ಜಮ್ಮು ಮತ್ತು ಕಾಶ್ಮೀರದಲ್ಲಿ ಸಕ್ರಿಯರಾಗಿರುವ ಗೋರಕ್ಷಕರು ಮುಸ್ಲಿಮರನ್ನು ಪೀಡಿಸುವ ಭಯೋತ್ಪಾದಕರು ಎಂದು ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (PDP) ನಾಯಕಿ ಇಲ್ತಿಜಾ ಮುಫ್ತಿ ಆರೋಪಿಸಿದ್ದಾರೆ. ಜತೆಗೆ ದನಗಳನ್ನು ಸಾಗಿಸುತ್ತಿದ್ದಾಗ ಹಲ್ಲೆಗೆ ಒಳಗಾಗಿದ್ದ 18 ವರ್ಷದ ಯುವಕನ ಕುಟುಂಬಕ್ಕೆ ನ್ಯಾಯ ಒದಗಿಸಬೇಕೆಂದು ಅವರು ಒತ್ತಾಯಿಸಿದ್ದಾರೆ.
ಜಮ್ಮು & ಕಾಶ್ಮೀರದ ರಂಬಾನ್ ಜಿಲ್ಲೆಯ ಪೋಗಲ್ ಗ್ರಾಮದಲ್ಲಿ ಮೃತ ಯುವಕನ ಕುಟುಂಬವನ್ನು ಭೇಟಿ ಮಾಡಿದ ಮುಫ್ತಿ, ಬಳಿಕ ಸುದ್ದಿಗಾರರೊಂದಿಗೆ ಮಾತನಾಡುತ್ತಾ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಏನಿದು ಘಟನೆ: ಏಪ್ರಿಲ್ 12 ರಂದು ರಂಬಾನ್ ನಿವಾಸಿ ತನ್ವೀರ್ ಅಹ್ಮದ್ ಚೋಪನ್ ಎಂಬ ಯುವಕ ಜಮ್ಮುವಿನಿಂದ ಒಂದು ಹಾಲು ನೀಡುವ ಹಸು ಮತ್ತು ಎರಡು ಕರುಗಳನ್ನು ವಾಹನದಲ್ಲಿ ಕರೆತರುತ್ತಿದ್ದನು. ಈ ವೇಳೆ ಜಮ್ಮು-ರಂಬಾನ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರಿನಲ್ಲಿ ಬಂದ ಗೋರಕ್ಷಕರು ಆತನನ್ನು ಬೆನ್ನಟ್ಟಿದ್ದಾರೆ. ದಾಳಿಯಿಂದ ಪಾರಾಗಲು ಯುವಕ ಪಕ್ಕದಲ್ಲಿದ್ದ ಬಿಸ್ಲಾರಿ ನಾಲಾಕ್ಕೆ (ಹಳ್ಳ) ಜಿಗಿದಿದ್ದನು ಎನ್ನಲಾಗಿದೆ. ಈವರೆಗೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ.
ಇದನ್ನೂ ಓದಿ: ಮಣಿಪುರ ಹಿಂಸಾಚಾರ: 2023ರಿಂದ ಈವರೆಗೆ 58,800ಕ್ಕೂ ಅಧಿಕ ಮಂದಿ ಸ್ಥಳಾಂತರ
“ಇದು ಅತ್ಯಂತ ಗಂಭೀರವಾದ ಘಟನೆಯಾಗಿದ್ದು, ಗೋರಕ್ಷಕರೆಂದು ಕರೆಸಿಕೊಳ್ಳುವವರು ಮುಸ್ಲಿ ಯುವಕರನ್ನು ಗುರಿಯಾಗಿಸಿಕೊಂಡಿದ್ದಾರೆ. ಇಂತಹ ಗೋರಕ್ಷಕರು ಭಯೋತ್ಪಾದಕರು, ಇವರು ಕೇವಲ ಮುಸ್ಲಿಮರನ್ನು ಪೀಡಿಸುವ ಕೆಲಸ ಮಾಡುತ್ತಿದ್ದಾರೆ. ಪೊಲೀಸರು ಇವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು” ಎಂದು ಇಲ್ತಿಜಾ ಮುಫ್ತಿ ಆಗ್ರಹಿಸಿದರು.
ನದಿಗೆ ಜಿಗಿದ ಯುವಕನ ಮೃತದೇಹವನ್ನು ಪತ್ತೆಹಚ್ಚಿ ಕುಟುಂಬಕ್ಕೆ ಹಸ್ತಾಂತರಿಸಬೇಕು. ಈ ಇಡೀ ಘಟನೆಯ ಬಗ್ಗೆ ಸಮಗ್ರ ತನಿಖೆಯಾಗಬೇಕು ಎಂದು ಅವರು ಒತ್ತಾಯಿಸಿದ್ದಾರೆ.





