ಗ್ರಾಮ ಪಂಚಾಯಿತಿ ನೌಕರರ 19 ಬೇಡಿಕೆಗಳ ಪೈಕಿ ಸರ್ಕಾರದ ಹಂತದಲ್ಲಿರುವ ಬೇಡಿಕೆಗಳನ್ನು ಹೊರತುಪಡಿಸಿ ಪ್ರಮುಖವಾಗಿರುವ 7 ಬೇಡಿಕೆಗಳನ್ನು ಈಡೇರಿಸಿ ಆದೇಶ ನೀಡುವುದಾಗಿ ಮೂರು ತಿಂಗಳ ಹಿಂದೆಯೇ ಭರವಸೆ ನೀಡಿತ್ತು. ಈ 3 ತಿಂಗಳಲ್ಲಿ ಎರಡರಿಂದ ಮೂರು ಬಾರಿ ಮಾತುಕತೆ ನಡೆಸಿದ್ದರೂ ಸರ್ಕಾರದ ಭರವಸೆ ಸಾಕಾರವಾಗಿಲ್ಲ. ಈವರೆಗೆ ಒಂದೇ ಒಂದು ಬೇಡಿಕೆಯೂ ಈಡೇರದಿರುವುದು ವಿಷಾದನೀಯ ಎಂದು ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘ ವಿಜಯಪುರ ಜಿಲ್ಲಾಧ್ಯಕ್ಷ ನಾರಾಯಣ ಬಡಿಗೇರ ಅಸಮಧಾನ ವ್ಯಕ್ತಪಡಿಸಿದ್ದಾರೆ.
ವಿಜಯಪುರದ ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ನೌಕರ ಸಂಘ, ಸಿಐಟಿಯು ಜಿಲ್ಲಾ ಸಮಿತಿಯಿಂದ ಬೃಹತ್ ಪ್ರತಿಭಟನಾ ಮೆರವಣಿಗೆ ಮುಖಾಂತರ ಗ್ರಾಮ ಪಂಚಾಯಿತಿ ನೌಕರರ ಬೇಡಿಕೆಗಳನ್ನು ಇತ್ಯರ್ಥಪಡಿಸಲು ಆಗ್ರಹಿಸಿ ಜಿಲ್ಲಾ ಪಂಚಾಯತ್ ಕಾರ್ಯದರ್ಶಿ ಪ್ರಕಾಶ್ ವಡ್ಡರ ಅವರ ಮೂಲ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗೆ ಮನವಿ ಸಲ್ಲಿಸಿ ಮತನಾಡಿದರು.
“ನೌಕರರ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕಳೆದ 2025ರ ಡಿಸೆಂಬರ್ 20ರಿಂದ ಮೂರು ದಿನ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಧರಣಿ ಸತ್ಯಾಗ್ರಹ ನಡೆಸಿ ಗ್ರಾಮ ಪಂಚಾಯಿತಿ ನೌಕರರು ಸರ್ಕಾರದ ಚಿತ್ತವನ್ನು ಸಮಸ್ಯೆಯತ್ತ ಸೆಳೆದಿದ್ದರು. ಮರುದಿನ ಧರಣಿ ಸತ್ಯಾಗ್ರಹದ ಸ್ಥಳಕ್ಕೆ ಬಂದು ಪಂಚಾಯತ್ ನೌಕರರ ಬೇಡಿಕೆಗಳ ಕುರಿತು ಚರ್ಚಿಸಿ, ಡಿ.22ರಂದು ಸಂಘಟನೆಯ ಮುಖಂಡರ ಸಭೆ ಕರೆದು ಮೂರು ಗಂಟೆಗಳ ಕಾಲ ಸುದೀರ್ಘವಾದ ಸಭೆ ನಡೆಸಿದ್ದರು” ಎಂದು ಂನವರಿಕೆ ಮಾಡಿದರು.
“ಸರ್ಕಾರದ ಹಂತದಲ್ಲಿರುವ(ಪಾಲಿಸಿ ಮ್ಯಾಟರ್) ಬೇಡಿಕೆಗಳ ಕುರಿತು ಸಚಿವರ ಜತೆ ಸಭೆ ನಡೆಸಿ ಅವರಿಗೆ ಮನವರಿಕೆ ಮಾಡಿಕೊಡಲಾಗುವುದು. ಉಳಿದಂತೆ ನಮ್ಮ ಹಂತದಲ್ಲಿರುವ ಪ್ರಮುಖ ಬೇಡಿಕೆಗಳನ್ನು ಕೂಡಲೇ ಇತ್ಯರ್ಥಪಡಿಸಿ ಆದೇಶ ನೀಡಲಾಗುವುದೆಂದು ಚರ್ಚೆ ಮಾಡಿ ನಂತರ ಧರಣಿನಿರತ ಸ್ಥಳಕ್ಕೆ ಬಂದು ಭರವಸೆಯನ್ನು ಕೊಟ್ಟಿದ್ದರಿಂದ ನಮ್ಮ ಧರಣಿ ಕಾರ್ಯಕ್ರಮವನ್ನು ವಾಪಸ್ ಪಡೆದುಕೊಂಡಿದ್ದೆವು. ಭರವಸೆ ಕೊಟ್ಟು 3 ತಿಂಗಳು ಕಳೆದಿವೆ. ಹಲವು ಬಾರಿ ಮಾತುಕತೆ ನಡೆದಿದೆ. ಆದರೂ ಒಂದೇ ಒಂದು ಬೇಡಿಕೆ ಈಡೇರದಿರುವುದು ವಿಷಾದನೀಯ” ಎಂದು ಅಸಮಧಾನ ವ್ಯಕ್ತಪಡಿಸದರು.
“ರಾಜ್ಯದ್ಯಂತ ಪಂಚಾಯಿತಿ ನೌಕರರು ಅಸಮಾಧಾನಗೊಂಡು ಇಲಾಖೆಯ ವಿಳಂಬ ನೀತಿಯ ವಿರುದ್ಧ ಪ್ರತಿಭಟಿಸುತ್ತಿದ್ದು, ಈ ಮನವಿಗೂ ಸ್ಪಂದಿಸದಿದ್ದರೆ ಹೋರಾಟದ ತೀವ್ರತೆ ದುಪ್ಪಟ್ಟಾಗಲಿದ್ದು, ಬೆಂಗಳೂರು ಚಲೋ ಕಾರ್ಯಕ್ರಮ ಆಯೋಜಿಸುತ್ತೇವೆ” ಎಂದು ಎಚ್ಚರಿಕೆ ನೀಡಿದರು.
“ಹೋರಾಟದ ಸಂದರ್ಭದಲ್ಲಿ ಏನಾದರೂ ಅನಾಹುತಗಳು ಸಂಭವಿಸಿದರೆ ಅದರ ಹೊಣೆಯನ್ನು ಆರ್ಡಿಪಿಆರ್ ಇಲಾಖೆಯೇ ಹೊರಬೇಕಾಗುತ್ತದೆ. ದಯವಿಟ್ಟು ಇದಕ್ಕೆಲ್ಲ ಆಸ್ಪದ ನೀಡದೆ ಕೂಡಲೇ ತಾವು ಒಪ್ಪಿಕೊಂಡ ಪ್ರಮುಖ ಬೇಡಿಕೆಗಳನ್ನು ಈಡೇರಿಸಿ ಆದೇಶ ಹೊರಡಿಸಬೇಕು” ಎಂದು ಆಗ್ರಹಿಸಿದರು.
ಪ್ರಧಾನ ಕಾರ್ಯದರ್ಶಿ ಲಾಲ್ ಆಹ್ಮದ್ ಶೇಖ್ ಮತ್ತು ಸಿಐಟಿಯು ಜಿಲ್ಲಾ ಸಂಚಾಲಕ ಲಕ್ಷಣ ಹಂದ್ರಾಳ ಮಾತನಾಡಿ, “ಈ ಹಿಂದೆ ಒಪ್ಪಿಕೊಂಡಿರುವ ಪ್ರಕಾರ ತಲಾ ₹5000 ವೇತನ ಹೆಚ್ಚಳ ಮಾಡಿ, ಇಲಾಖೆಯಿಂದ ಆದೇಶ ಹೊರಡಿಸಬೇಕು. ನೌಕರರು ನಿವೃತ್ತಿ ಹೊಂದಿದವರಿಗೆ ಹಾಗೂ ನಿಧನ ಹೊಂದಿದವರಿಗೆ ₹6 ಲಕ್ಷ ಇಡುಗಂಟು ನೀಡಬೇಕು. ಸೇವಾ ಹಿರಿತನದ ಆಧಾರದಲ್ಲಿ ವೇತನ ನೀಡಬೇಕು. ಭರವಸೆಯ ಭಾಗವಾಗಿ ಸ್ವಚ್ಛವಾಹಿನಿ ನೌಕರರ ಸಭೆ ಮಾಡಿ ಅವರ ಪ್ರಮುಖ ಬೇಡಿಕೆಗಳನ್ನು ಇತ್ಯರ್ಥಪಡಿಸಬೇಕು” ಎಂದು ಒತ್ತಾಯಿಸಿದರು.
ಇದನ್ನೂ ಓದಿ>ವಿಜಯಪುರ | ಸರ್ವ ಜನಾಂಗದ ಸಮಾನತೆಗೆ ಶ್ರಮಿಸಿದವರು ಅಂಬೇಡ್ಕರ್: ಡಾ.ಬಾಬುರಾಜೇಂದ್ರ ನಾಯಕ್
“ಪ್ರತಿಯೊಂದು ಪಂಚಾಯಿತಿಗೆ ದ್ವಿತೀಯ ದರ್ಜೆ ಲೆಕ್ಕ ಸಹಾಯಕ ಹುದ್ದೆಗಳನ್ನು ತುಂಬುವುದು ಮತ್ತು ಕಳೆದ 18-20 ವರ್ಷಗಳಿಂದ ಡೇಟಾ ಎಂಟ್ರಿ ಆಪರೇಟರ್ಗಳಾಗಿ ಕೆಲಸ ನಿರ್ವಹಿಸುತ್ತಿರುವ ನೌಕರರಿಗೆ ಅನುಮೋದನೆ ನೀಡಬೇಕು. 2ನೇ ಡೇಟಾ ಎಂಟ್ರಿ ಆಪರೇಟರ್ ನೇಮಕಾತಿ ಆಗಬೇಕು. ಆರೋಗ್ಯದ ಕುರಿತು ಸಿಬ್ಬಂದಿಗಳ ಮಾಹಿತಿಗಾಗಿ ಫಾರ್ಮೆಟ್ ಕಳುಹಿಸಿದ್ದು, ಅದರಲ್ಲಿ ಗುತ್ತಿಗೆ, ಹೊರಗುತ್ತಿಗೆ, ಗೌರವಧನದ, ಕಾರ್ಮಿಕರ ಮಾಹಿತಿ ನೀಡಲು ತಿಳಿಸಿದ್ದೀರಿ. ಆದರೆ ಈ ಫಾರ್ಮೆಟ್ನಲ್ಲಿ ಗ್ರಾಮ ಪಂಚಾಯಿತಿ ನೌಕರರೆಂದು ಮಾಹಿತಿ ಇಲ್ಲ. ಇದನ್ನು ಸರಿಪಡಿಸಿ ಕೂಡಲೇ ಕ್ರಮ ಕೈಗೊಳ್ಳಬೇಕು” ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಖಜಾಂಚಿ ಪಿಂಟೊ ಕೊಂಡಗೊಳಿ ಜಿಲ್ಲಾ ಮುಖಂಡರಾದ ಚಂದ್ರಶೇಖರ ವಾಲಿಕಾರ, ಶಿವಾನಂದ ಬಿರಾದಾರ, ಜಮೀರ್ ನದಾಫ, ಸಿದ್ದಯ್ಯ ಮತ, ಸಿದ್ದಾರಾಮ ಹಳ್ಳಿ, ಚಾಂದಸಾಬ ಆಡಾಡಿ, ಅಂಬಾಜಿ ಬಾವೂರ, ಶಿವಾನಂದ ಅಣಮಿ, ಮಲ್ಲಿಕಾರ್ಜುನ ಮಾದರ, ಸಂಗಪ್ಪ ಗಂಗಶೆಟ್ಟಿ, ಭೀಮನು ಲಮಾಣಿ, ಲಕ್ಷಣ ಪಾಟೀಲ, ಯಲ್ಲಪ್ಪ ಹಕೈನವರ, ಶಂಕರ್ ಮಾಡಗಿ, ಹೂವಣ್ಣ ಪೂಜಾರಿ, ಬಸವರಾಜ ಜೊಲ್ಲೆ, ಬಾಪು ಟಕ್ಕಳಕಿ ಸೇರಿದಂತೆ ಇತರರು ಇದ್ದರು.





