ಹೈಕಮಾಂಡ್ ಶಿಸ್ತುಕ್ರಮ ಕೈಗೊಳ್ಳುವುದೇ ಆಗಿದ್ದರೆ ಈ ಹಿಂದೆ 2024ರ ಲೋಕಸಭಾ ಚುನಾವಣೆಯಲ್ಲಿ ದಿ. ಶಾಮನೂರ ಶಿವಶಂಕರಪ್ಪ ಅವರು, ʼಶಿವಮೊಗ್ಗ ಕ್ಷೇತ್ರದಲ್ಲಿ ಯಡಿಯೂರಪ್ಪ ಪುತ್ರ ರಾಘವೇಂದ್ರಗೆ ಮತ ಹಾಕಿʼ ಎಂದು ಭಾಷಣ ಮಾಡಿದ್ದರು. ಅವರ ಮೇಲೆ ಯಾಕೆ ಕ್ರಮ ಕೈಗೊಳ್ಳಲಿಲ್ಲ ಎಂದು ಮೌಲಾನ ರಿಜ್ವಾನ್ ಸೈಯದ್ ಕಾಂಗ್ರೆಸ್ ಹೈಕಮಾಂಡಿಗೆ ಪ್ರಶ್ನಿಸಿದರು.
ವಿಜಯಪುರ ನಗರದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು “ಪ್ರತಿ ಚುನಾವಣೆಯಲ್ಲೂ ಮುಸ್ಲಿಂ ಸಮಾಜ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿಕೊಂಡು ಬಂದಿದ್ದರೂ ಕೂಡ ಕಾಂಗ್ರೆಸ್ ಪಕ್ಷ ಮುಸ್ಲಿಂ ಸಮಾಜದವರನ್ನು ಕಡೆಗಣಿಸುತ್ತಿದೆ” ಎಂದು ಟೀಕಿಸಿದರು.
ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲು ಮುಸ್ಲಿಂ ಸಮಾಜದ ಅತಿ ದೊಡ್ಡ ಕೊಡುಗೆ ಇದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಮೂರು ವರ್ಷ ಕಳೆದರೂ ಚುನಾವಣೆ ಪೂರ್ವದಲ್ಲಿ ಮುಸ್ಲಿಂ ಸಮುದಾಯಕ್ಕೆ ನೀಡಿದ ಭರವಸೆಗಳನ್ನು ಈವರೆಗೆ ಈಡೇರಿಸಿಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
“ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಅಲ್ಪಸಂಖ್ಯಾತ ಅಭ್ಯರ್ಥಿಗೆ ಟಿಕೆಟ್ ನೀಡುವಂತೆ ಉಲೆಮಾ ನಿಯೋಗದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿ ಒತ್ತಾಯಿಸಲಾಗಿತ್ತು. 2023ರ ಚುನಾವಣೆಯಲ್ಲಿ ದಿ. ಶಾಮನೂರು ಶಿವಶಂಕರಪ್ಪ ನೀಡಿದ ಭರವಸೆಯನ್ನು ಅವರ ಗಮನಕ್ಕೆ ತರಲಾಗಿತ್ತಾದರೂ ಅವರ ಕುಟುಂಬದ ಸದಸ್ಯರಿಗೆ ಟಿಕೆಟ್ ನೀಡಿ ನಮ್ಮ ಸಮುದಾಯಕ್ಕೆ ಮೋಸ ಮಾಡಲಾಗಿದೆ” ಎಂದು ಆರೋಪಿಸಿದರು.
ಇದನ್ನೂ ಓದಿದ್ದೀರಾ? ಚಿಕ್ಕಬಳ್ಳಾಪುರ | 3 ಕೋಟಿಯಲ್ಲಿ ಚಿಂತಾಮಣಿ ಸಿಂಗಾಪುರ ಮಾಡಲಾಗಲ್ಲ: ನಿಮ್ಮ ಕ್ಷೇತ್ರಕ್ಕೆ ನೂರಾರುಕೋಟಿ ಅನುದಾನ ಕೊಟ್ಟಿದ್ದಾರೆ.
“ಮುಸ್ಲಿಮರ ಮೀಸಲಾತಿ, ಶಾಲಾ-ಕಾಲೇಜುಗಳಲ್ಲಿ ಹಿಜಾಬ್ ಧರಿಸುವುದು ಸೇರಿದಂತೆ ಮುಸ್ಲಿಂ ಸಮುದಾಯದ ಸಮಸ್ಯೆಗಳನ್ನು ಪರಿಹರಿಸಲು ಕಾಂಗ್ರೆಸ್ ಸರ್ಕಾರ ಮುಸ್ಲಿಮರನ್ನು ಕಡೆಗಣಿಸಿದೆ. ಅಲ್ಲದೆ, ಈಗ ಶಿಸ್ತು ಕ್ರಮದ ಹೆಸರಿನಲ್ಲಿ ಮುಸ್ಲಿಂ ನಾಯಕರನ್ನೂ ಅವಮಾನಿಸುತ್ತಿದೆ” ಎಂದು ಬೇಸರ ವ್ಯಕ್ತಪಡಿಸಿದರು.
ಉಲೆಮಗಳಾದ ಮಹಮ್ಮದ್ ಯುಸುಫ್ ಕಾಜಿ, ಮಹಮ್ಮದ್ ಇಕ್ಬಾಲ್ ನದಾಫ್, ಮೌಲಾನ ಶಾಫಿ ಉಲ್ಲಾ ಮುಫ್ತಿ ಇದ್ದರು.





