ಕ್ರೀಡೆ, ಪಾರಂಪರಿಕ ಕ್ಷೇತ್ರ, ಸ್ವಚ್ಛತೆ ಹಾಗೂ ಪರಿಸರ ಸಂರಕ್ಷಣೆಯಲ್ಲಿ ಗಮನಾರ್ಹ ಸೇವೆ ಸಲ್ಲಿಸುತ್ತಿರುವ ಸಾಧಕರನ್ನು ವೃಕ್ಷಥಾನ್ ಹೆರಿಟೇಜ್ ರನ್ 2026 ವೇದಿಕೆಯಲ್ಲಿ ಗೌರವಿಸಲಾಗುವುದು ಎಂದು ಸಚಿವ ಎಂ.ಬಿ. ಪಾಟೀಲ ಘೋಷಿಸಿದ್ದಾರೆ.
ವಿಜಯಪುರ ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಸಾಧಕರ ಹೆಸರುಗಳನ್ನು ಪ್ರಕಟಿಸಲಾಯಿತು.
ಕ್ರೀಡಾ ಕ್ಷೇತ್ರದಲ್ಲಿ ಗ್ರಾಮೀಣ ಮಕ್ಕಳಿಗೆ ಸೈಕ್ಲಿಂಗ್ ತರಬೇತಿ ನೀಡುತ್ತಿರುವ ಕೊಲ್ಹಾರದ 80 ವರ್ಷದ ದುಂಡಪ್ಪ ಅಥಣಿ, ವಿಜಯಪುರದ ಇತಿಹಾಸವನ್ನು ಪ್ರವಾಸಿಗರಿಗೆ ಪರಿಚಯಿಸುತ್ತಿರುವ 30 ವರ್ಷಗಳ ಅನುಭವದ ಮಾರ್ಗದರ್ಶಕ ರಮೇಶ ಹಣಮಂತ ಚವ್ಹಾಣ, ಸಾರ್ವಜನಿಕ ಸ್ಥಳಗಳ ಸ್ವಚ್ಛತೆ ಹಾಗೂ ಜಾಗೃತಿಯಲ್ಲಿ ತೊಡಗಿರುವ ಗಾನಯೋಗಿ ಸಂಘ ಮತ್ತು ಪರಿಸರ ಸಂರಕ್ಷಣೆಯಲ್ಲಿ ಶ್ರಮಿಸುತ್ತಿರುವ ‘ನನ್ನ ಗಿಡ, ನನ್ನ ಭೂಮಿ’ ತಂಡಕ್ಕೆ ಗೌರವ ಸಲ್ಲಿಸಲಾಗುತ್ತದೆ.
ಸುಮಾರು 3,500 ಕಿ.ಮೀ. ದೂರವನ್ನು 23 ದಿನಗಳಲ್ಲಿ ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಸೈಕಲ್ ಯಾತ್ರೆ ನಡೆಸಿ ‘ಸುರಕ್ಷಿತ ಭಾರತಕ್ಕಾಗಿ ವಿಜ್ಞಾನ’ ಎಂಬ ಸಂದೇಶ ಸಾರಿದ ಉದ್ಯಮಿ ಸಾತವೀರ್ ರೊಟ್ಟಿ ಹಾಗೂ ಅವರ ಪುತ್ರರಾದ ಸುಮಂತ್ ಮತ್ತು ವಿನಯ್ ಅವರ ಕುಟುಂಬಕ್ಕೂ ವಿಶೇಷ ಸಾಧಕ ಗೌರವ ನೀಡಲಾಗುತ್ತದೆ.
ಸುಮಾರು 150 ಸದಸ್ಯರನ್ನು ಹೊಂದಿರುವ ‘ನನ್ನ ಗಿಡ, ನನ್ನ ಭೂಮಿ’ ತಂಡ ನಗರದಲ್ಲಿ ಸಸಿಗಳನ್ನು ನೆಟ್ಟು ಪೋಷಿಸುವ ಕಾರ್ಯದಲ್ಲಿ ತೊಡಗಿದ್ದರೆ, ಗಾನಯೋಗಿ ಸಂಘ ಸ್ವಚ್ಛತೆಯೊಂದಿಗೆ ಶಾಲಾ ಮಕ್ಕಳಲ್ಲಿ ಓದುವ ಹವ್ಯಾಸ ಬೆಳೆಸುವ ಕಾರ್ಯವನ್ನೂ ಮಾಡುತ್ತಿದೆ.
ಸಭೆಯಲ್ಲಿ ಜಿಲ್ಲಾಧಿಕಾರಿ ಆನಂದ್ ಕೆ., ಜಿಲ್ಲಾ ಪಂಚಾಯಿತಿ ಸಿಇಒ ಆನಂದ ಪ್ರಕಾಶ ಮೀನಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.





