ಕೆನಡಾದಲ್ಲಿ ಇತ್ತೀಚೆಗೆ ನಡೆದ ಕಾಮನ್ವೆಲ್ತ್ ಕ್ರೀಡಾಕೂಟದ ಪವರ್ಲಿಫ್ಟಿಂಗ್ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆದ್ದು ದೇಶದ ಕೀರ್ತಿ ಹೆಚ್ಚಿಸಿದ ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ತಿಗಣಿ ಬಿದರಿ ಗ್ರಾಮದ ಕ್ರೀಡಾಪಟು ಸಚಿನ್ ತುಕಾರಾಮ ಸಾಳುಂಕೆ ಅವರನ್ನು ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಅವರು ಭಾನುವಾರ ವಿಜಯಪುರ ನಗರದಲ್ಲಿ ಆತ್ಮೀಯವಾಗಿ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಎಂ.ಬಿ. ಪಾಟೀಲ, “ಗ್ರಾಮೀಣ ಹಿನ್ನೆಲೆಯಿಂದ ಬಂದ ಸಚಿನ್ ಸಾಳುಂಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡುವ ಮೂಲಕ ದೇಶದ ಗೌರವ ಹೆಚ್ಚಿಸಿರುವುದರ ಜೊತೆಗೆ ವಿಜಯಪುರ ಜಿಲ್ಲೆ ಹಾಗೂ ಬಬಲೇಶ್ವರ ತಾಲೂಕಿನ ಕೀರ್ತಿಯನ್ನೂ ಹೆಚ್ಚಿಸಿದ್ದಾರೆ. ಇದು ಜಿಲ್ಲೆಯ ಪಾಲಿಗೆ ಹೆಮ್ಮೆಯ ಸಂಗತಿ” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
“ಸಚಿನ್ ಅವರ ಕುಟುಂಬ ಕೃಷಿಯನ್ನೇ ಅವಲಂಬಿಸಿದ್ದು, ತಂದೆ ಹಾಗೂ ಸಹೋದರ ಇಂದಿಗೂ ಹೊಲದಲ್ಲಿ ದುಡಿಯುತ್ತಿದ್ದಾರೆ. ಇಂತಹ ಗ್ರಾಮೀಣ ಪರಿಸರದಿಂದ ಬೆಳೆದು ಬಂದ ಯುವಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿರುವುದು ಇತರ ಯುವ ಕ್ರೀಡಾಪಟುಗಳಿಗೆ ಪ್ರೇರಣೆಯಾಗಿದೆ. ಸಚೀನ ಅವರಿಗೆ ಒಲಿಂಪಿಕ್ಸ್ನಲ್ಲಿಯೂ ಭಾಗವಹಿಸಿ ಚಿನ್ನದ ಪದಕ ಗೆಲ್ಲುವ ಸಾಮರ್ಥ್ಯವಿದೆ. ಅವರು ಮುಂದಿನ ದಿನಗಳಲ್ಲಿ ಇನ್ನಷ್ಟು ಎತ್ತರದ ಸಾಧನೆ ಮಾಡಲಿ” ಎಂದು ಆಶಿಸಿದರು.
ಸಚೀನ ಅವರು ತುಮಕೂರಿನ ಸಿದ್ದಗಂಗಾ ಮಠದಲ್ಲಿ ಶಿಕ್ಷಣ ಪಡೆದು, ನಂತರ ಮೂಡುಬಿದಿರೆಯ ಆಳ್ವಾಸ್ ಕಾಲೇಜಿನಲ್ಲಿ ಬಿ.ಎ. ಪದವಿ ಪಡೆಯುವ ಅವಧಿಯಲ್ಲಿಯೇ ಕ್ರೀಡಾ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಮಾಡಿದ್ದಾರೆ ಎಂದು ಸಚಿವರು ತಿಳಿಸಿದರು.
“ಟೊಯೋಟಾ ಮತ್ತು ಜಿಂದಾಲ್ನಂತಹ ಖಾಸಗಿ ಕಂಪನಿಗಳು ಕ್ರೀಡಾಪಟುಗಳಿಗೆ ಉದ್ಯೋಗಾವಕಾಶ ಕಲ್ಪಿಸುವುದರ ಜೊತೆಗೆ ತರಬೇತಿಗೂ ಪ್ರೋತ್ಸಾಹ ನೀಡುತ್ತವೆ. ಕ್ರೀಡಾಪಟುಗಳು ಇಂತಹ ಅವಕಾಶಗಳನ್ನು ಬಳಸಿಕೊಂಡು ತಮ್ಮ ಪ್ರತಿಭೆಯನ್ನು ಮತ್ತಷ್ಟು ಬೆಳೆಸಿಕೊಳ್ಳಬಹುದು ಎಂದು ಸಲಹೆ ನೀಡಿದ ಅವರು, ಸಚೀನ ಅವರು ತಮ್ಮ ಆಸಕ್ತಿಯ ಕ್ಷೇತ್ರದಲ್ಲಿ ನಿರಂತರ ಸಾಧನೆ ಮಾಡಲಿ” ಎಂದು ಶುಭ ಹಾರೈಸಿದರು.
ಮೂರು ವಿಭಾಗಗಳಲ್ಲಿ ಶಕ್ತಿ ಪ್ರದರ್ಶನ:
ಸಚೀನ ತುಕಾರಾಮ ಸಾಳುಂಕೆ ಅವರು ಕಾಮನ್ವೆಲ್ತ್ ಪವರ್ಲಿಫ್ಟಿಂಗ್ ಸ್ಪರ್ಧೆಯ 105 ಕೆ.ಜಿ. ಪುರುಷರ ವಿಭಾಗದಲ್ಲಿ ಸ್ಕ್ವಾಟ್ನಲ್ಲಿ 350 ಕೆ.ಜಿ., ಬೆಂಚ್ ಪ್ರೆಸ್ನಲ್ಲಿ 180 ಕೆ.ಜಿ. ಹಾಗೂ ಡೆಡ್ಲಿಫ್ಟ್ನಲ್ಲಿ 270 ಕೆ.ಜಿ. ತೂಕ ಎತ್ತುವ ಮೂಲಕ ಬೆಳ್ಳಿ ಪದಕ ತಮ್ಮದಾಗಿಸಿಕೊಂಡಿದ್ದಾರೆ.
ಕಳೆದ ಐದು ವರ್ಷಗಳಿಂದ ಬೆಂಗಳೂರೂ ಸೇರಿದಂತೆ ವಿವಿಧೆಡೆ ಪವರ್ಲಿಫ್ಟಿಂಗ್ ತರಬೇತಿ ಪಡೆಯುತ್ತಿರುವ ಸಚೀನ ಅವರ ಸಾಧನೆ ಗ್ರಾಮೀಣ ಯುವಜನರಲ್ಲಿ ಕ್ರೀಡಾಸಕ್ತಿಯನ್ನು ಹೆಚ್ಚಿಸುವ ನಿರೀಕ್ಷೆ ಮೂಡಿಸಿದೆ.
ಗ್ರಾಮೀಣ ಪ್ರತಿಭೆಗಳಿಗೆ ಸೂಕ್ತ ತರಬೇತಿ, ಪ್ರೋತ್ಸಾಹ ಹಾಗೂ ಅವಕಾಶಗಳು ದೊರೆತರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶವನ್ನು ಪ್ರತಿನಿಧಿಸಿ ಸಾಧನೆ ಮಾಡಲು ಸಾಧ್ಯ ಎಂಬುದಕ್ಕೆ ಸಚೀನ ಸಾಳುಂಕೆ ಅವರ ಯಶಸ್ಸು ಸಾಕ್ಷಿಯಾಗಿದೆ.





