೈಲ್ ಮಠ, ಮಹೆಬೂಬ್ ತಾಂಬೋಳಿ, ರಾಘವೇಂದ್ರ ಛಲವಾದಿ, ಸುರೇಂದ್ರ ಕುನುಸಲೆ, ಕಾಂತು ಕಗ್ಗೋಡ, ಪ್ರಕಾಶ್ ದಂಡಿನ್ ಸೇರಿದಂತೆ ಇತರರು ಇದ್ದರು.